ADVERTISEMENT

ನಸುಕಿನವರೆಗೂ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:02 IST
Last Updated 11 ಸೆಪ್ಟೆಂಬರ್ 2017, 9:02 IST

ಚಿಕ್ಕನಾಯಕನಹಳ್ಳಿ: ಭಾನುವಾರ ನಸುಕಿನವರೆಗೂ ಜೋರು ಮಗೆ ಮಳೆ ಸುರಿಯುವ ಮೂಲಕ ತಾಲ್ಲೂಕಿಗೆ ತಂಪೆರೆದಿದೆ. ಪಟ್ಟಣದಲ್ಲಿ ಸುರಿದ ಅಬ್ಬರ ಮಳೆಯಿಂದಾಗಿ ಕೆಲ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಪ್ರೌಢಶಾಲೆ, ಎಂ.ಎಚ್.ಪಿ.ಎಸ್ ಶಾಲೆ ಆವರಣ, ತಾಲ್ಲೂಕು ಕ್ರೀಡಾಂಗಣ, ವೆಂಕಣ್ಣನ ಕಟ್ಟೆಯ ಉದ್ಯಾನ ಜಲಾವೃತವಾದವು. ಜೋಗಿಹಳ್ಳಿ ಹಳ್ಳ ತುಂಬಿ ಹರಿಯಿತು.

ಸತತ ನಾಲ್ಕು ವರ್ಷಗಳ ಬರಗಾಲದಿಂದ ಕಂಗಾಲಾಗಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ತೆಂಗು ಹಾಗೂ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಸಾವಿರಾರು ಅಡಿ ಕೊಳವೆಬಾವಿ ಕೊರೆಸು ಯೋಚನೆಗೆ ಮುಂದಾಗಿದ್ದ ರೈತರಿಗೆ ಸ್ವಲ್ಪ ಕಾಲ ಬ್ರೇಕ್ ಬಿದ್ದಂತಾಗಿದೆ. ದನ ಕರುಗಳ ಮೇವಿಗೆ ಮಾರ್ಗವಾಗಿದೆ ಎನ್ನುವ ಸಮಾಧಾನದ ಮಾತುಗಳು ವ್ಯಾಪಕವಾಗಿ ಕೇಳಿ ಬಂದವು.

ಚಿಕ್ಕನಾಯಕನಹಳ್ಳಿ 86ಮಿ.ಮೀ, ಹುಳಿಯಾರು 67.4ಮಿ.ಮೀ, ಬೋರನಕಣಿವೆ 74.4 ಮಿ.ಮೀ, ದೊಡ್ಡೆಣ್ಣೆಗೆರೆ 40.2 ಮಿ.ಮೀ, ಸಿಂಗದಹಳ್ಳಿ 26.3 ಮಿ.ಮೀ ಮಳೆ ಭಾನುವಾರ ದಾಖಲಾಗಿದೆ.

ADVERTISEMENT

ತುರುವೇಕೆರೆ ವರದಿ: ಉತ್ತರೆ ಮತ್ತು ಹುಬ್ಬೇ ಮಳೆಯು ಈ ಬಾರಿ ರೈತರ ಕೈ ಹಿಡಿದಿದೆ. ಶನಿವಾರ ರಾತ್ರಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಹದ ಮಳೆಯಾಗಿದೆ.
ಮೂರು ದಿನಗಳಿಂದ ಸತತವಾಗಿ ತಾಲ್ಲೂಕಿನ ಹಲವೆಡೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿವೆ. ಇದರಿಂದ ಮುಂಗಾರು ಬೆಳೆಗಳು ನಳನಳಿಸುತ್ತಿವೆ. ಇನ್ನು ಹೊಲ, ಗದ್ದೆ, ತೋಟ, ತಗ್ಗಿನ ಪ್ರದೇಶಗಳ ಅಲ್ಲಲ್ಲಿ ಮಳೆಯ ನೀರು ನಿಂತಿದೆ.

ಅಲ್ಲದೆ ಕೆಲ ಗ್ರಾಮಗಳಲ್ಲಿ ಕಟ್ಟೆ , ಹೊಂಡಗಳಲ್ಲಿ ಮಳೆಯ ನೀರು ಹೆಚ್ಚು ಸಂಗ್ರಹವಾಗಿ ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ. ಉತ್ತಮ ಮಳೆಯಿಂದಾಗಿ ರೈತರು ರಾಗಿ ಹೊಲಕ್ಕೆ ಗೊಬ್ಬರ ಹಾಕಿ ಕುಂಟೆಯೊಡೆಯುತ್ತಿದ್ದಾರೆ. ಇನ್ನು ಕೆಲವೆಡೆ ರೈತರು ರಾಗಿ ಪೈರು ನಾಟಿ ಮಾಡುವಲ್ಲಿ ತೊಡಗಿದ್ದರೆ, ಬಿತ್ತನೆ ಮುಂದುವರಿದ ಹೊಲಗಳಲ್ಲಿ ರೈತರು ಕಳೆ ಕೀಳುವಲ್ಲಿ ನಿರತರಾಗಿದ್ದಾರೆ.

ಪಟ್ಟಣದಲ್ಲಿ 79 ಮಿ.ಮೀಟರ್ ಮಳೆ ಯಾಗಿದ್ದು ಇದರಿಂದ ಸರ್ಕಾರಿ ನೌಕರರ ಭವನದ ಮುಂಭಾಗ, ಐಟಿಐ ಕಾಲೇಜು, ಕ್ಷೇತ್ರ ಶಿಕ್ಷಣ ಕಚೇರಿ ಮುಂಭಾಗದಲ್ಲಿ ಮಳೆಯ ನೀರು ಜಲಾವೃತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.