ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಪ್ಲೇಟ್‌ಲೆಟ್‌ಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:28 IST
Last Updated 8 ಜುಲೈ 2017, 10:28 IST

ತುಮಕೂರು: ಜಿಲ್ಲೆ ಹಾಗೂ ತುಮಕೂರು ನಗರದಲ್ಲಿ ಡೆಂಗಿ ಜ್ವರ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನೇದಿನೇ  ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ನಗರದಲ್ಲಿ ಮೂರು ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್‌ (ಬಿಳಿ ರಕ್ತ ಕಣ) ಸೌಲಭ್ಯ ಇದ್ದು, ಬೇಡಿಕೆ ಸರಿದೂಗಿಸುವುದೇ ಕಷ್ಟವಾಗುತ್ತಿದೆ. ‘ಜಿಲ್ಲಾಸ್ಪತ್ರೆಯಲ್ಲಿ ಈವರೆಗೂ ಯಾವ ರೋಗಿಗೂ ಪ್ಲೇಟ್‌ಲೆಟ್‌ ಹಾಕಿಲ್ಲ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ಹೇಳುತ್ತಾರೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಟ್‌ ಹಾಕುತ್ತಿರುವ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ.

‘ತೀವ್ರ ಸ್ವರೂಪದಿಂದ ಬಳಲುತ್ತಿರುವ ಯಾರೂ ಸಹ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವುದಿಲ್ಲ. ಅಲ್ಲಿಯ ಚಿಕಿತ್ಸೆಯ ಬಗ್ಗೆ ನಂಬಿಕೆ ಇಲ್ಲ. ಹೀಗಾಗಿ ಅಲ್ಲಿ ಪ್ಲೇಟ್‌ಲೆಟ್‌ನ ಅಗತ್ಯತೆ ಬಂದಂತೆ ಇಲ್ಲ’ ಎಂದು ನಗರದ ಖಾಸಗಿ ರಕ್ತನಿಧಿ ಕೇಂದ್ರದ ಮೇಲ್ವಿಚಾರಕರೊಬ್ಬರು ಹೇಳಿದರು.

‘ಮೇ ತಿಂಗಳಲ್ಲಿ 70 ಯೂನಿಟ್‌, ಜೂನ್‌ನಲ್ಲಿ 200 ಹಾಗೂ ಜುಲೈನಲ್ಲಿ 100 ಯೂನಿಟ್ ಪ್ಲೇಟ್‌ಲೆಟ್‌ ನೀಡಲಾಗಿದೆ’ ಎಂದು  ಸೂರ್ಯ ರಕ್ತನಿಧಿ ಕೇಂದ್ರದ  ಟೆಕ್ನಿಕಲ್‌ ಸೂಪರ್‌ವೈಸರ್ ರವಿ ಅವರು ಮಾಹಿತಿ ನೀಡಿದರು. ಶ್ರೀದೇವಿ ವೈದ್ಯಕೀಯ ಕಾಲೇಜಿನ ರಕ್ತನಿಧಿ ಕೇಂದ್ರದಲ್ಲಿ ಕ್ರಮವಾಗಿ 27, 98 ಹಾಗೂ 28 ಯೂನಿಟ್‌ ಪ್ಲೇಟ್‌ಲೆಟ್‌ ಕೊಡಲಾಗಿದೆ.

ADVERTISEMENT

‘ದಿನದ 24 ಗಂಟೆ ಕೆಲಸ ಮಾಡುತ್ತಿದ್ದರೂ ಪ್ಲೇಟ್‌ಲೆಟ್‌ ಒದಗಿಸಲು ಸಾಧ್ಯವಾಗುತ್ತಿಲ್ಲ. ಮೇ ತಿಂಗಳಿಗಿಂತ  ಜೂನ್‌, ಜುಲೈ ತಿಂಗಳಲ್ಲಿ ಜ್ವರ ಪೀಡಿತರು ಹೆಚ್ಚಾಗಿದ್ದಾರೆ’ ಎಂದು ಶ್ರೀದೇವಿ ಕಾಲೇಜಿನ ರಕ್ತನಿಧಿ ಕೇಂದ್ರದ ಟೆಕ್ನಿಶಿಯನ್‌ ಪವನ್ ಮಾಹಿತಿ ನೀಡಿದರು.

‘ಸದ್ಯ ನಮ್ಮಲ್ಲಿ ಸಂಗ್ರಹ ಇಲ್ಲ. ಮೇನಲ್ಲಿ 35 ಯೂನಿಟ್‌, ಜೂನ್‌ನಲ್ಲಿ 50 ಯೂನಿಟ್‌ ಪ್ಲೇಟ್‌ಲೆಟ್‌ ಕೊಡಲಾಗಿದೆ’ ಎಂದು ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ತಿಳಿಸಿದರು.

‘ಡೆಂಗಿ ಹಾಗೂ  ಜ್ವರದ ಪ್ರಕರಣಗಳು ತುಂಬಾ ಹೆಚ್ಚಾಗಿವೆ. ಯಾವುದೇ ಖಾಸಗಿ ಆಸ್ಪತ್ರೆಗೆ ಹೋದರೂ ಹಾಸಿಗೆ ಸಿಗುತ್ತಿಲ್ಲ. ಹಾಸಿಗೆ ಸಿಗದೇ ನನ್ನ ರೋಗಿಗಳನ್ನೆ ದಾಖಲಿಸಲು ನನಗೆ ಸಾಧ್ಯವಾಗುತ್ತಿಲ್ಲ. ಎಷ್ಟೋ ಪ್ರಕರಣಗಳಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಖಾಸುಮ್ಮನೆ ಪ್ಲೇಟ್‌ಲೆಟ್‌ ಹಾಕುತ್ತಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ರಂಗೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳ ಸಾಕಷ್ಟು ವೈದ್ಯರುಗಳು, ಸಿಬ್ಬಂದಿ ಸಹ ಜ್ವರದಿಂದ ಬಳಲುತ್ತಿದ್ದಾರೆ.  ಆದರೆ ಸರಿಯಾದ ವರದಿಯಾಗುತ್ತಿಲ್ಲ. ಅಂಕಿ–ಸಂಖ್ಯೆ ಸಂಗ್ರಹ ಮಾಡುತ್ತಿಲ್ಲ. ಖಾಸಗಿ ಪ್ರಯೋಗಾಲಯಗಳಿಂದ ವರದಿ ಸಂಗ್ರಹಿಸಿದರೆ ಸರಿಯಾದ ಸಂಖ್ಯೆ ಸಿಗಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ಡೆಂಗಿಯಿಂದ ಹೆಚ್ಚು ಸಾವು ಸಂಭವಿಸುತ್ತಿಲ್ಲ. ತೀರಾ ಗಂಭೀರವಾದ ಪ್ರಕರಣಗಳನ್ನು ಬೆಂಗಳೂರಿಗೆ ಕಳುಹಿಸುತ್ತಿರುವುದರಿಂದಲೂ ವರದಿಯಾಗದೆ ಇರಬಹುದು’ ಎಂದು ಹೇಳಿದರು.

‘ಸಿಂಗಲ್ ಡೋನರ್‌ (ಒಬ್ಬನೇ ವ್ಯಕ್ತಿಯ ರಕ್ತದಿಂದ) ಪ್ಲೇಟ್‌ಲೆಟ್‌ ತಯಾರಿಸುವ ವ್ಯವಸ್ಥೆ ತುಮಕೂರಿನಲ್ಲಿ ಇಲ್ಲ. ಹೀಗಾಗಿ ರೋಗಿಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ.  ನನ್ನ ತಾಯಿಗೇನೆ ಇಲ್ಲಿ ಚಿಕಿತ್ಸೆ ಸಾಧ್ಯವಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆ’ ಎಂದು ಮಾಹಿತಿ ಹಂಚಿಕೊಂಡರು.
‘ತುಮಕೂರಿನಲ್ಲಿ ಪ್ಲೇಟ್‌ಲೆಟ್‌ ತಯಾರಿಸಲು ಐದಾರು ಮಂದಿ ರಕ್ತದಾನಿಗಳು ಬೇಕು. ಇದೊಂದು ಗಂಭೀರವಾದ ವಿಷಯವಾಗಿದೆ’ ಎಂದರು.

‘ಗಂಭೀರ ಸ್ವರೂಪ ಪಡೆದ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಎಷ್ಟು ಇರುತ್ತಾರೆ.  ಸರ್ಕಾರಿ ಆಸ್ಪತ್ರೆಯಲ್ಲಿ  ಎಷ್ಟು  ಇರುತ್ತಾರೆ ಎಂಬುದು ಸಹ ಮುಖ್ಯವಾಗುತ್ತದೆ.  ಸಾಕಷ್ಟು ಖಾಸಗಿ ವೈದ್ಯರು ಮುಂಜಾನೆ 4 ಗಂಟೆಯವರೆಗೂ ಕೆಲಸ ಮಾಡುತ್ತಿದ್ದಾರೆ. ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿ ಕೆಲಸ ಮಾಡುತ್ತಿದ್ದಾರೆ ಹೇಳಿ’ ಎಂದು ಪ್ರಶ್ನಿಸಿದರು.

ವರದಿಯಾಗದ ಅಂಕಿ–ಅಂಶ
ತುಮಕೂರು: ಡೆಂಗಿ ಪ್ರಕರಣಗಳ ಅಂಕಿ–ಅಂಶಗಳನ್ನು ಸರಿಯಾಗಿ ದಾಖಸುತ್ತಿಲ್ಲ. ಜಿಲ್ಲಾಸ್ಪತ್ರೆಯ ಪ್ರಯೋಗಾಲಯದಲ್ಲಿ ರಕ್ತ ಪರೀಕ್ಷೆ (ಮ್ಯಾಕ್‌ ಎಲಿಸಾ) ಮಾಡಿಸಿಕೊಂಡವರ  ಸಂಖ್ಯೆಯನ್ನು ಮಾತ್ರ ದಾಖಲು ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಅಂಕಿ–ಅಂಶಗಳನ್ನು ದಾಖಲು ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.

ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಕಾರಣ ಜಿಲ್ಲೆ ಹಾಗೂ ನಗರದಲ್ಲಿ ಎಷ್ಟು ಮಂದಿ ಡೆಂಗಿ ಚಿಕಿತ್ಸೆ ಪಡೆದಿದ್ದಾರೆ ಎಂಬ ಅಂಕಿ–ಅಂಶವೇ ನಿಖರವಾಗಿ ಗೊತ್ತಾಗುತ್ತಿಲ್ಲ.
‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಸಭೆ ನಡೆಸಿ ಡೆಂಗಿ ಪ್ರಕರಣಗಳ ವರದಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. ಆದರೆ ಅಂಕಿ–ಅಂಶ ಸಂಗ್ರಹ ಮಾಡುತ್ತಿಲ್ಲ. ಹೀಗಾಗಿ ಡೆಂಗಿ ಪ್ರಕರಣ ಸಂಖ್ಯೆ ಕಡಿಮೆ ಎಂದು ತೋರಿಸಲಾಗುತ್ತಿದೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ರಂಗೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.