ADVERTISEMENT

ಪಾವಗಡಲ್ಲೊಂದು ಮಲೆನಾಡು...!

20 ಅಡಿಯಲ್ಲೇ ನೀರು ತೆಗೆಯುತ್ತಿರುವ ಬರದ ನಾಡಿನ ಭಗೀರಥ ಕೊತ್ತೂರಿನ ಡಾ. ಮಾಕಂ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 13:04 IST
Last Updated 22 ಮಾರ್ಚ್ 2018, 13:04 IST
ತೋಟದಲ್ಲಿ ನಿರ್ಮಿಸಲಾದ ಚೆಕ್ ಡ್ಯಾಂ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವುದು. ಚಿತ್ರದಲ್ಲಿ ಡಾ.ಮಾಕಂ ಪ್ರಭಾಕರ್‌ ಅವರನ್ನೂ ಕಾಣಬಹುದು.
ತೋಟದಲ್ಲಿ ನಿರ್ಮಿಸಲಾದ ಚೆಕ್ ಡ್ಯಾಂ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವುದು. ಚಿತ್ರದಲ್ಲಿ ಡಾ.ಮಾಕಂ ಪ್ರಭಾಕರ್‌ ಅವರನ್ನೂ ಕಾಣಬಹುದು.   

ಪಾವಗಡ: ಬಾವಿಯಲ್ಲಿ ಕೈಗೆಟಕುವಷ್ಟು ಆಳದಲ್ಲಿ ನೀರು. ತೋಟದ ಮಧ್ಯದಲ್ಲಿ ಬೃಹತ್ ಗಾತ್ರದ ಚೆಕ್ ಡ್ಯಾಂ, ತೋಟದ ಸುತ್ತಲೂ ಇಂಗು ಗುಂಡಿಗಳು. ಮಳೆ ನೀರು ಸಂಗ್ರಹಿಸಲು ಕೃಷಿ ಹೊಂಡಗಳು. ಚಿತ್ತಾಕರ್ಷಿಸುವ ಅಡಿಕೆ, ಮಾವು, ಬೇವು, ಹಲಸು, ಹುಣಸೆ ಇತ್ಯಾದಿ ತರಹೇವಾರಿ ಮರ ಗಿಡಗಳು....

-ಇದು ಮಲೆನಾಡು ಪ್ರದೇಶದಲ್ಲಿನ ತೋಟದ ವರ್ಣನೆಯಲ್ಲ. ಸತತ 6 ದಶಕಗಳಿಂದ ಬರಕ್ಕೆ ತುತ್ತಾಗಿರುವ ಬರದ ನಾಡು, ಬೆಂಗಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕಿನ ಕೊತ್ತೂರಿನ ಡಾ. ಮಾಕಂ ಪ್ರಭಾಕರ್ ಅವರ ತೋಟದಲ್ಲಿ ಕಾಣಸಿಗುವ ಚಿತ್ರಣ.

ಕೊತ್ತೂರು ಕೆರೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಸಾಮಾನ್ಯ. 300 ಅಡಿ ಆಳಕ್ಕೆ ಕೊರೆಸಿದ ಪ್ರಭಾಕರ್‌ ಅವರ ಕೊಳವೆಬಾವಿಗಳಲ್ಲಿ ನೀರಿನ ಸಮಸ್ಯೆ ಕಾಡಿತು. ಆದರೆ ಈಗ; ಈ ಕೊಳವೆ ಬಾವಿಗಳಲ್ಲಿ ಇಣುಕಿದರೆ 5 ರಿಂದ 10 ಅಡಿ ಆಳದಲ್ಲಿಯೇ ನೀರು ಕಾಣುತ್ತದೆ. ತೋಟದಲ್ಲಿರುವ ಮೂರು ಕೊಳವೆ ಬಾವಿಗಳಿಗೆ ಕೇವಲ 20 ಅಡಿಯಷ್ಟು ಆಳಕ್ಕೆ ಮೋಟರ್, ಪಂಪ್ ಇಳಿಸಿ ನೀರೆತ್ತಲಾಗುತ್ತಿದೆ. ಎರಡು ತೆರೆದ ಬಾವಿಗಳಲ್ಲಿ ವರ್ಷಪೂರ್ತಿ ನೆಲ ಮಟ್ಟದಲ್ಲಿಯೇ ನೀರಿರುತ್ತದೆ.

ADVERTISEMENT

ಇದೇ ಗ್ರಾಮದಲ್ಲಿ 800ರಿಂದ 1000 ಅಡಿ ಆಳದವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ರೋಸಿ ಹೋದ ರೈತರ ಸಂಖ್ಯೆ ಸಾಕಷ್ಟಿದೆ. ಆದರೆ ಈ ತೋಟದಲ್ಲಿ ಅಂತರ್ಜಲ ಹೇಗೆ ಸಂರಕ್ಷಿಸಲ್ಪಟ್ಟಿದೆ ಎಂಬ ಕುತೂಹಲ ಕಾಡದಿರದು.

ಗ್ರಾಮದ ಬಳಿಯ ಕುಂಟೆಯೊಂದರ ನೀರು ಇವರ ತೋಟದ ಮೂಲಕ ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ನೀರಿನ ಅಭಾವದಿಂದ ಬೇಸತ್ತಿದ್ದ ಇವರು ಸ್ವಂತ ಖರ್ಚಿನಿಂದ ತೋಟದಲ್ಲಿಯೇ ನೀರು ಸಂಗ್ರಹವಾಗುವಂತೆ ಹಳ್ಳಕ್ಕೆ ತಡೆಗೋಡೆ ನಿರ್ಮಿಸಿದರು. ಸುಮಾರು 1 ಎಕರೆಯಷ್ಟು ವಿಸ್ತಾರದಲ್ಲಿ ಚೆಕ್‌ಡ್ಯಾಂ ವಿಸ್ತರಿಸಿದರು.  ಕಳೆದ ಮಳೆಗಾಲದಲ್ಲಿ ಚೆಕ್ ಡ್ಯಾಂ ತುಂಬಿ ಹರಿದಿತ್ತು. ಪರಿಣಾಮ ಇವರ ತೋಟ ಮಾತ್ರವಲ್ಲದೆ ಸುತ್ತ ಮುತ್ತಲಿನ ಜಮೀನು, ತೋಟಗಳಲ್ಲೂ ಅಂತರ್ಜಲ ವೃದ್ಧಿಯಾಗಿದೆ.

  ಚೆಕ್ ಡ್ಯಾಂ ಜೊತೆಗೆ ತೋಟದ ಸುತ್ತಲೂ ಇಂಗು ಗುಂಡಿಗಳನ್ನು ನಿರ್ಮಿಸಿ ಮಳೆ ನೀರು ಇಂಗುವಂತೆ ವ್ಯವಸ್ಥೆ ಮಾಡಿದ್ದಾರೆ. ಎರಡು ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಿಟ್ಟಿದ್ದಾರೆ. 3 ಎಕರೆಯಲ್ಲಿ ಅಡಿಕೆ, 7 ಎಕರೆಯಲ್ಲಿ ಶೇಂಗಾ, 1 ಎಕರೆಯಲ್ಲಿ ಸೇವಂತಿಗೆ, ಕಾಕಡ, ಉಳಿದ ಪ್ರದೇಶದಲ್ಲಿ ತೆಂಗು, ಮಾವು, ಹಲಸು, ಬೇವು, ಬಿದಿರು ಇತ್ಯಾದಿ ಗಿಡ ಮರಗಳನ್ನು ಬೆಳೆಸಿದ್ದಾರೆ.

ಕಬ್ಬಿಣದ ತಂತಿ ಬೇಲಿ ಬದಲಾಗಿ ಸುತ್ತಲೂ ಬಿದಿರು, ಕತ್ತಾಳೆ, ಸೀಗೆಯಂಥ ಗಿಡಗಳನ್ನು ಬೆಳೆಸಿ ನೈಸರ್ಗಿಕ ಬೇಲಿ ಮಾಡಿದ್ದಾರೆ. ಬೇಲಿಯ ಗಿಡಗಳು ಕುರಿ, ಮೇಕೆ, ದನಗಳಿಂದ ರಕ್ಷಣೆ ನೀಡುವ ಜೊತೆಗೆ, ತೋಟವನ್ನು ಬಿರುಗಾಳಿಯಿಂದ ರಕ್ಷಿಸುತ್ತವೆ. ಬೇಲಿ ಗಿಡಗಳಿಂದ ತಕ್ಕಷ್ಟು ಆದಾಯವೂ ಕೈಗೆಟಕುತ್ತಿದೆ.

  ತೋಟದಲ್ಲಿ ಬಿದ್ದ ತೆಂಗಿನ ಗರಿ, ಅಡಿಕೆ ಪಟ್ಟೆ ಇತ್ಯಾದಿ ತ್ಯಾಜ್ಯವನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಭೂಮಿಯ ತೇವಾಂಶ ಆವಿಯಾಗದಂತೆ ಹೊದಿಕೆ ನಿರ್ಮಿಸಿದ್ದಾರೆ. ಕೃಷಿ ವಿಜ್ಞಾನದಲ್ಲಿ ಡಾಕ್ಟರೇಟ್‌ ಪಡೆದಿರುವ ಪ್ರಭಾಕರ್ ಅವರು ತಮ್ಮಬಳಿ ಬರುವ ರೈತರಿಗೆ, ’ಲಕ್ಷಾಂತರ ರೂಪಾಯಿ ವ್ಯಯಿಸಿ ಕೊಳವೆ ಬಾವಿ ಕೊರೆಸಬೇಡಿ, ಮಳೆ ನೀರು ಜಮೀನಿನಲ್ಲಿ ಹಿಡಿದಿಡುವ ಕೆಲಸ ಮಾಡಿ’ ಎಂದು ಸಲಹೆ ನೀಡುವುದನ್ನು ಮರೆಯುವುದಿಲ್ಲ.
**
ಯಥೇಚ್ಚವಾಗಿ ಅಂತರ್ಜಲ ಬಳಸಲಾಗುತ್ತಿದೆಯೇ ಹೊರತು, ಯಾರೊಬ್ಬರೂ ಮರುಪೂರಣ ಮಾಡುವತ್ತ ಗಮನಹರಿಸುತ್ತಿಲ್ಲ. ಮಳೆ ನೀರನ್ನು ಸಂರಕ್ಷಿಸಿದಲ್ಲಿ, ತಂತಾನಾಗಿಯೇ ಅಂತರ್ಜಲ ವೃದ್ಧಿಯಾಗುತ್ತದೆ.
ಡಾ. ಮಾಕಂ ಪ್ರಭಾಕರ್, ಕೊತ್ತೂರು.
**

ಕೆ.ಆರ್‌.ಜಯಸಿಂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.