ADVERTISEMENT

ಕೆರೆ ಉಳಿದಿದ್ದರೆ ಕಾವೇರಿ ನೀರಿನ ಅಗತ್ಯ ಇರಲಿಲ್ಲ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 9:06 IST
Last Updated 21 ಆಗಸ್ಟ್ 2017, 9:06 IST
ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಭಾನುವಾರ ಕೆಂಪೇಗೌಡ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಮಾಲಿ ಮದ್ದಣ್ಣ, ವಿಶ್ವೇಶ್ವರಯ್ಯ, ಜಲನಿಗಮದ ಜಂಟಿ ನಿರ್ದೇಶಕ ಜಯಪ್ರಕಾಶ್, ಡಾ.ಮುದ್ದರಂಗಪ್ಪ, ವ್ಯಂಗ್ಯ ಚಿತ್ರಕಾರ ಬಿ.ಜಿ.ಗುಜ್ಜಾರ್ ರವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಭಾನುವಾರ ಕೆಂಪೇಗೌಡ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಮಾಲಿ ಮದ್ದಣ್ಣ, ವಿಶ್ವೇಶ್ವರಯ್ಯ, ಜಲನಿಗಮದ ಜಂಟಿ ನಿರ್ದೇಶಕ ಜಯಪ್ರಕಾಶ್, ಡಾ.ಮುದ್ದರಂಗಪ್ಪ, ವ್ಯಂಗ್ಯ ಚಿತ್ರಕಾರ ಬಿ.ಜಿ.ಗುಜ್ಜಾರ್ ರವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಶಿರಾ: ‘ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಕೆರೆಗಳನ್ನು ಉಳಿಸಿಕೊಂಡಿದ್ದರೆ ಇಂದು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕಾಣುತ್ತಿರಲಿಲ್ಲ. ಜೊತೆಗೆ ಬೆಂಗಳೂರಿಗೆ ಕಾವೇರಿ ನೀರಿನ ಅವಶ್ಯಕತೆ ಇರಲಿಲ್ಲ’ ಎಂದು ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬರಗೂರು ಗ್ರಾಮದ ಆಂಜನೇಯ ಸ್ವಾಮಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಹುಲಿಕುಂಟೆ ಹೋಬಳಿ ಮಟ್ಟದ ನಾಡಪ್ರಭು ಕೆಂಪೇಗೌಡರವರ 508 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಅಂದಿನ ನಾಡಪ್ರಭು ಕೆಂಪೇಗೌಡರು ಕೆರೆಗಳನ್ನು ನಿರ್ಮಾಣ ಮಾಡಿದರೆ ಇಂದಿನ ನಾಡಪ್ರಭುಗಳು ಕೆರೆಗಳನ್ನು ನಿರ್ನಾಮ ಮಾಡಲು ಹೊರಟಿರುವುದು ಶೋಚನೀಯವಾಗಿದೆ’ ಎಂದರು.

ADVERTISEMENT

‘ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಕೆಂಪೇಗೌಡರು ಮಾಡಿದರು. ತಳಮಟ್ಟದ ಸಮುದಾಯಗಳನ್ನು ಒಗ್ಗೂಡಿಸಿ ಅವರು ಮಾಡುವ ವೃತ್ತಿಗಳಿಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಹಲವಾರು ಪೇಟೆಗಳನ್ನು ನಿರ್ಮಾಣ ಮಾಡಿದರು ಆದರೆ ಅವರು ಒಕ್ಕಲಿಗರಿಗಾಗಿ ಯಾವುದೇ ನಿರ್ದಿಷ್ಟ ಪೇಟೆಯನ್ನು ನಿರ್ಮಣ ಮಾಡದೆ ಜಾತ್ಯತೀತ ತತ್ವವನ್ನು ಎತ್ತಿಹಿಡಿದಿದ್ದಾರೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, ‘ಸರ್ಕಾರ ಕೆಂಪೇಗೌಡ ಪ್ರಾಧೀಕಾರಕ್ಕೆ ಬೆಂಗಳೂರಿನಲ್ಲಿ 5 ಎಕರೆ ಜಮೀನು ನೀಡಲಿದ್ದು ಇಲ್ಲಿ ಕೆಂಪೇಗೌಡ ಸ್ವಾಭಿಮಾನಿ ಸೌಧವನ್ನು ನಿರ್ಮಾಣ ಮಾಡಲಾಗುವುದು. ಇದುವರೆಗೂ ಕೆಂಪೇಗೌಡರ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯದಿರುವುದು ವಿಷಾದನೀಯವಾಗಿದೆ. ನಂಜಾವಧೂತ ಸ್ವಾಮೀಜಿ ಅವರು ಚದುರಿ ಹೋಗಿದ್ದ ಸಮಾಜವನ್ನು ಒಗ್ಗೂಡಿಸಿ ಕೆಂಪೇಗೌಡ ಜಯಂತಿ ಆಚರಿಸುವಂತೆ’ ಮಾಡಿದರು.

ಕೆಂಪೇಗೌಡರವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಮುಖಂಡ ಬಿ.ಸತ್ಯನಾರಾಯಣ, ‘ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ತಳ ಮಟ್ಟದ ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿದರು. ಕೆಂಪೇಗೌಡರಿಂದಾಗಿ ಇಂದು ಬೆಂಗಳೂರು ಅಂತರರಾಷ್ಟ್ರೀಯ ಮಾನ್ಯತೆ ಪಡೆಯುವಂತಾಗಿದೆ’ ಎಂದರು.

ಜೆಡಿಎಸ್ ಮುಖಂಡ ಚಿದಾನಂದ ಎಂ.ಗೌಡ ಮೆರವಣಿಗೆಗೆ ಚಾಲನೆ ನೀಡಿದರು. ಕೆಂಪೇಗೌಡ ಪ್ರಶಸ್ತಿ:ಶಿಕ್ಷಕ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಮಾಲಿ ಮದ್ದಣ್ಣ, ವಿಶ್ವೇಶ್ವರಯ್ಯ, ಜಲನಿಗಮದ ಜಂಟಿ ನಿರ್ದೇಶಕ ಜಯಪ್ರಕಾಶ್, ಡಾ.ಮುದ್ದರಂಗಪ್ಪ, ವ್ಯಂಗ್ಯ ಚಿತ್ರಕಾರ ಬಿ.ಜಿ.ಗುಜ್ಜಾರ್ ರವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ಮುಖಂಡ ಸಿ.ಪಿ.ಮೂಡಲಗಿರಿಯಪ್ಪ, ತಾಲ್ಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಆರ್.ನಾಗರಾಜು, ಸಿಎಂಜಿ ಪ್ರತಿಷ್ಠಾನದ ಅಧ್ಯಕ್ಷ ಚಿದಾನಂದ ಎಂ.ಗೌಡ, ಕೆಂಪೇಗೌಡ ಜಯಂತ್ಯುತ್ಸವ ಆಚರಣೆ ಸಮಿತಿ ಅಧ್ಯಕ್ಷ ಬಿ.ಹಲಗುಂಡೇಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ರಾಮಕೃಷ್ಣ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ನಿರ್ದೇಶಕ ಎಸ್.ಆರ್.ಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ಕಲ್ಕೆರೆ ರವಿಕುಮಾರ್, ಉಪಾಧ್ಯಕ್ಷ ರಂಗನಾಥ ಗೌಡ, ಎಪಿಎಂಸಿ ಅಧ್ಯಕ್ಷ ಬಿ.ಎಸ್.ಸತ್ಯನಾರಾಯಣ, ಮಾಜಿ ಅಧ್ಯಕ್ಷ ಎಂ.ಆರ್.ಶಶಿಧರ್ ಗೌಡ, ಸಿ.ಆರ್.ಉಮೇಶ್, ವಕೀಲ ಎಚ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ಚಿದಾನಂದ್, ಪ್ರಕಾಶ್ ಗೌಡ, ಶ್ರೀನಿವಾಸಬಾಬು, ಜಿ.ಎನ್.ಮೂರ್ತಿ, ಗಡಾರಿ ಹನುಮಂತಪ್ಪ, ಎಸ್.ಪುಟ್ಟೀರಪ್ಪ, ವಾಜರಹಳ್ಳಿ ನರಸಿಂಹೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.