ADVERTISEMENT

ನಾಳೆ ಪೌರ ಕಾರ್ಮಿಕರ ‘ಪೊರಕೆ ಚಳವಳಿ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:36 IST
Last Updated 24 ಮೇ 2017, 6:36 IST

ತುಮಕೂರು: ‘ವಚನ ಭ್ರಷ್ಟ ರಾಜ್ಯ ಸರ್ಕಾರದ ವಿರುದ್ಧ ಗುರುವಾರ (ಮೇ 25) ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪೌರ ಕಾರ್ಮಿಕರು ಪೊರಕೆ ಚಳವಳಿ ನಡೆಸಲಿದ್ದಾರೆ’ ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್ ಹೇಳಿದರು.

‘ರಾಜ್ಯದ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಗುತ್ತಿಗೆ ಪದ್ದತಿ ರದ್ದಾಗಬೇಕು. 2016ರ ಮೇ 4ರಂದು ರಾಜ್ಯ ಸಚಿವ ಸಂಪುಟದ ತೀರ್ಮಾನದಂತೆ ಎಲ್ಲ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ನೇಮಿಸಬೇಕು, ಸಚಿವ ಸಂಪುಟ ತೀರ್ಮಾನಗಳನ್ನು ಸರ್ಕಾರ ಗೌರವಿಸಬೇಕು.

ಮುಖ್ಯಮಂತ್ರಿ ಗುತ್ತಿಗೆ ಪೌರ ಕಾರ್ಮಿಕರಿಗೆ ಹಲವು ಬಾರಿ ನೀಡಿರುವ ಭರವಸೆ ಈಡೇರಿಸಬೇಕು ಎಂಬುದು ಈ ಚಳವಳಿಯ ಪ್ರಮುಖ ಹಕ್ಕೊತ್ತಾಯಗಳಾಗಿವೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಈ ಚಳವಳಿ ಬಳಿಕ 15 ದಿನದೊಳಗೆ ಗುತ್ತಿಗೆ ಪದ್ಧತಿ ರದ್ದು ಮಾಡುವ ಪ್ರಕ್ರಿಯೆಗೆ ಮುಂದಾಗದೇ ಇದ್ದರೆ  ಜೂನ್ 10ರಿಂದ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟ ಕಾಲ ಧರಣಿ ನಡೆಸಲಾಗುವುದು’ ಎಂದರು.

‘2017ರ ಏಪ್ರಿಲ್ 9ರಂದು ಕಾಚ್ರ ವಹಾತುಕ್ ಶ್ರಮಿಕ್ ಸಂಘವು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸುಪ್ರೀಂ ಕೋರ್ಟ್‌ ಬಾಂಬೆ ಮಹಾನಗರ ಪಾಲಿಕೆಯ 2700 ಗುತ್ತಿಗೆ ಪೌರಕಾರ್ಮಿಕ ನೌಕರರನ್ನು ಕಾಯಂ ನೌಕರರನ್ನಾಗಿ ಮಾಡಬೇಕು ಎಂದು ಆದೇಶಿಸಿದೆ. ಎರಡು ವರ್ಷಗಳ ವೇತನವನ್ನೂ ನೀಡಬೇಕು ಎಂದು ತಾಕೀತು ಮಾಡಿದೆ’ ಎಂದರು.

‘ನಮ್ಮ ರಾಜ್ಯದಲ್ಲೂ ಸರ್ಕಾರವು 2017ರ ಮಾರ್ಚ್‌ನೊಳಗೆ ವಿಶೇಷ ನೇಮಕಾತಿ ನಿಯಮ ರೂಪಿಸಿ ಎಲ್ಲ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ನಿರ್ಧರಿಸಿದೆ. ಆದರೆ, ಇದುವರೆಗೂ ಯಾವುದೇ ಸೂಕ್ತ ರೀತಿಯ ಕ್ರಮ ಕೈಗೊಂಡಿಲ್ಲ. ಬರೀ ಕಾಲಹರಣ ಮಾಡಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ 58 ಸಾವಿರ ಪೌರ ಕಾರ್ಮಿಕರಿದ್ದಾರೆ. ಇವರನ್ನು ಕಾಯಂಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ನೂರಾರು ಬಾರಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಸಂಘಟನೆಗಳಿಗೆ ಭರವಸೆ ನೀಡಿಕೊಂಡೇ ಬಂದಿದ್ದಾರೆ. ಆದರೆ, 4 ವರ್ಷದಲ್ಲಿ ಅಧಿಕೃತ ಯಾವ ಕ್ರಮವನ್ನೂ ಕೈಗೊಂಡಿಲ್ಲ’ ಎಂದು ದೂರಿದರು.

ಹಗಲು ದರೋಡೆ:  ‘ಗುತ್ತಿಗೆದಾರ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಬಡ್ಡಿ ವ್ಯವಹಾರದ ದಲ್ಲಾಳಿಗಳು ಶಾಮಿಲಾಗಿ ಪೌರ ಕಾರ್ಮಿಕರಿಗೆ ಕಾನೂನು ರೀತಿಯಲ್ಲಿ ದೊರೆಯಬೇಕಾದ ಕನಿಷ್ಠ ವೇತನ, ಭವಿಷ್ಯ ನಿಧಿ ಕಲ್ಪಿಸಿಲ್ಲ.  ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ಸುರಕ್ಷಿತ ಸಲಕರಣೆಗಳು, ಆರೋಗ್ಯ ವಿಮೆ, ಅವರ ಮಕ್ಕಳಿಗೆ ನೀಡಬೇಕಿದ್ದ ವಿದ್ಯಾರ್ಥಿ ವೇತನ, ಯಾವ ಸವಲತ್ತುಗಳನ್ನು ನೀಡದೇ ಹಗಲು ದರೋಡೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾನೂನು ಬಾಹಿರ:  ‘ಕಾನೂನು ಬಾಹಿರ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ರಾಜ್ಯದ ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್ ಪೀಠಗಳು ಆದೇಶಿಸಿವೆ. ಸರ್ಕಾರಕ್ಕೆ ಇದೆಲ್ಲ ಗೊತ್ತಿದ್ದರೂ ನ್ಯಾಯಾಲಯಗಳ ಆದೇಶಗಳನ್ನು ಪಾಲಿಸಿಲ್ಲ’ ಎಂದು ಹೇಳಿದರು.

‘ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ–1977, ಸೆಕ್ಷನ್ 92ಡಿ ಪ್ರಕಾರ ಸಫಾಯಿ ಕರ್ಮಚಾರಿಗಳು ಮಾಡುವ ಎಲ್ಲ ಕೆಲಸಗಳು ಅವಶ್ಯಕ ಮತ್ತು ಕಡ್ಡಾಯ ಸೇವೆಗಳಾಗಿವೆ.  ಹೀಗಾಗಿ, ಈ ಪದ್ಧತಿ ರದ್ದುಪಡಿಸಲು ಪೌರ ಕಾರ್ಮಿಕರ ಮಹಾಸಂಘ, ಸಫಾಯಿ ಕರ್ಮಚಾರಿಗಳ ಸಂಘ, ಕಾರ್ಮಿಕ ಸಂಘ, ದಲಿತ ಮಾನವ ಹಕ್ಕು ಸಂಘಟನೆಗಳು ನಿರಂತರ ಹೋರಾಟ ಮಾಡಿವೆ’ ಎಂದು ವಿವರಿಸಿದರು.

ಬೆಳಕು ಸಫಾಯಿ ಕರ್ಮಚಾರಿ  ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಸ್.ಎಚ್.ಚಂದ್ರಪ್ಪ, ಕಾರ್ಯದರ್ಶಿ ಕದರಪ್ಪ ಮಾತನಾಡಿ, ‘ಅಲ್ಪಸ್ವಲ್ಪ ವೇತನ ಹೆಚ್ಚಳ ಮಾಡಲಾಗಿದೆ. ಅದೂ ಕೂಡಾ ಸರಿಯಾಗಿ ಸಿಗುತ್ತಿಲ್ಲ.  ಇಎಸ್ಐ,ಪಿಎಫ್, ವೇತನ ಚೀಟಿ ಕಾರ್ಮಿಕರಿಗೆ ನೀಡುತ್ತಿಲ್ಲ’ ಎಂದು  ದೂರಿದರು.

ತುಮಕೂರು ನಗರದಲ್ಲಿ ಗುತ್ತಿಗೆದಾರರು ಕಾರ್ಮಿಕರಿಗೆ ವೇತನ ಚೀಟಿ, ಸುರಕ್ಷತಾ ವಸ್ತುಗಳನ್ನು ಕೊಟ್ಟಿದ್ದಾರೆ. ಉಳಿದ ಕಡೆ ಗುತ್ತಿಗೆದಾರರ ಕೊಟ್ಟಿಲ್ಲ’ ಎಂದು ಆರೋಪಿಸಿದರು. ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಗೌರವ ಅಧ್ಯಕ್ಷ ಎಂ.ಎಸ್.ಸಿದ್ದಲಿಂಗಯ್ಯ, ಖಜಾಂಚಿ ಎಲ್.ಹನುಮಂತಯ್ಯ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.