ADVERTISEMENT

ಕೊಳಚೆ ತಿಪ್ಪೆಯಂತಾದ ರಸ್ತೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:20 IST
Last Updated 15 ಸೆಪ್ಟೆಂಬರ್ 2017, 9:20 IST
ವೈ.ಎನ್.ಹೊಸಕೋಟೆ ಹೋಬಳಿಯ ಸಾಸಲಕುಂಟೆ ಗ್ರಾಮದಲ್ಲಿ ಅಪೂರ್ಣ ಕಾಮಗಾರಿಯಿಂದ ಹದಗೆಟ್ಟಿರುವ ಮುಖ್ಯ ರಸ್ತೆ
ವೈ.ಎನ್.ಹೊಸಕೋಟೆ ಹೋಬಳಿಯ ಸಾಸಲಕುಂಟೆ ಗ್ರಾಮದಲ್ಲಿ ಅಪೂರ್ಣ ಕಾಮಗಾರಿಯಿಂದ ಹದಗೆಟ್ಟಿರುವ ಮುಖ್ಯ ರಸ್ತೆ   

ವೈ.ಎನ್.ಹೊಸಕೋಟೆ: ಹೋಬಳಿಯ ಸಾಸಲಕುಂಟೆ ಗ್ರಾಮದ ಮುಖ್ಯರಸ್ತೆಯಲ್ಲಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಮತ್ತು ವಾಹನಗಳು ಓಡಾಡಲು ತೊಂದರೆಯಾಗುತ್ತಿದ್ದು ಕೂಡಲೇ ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

2014-15ನೇ ಸಾಲಿನ ಸರ್ಕಾರದ ಆದೇಶದಂತೆ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಕಾಮಗಾರಿ ಪ್ರಾರಂಭಿಸಿದ ಗುತ್ತಿಗೆದಾರ ಅರ್ಧಕ್ಕೆ ಕಾಮಗಾರಿಯನ್ನು ನಿಲ್ಲಿಸಿದ ಕಾರಣ ರಸ್ತೆಗೆ ಹೊಂದಿಕೊಂಡಿರುವ ಮನೆಗಳ ತ್ಯಾಜ್ಯ ನೀರು ರಸ್ತೆಗೆ ಬಂದು ನಿಲ್ಲುತ್ತಿವೆ. ರಸ್ತೆಯನ್ನೆಲ್ಲಾ ಅಗೆದು ಮಣ್ಣುಮಯ ಮಾಡಿರುವುದರಿಂದ ಕೊಳಚೆ ನೀರು ಮುಂದೆ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ.

ಕಿರಿದಾದ ಈ ರಸ್ತೆಯ ಮೂಲಕವೇ ಹೋಬಳಿ ಕೇಂದ್ರಕ್ಕೆ ಹಾಗೂ ನೆರೆಯ ಆಂದ್ರಪ್ರದೇಶಕ್ಕೆ ಓಡಾಟಬೇಕಾಗಿದ್ದು ಸಂಚಾರ ದುಸ್ತರವಾಗಿದೆ.ವಾಹನಗಳು ಓಡಾಡುವ ರಭಸಕ್ಕೆ ರಸ್ತೆಯಲ್ಲಿನ ಕೊಳಚೆ ನೀರು ಮನೆಗಳ ಒಳಕ್ಕೆ ಮತ್ತು ಬಾಗಿಲುಗಳಿಗೆ ಸಿಡಿದು ಅವಾಂತರ ಸೃಷ್ಟಿಸುತ್ತಿವೆ. ಮಳೆ ಬಂದರಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು. ವಾಹನ ಸವಾರರು ಬಿದ್ದು ಅವಘಡಗಳಿಗೆ ಒಳಗಾಗಿರುವ ಉದಾಹರಣೆಗಳು ಇವೆ.

ADVERTISEMENT

‘ಸಂಬಂಧಿಸಿದ ಇಲಾಖೆಯವರು ಈ ಬಗ್ಗೆ ಗಮನಹರಿಸಿ ರಸ್ತೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಕಛೇರಿಗಳ ಮುಂದೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಗ್ರಾಮದ ನಿವಾಸಿಗಳಾದ ಸುಭಾಷ್ ಚಂದ್ರಬೋಸ್, ಓಬಳೇಶ, ರಮೇಶ್, ಈರಣ್ಣ, ಮಾಂತೇಶು, ರಘ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.