ADVERTISEMENT

ಬಾಗಿದ ರಾಗಿ; ರೈತರ ದುಗುಡ

ಒಖಿ ಚಂಡಮಾರುತದ ಪರಿಣಾಮ; ಹೊಲಗಳಿಗೆ ಪ್ರಾಣಿ ಪಕ್ಷಿಗಳ ಲಗ್ಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 9:33 IST
Last Updated 6 ಡಿಸೆಂಬರ್ 2017, 9:33 IST
ತಾಳಕ್ಕೆರೆ ಗೊಲ್ಲರಹಟ್ಟಿ ಸಮೀಪದ ರಾಗಿ ನೆಲ ಕಚ್ಚಿದೆ
ತಾಳಕ್ಕೆರೆ ಗೊಲ್ಲರಹಟ್ಟಿ ಸಮೀಪದ ರಾಗಿ ನೆಲ ಕಚ್ಚಿದೆ   

ತುರುವೇಕೆರೆ: ತೆನೆ ಉತ್ತಮವಾಗಿ ಕಟ್ಟಿರುವುದು ಮತ್ತು ಒಖಿ ಚಂಡಮಾರುತದ ಪರಿಣಾಮ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಕೊಯ್ಲಿಗೆ ಬಂದ ರಾಗಿ ಪೈರು ಬಾಗಿದೆ. ಇದು ಸಹಜವಾಗಿ ರೈತರನ್ನು ಆಂತಕ್ಕೆ ದೂಡಿದೆ.

ಈ ಸಲ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದ ಕಾರಣ ರಾಗಿ ಉತ್ತಮವಾಗಿ ಕಾಳುಕಟ್ಟಿತ್ತು. ಉತ್ತಮ ಫಸಲು ಸಿಗುವ ಭರವಸೆಯನ್ನು ರೈತರಲ್ಲಿ ಮೂಡಿಸಿತ್ತು. ಎಂ.ಆರ್ ರಾಗಿ, ಜಿಪಿಯು28 ಮತ್ತು ಜಿಪಿಯು48 ತಳಿಯನ್ನು ಬಿತ್ತನೆ ಮಾಡಿದ್ದರು. ರೈತರು ಉತ್ತಮ ಗೊಬ್ಬರ ನೀಡಿದ್ದರಿಂದ ರಾಗಿ ಎತ್ತರಕ್ಕೆ ಬೆಳೆದಿತ್ತು. ಕಾಳುಕಟ್ಟುವರೆಗೂ ಸಮರ್ಪಕ ಮಳೆಯಾದ್ದರಿಂದ ತೆನೆ ಉತ್ತಮವಾಗಿದೆ.. ಫಸಲು ರೈತರ ಕೈಸೇರಲಿದೆ ಎನ್ನುವಷ್ಟರಲ್ಲಿ  ಪೈರು ನಡಮುರಿದು ಬಿದ್ದಿದೆ. ಹೊಲದ ಮಧ್ಯೆ ಅಕ್ಕಡಿ ಸಾಲುಗಳಲ್ಲಿ ಬೆಳೆದ ಅವರೆ ಬಳ್ಳಿ ರಾಗಿ ಪೈರಿಗೆ ಹಬ್ಬಿ ಮತ್ತಷ್ಟು ಅನಾಹುತ ಮಾಡಿದೆ.

ಮುನಿಯೂರು, ತಾಳ್ಕೆರೆ, ಮಾಯಸಂದ್ರ, ಕೊಂಡಜ್ಜಿ, ಸಾರಿಗೇಹಳ್ಳಿ, ನಾಗಲಾಪುರ, ಮಲ್ಲಾಘಟ್ಟ ಅಮಾನೀಕೆರೆ, ಮಾವಿನಕೆರೆ, ಸಂಪಿಗೆ, ದಬ್ಬೇಘಟ್ಟ, ಅರೆಮಲ್ಲೆನಹಳ‍್ಳಿ, ಕಣತೂರು, ಮೇಲಿನವಳಗೇರಹಳ್ಳಿ, ಬೆನಕಿನಕೆರೆ, ಲಕ್ಷ್ಮೀದೇವರಹಳ‍್ಳಿ, ಬೆಂಡೆಕೆರೆ, ಮಾಯಸಂದ್ರ, ಜಡೆಯ, ಭೈರತಹೊಸಹಳ‍್ಳಿ, ವಿಠಲಾಪುರ, ಮಲ್ಲೇಹಳ್ಳಿ, ಅಂಚಿನಹಳ‍್ಳಿ, ದೊಡ್ಡಶೆಟ್ಟಿಕೆರೆ, ನಾಗಲಾಪುರ, ಶೆಟ್ಟಗೊಂಡನಹಳ‍್ಳಿ, ಸೀಗೇಹಳ‍್ಳಿ ದಂಡಿನಶಿವರ ಹೋಬಳಿ ಅರಕೆರೆ, ಕಲ್ಕೆರೆ, ಸಿದ್ದಾಪುರ, ಬಳ್ಳೆಕಟ್ಟೆ, ಅರಿಗೊಂಡನಹಳ‍್ಳಿ, ಹುಲ್ಲೇಕೆರೆ, ಯಲದಬಾಗಿ, ಜಕ್ಕನಹಳ‍್ಳಿ, ಸಂಪಿಗೆ ಹೊಸಹಳ‍್ಳಿ ,ಅರೆಕುರುಬರಹಳ್ಳಿ, ತಾಳಕೆರೆ, ದುಂಡ, ಕಸಬಾದ ಬಾಣಸಂದ್ರ, ಲೋಕಮ್ಮನಹಳ‍್ಳಿ, ಎ.ಹೊಸಹಳ‍್ಳಿ, ಮುನಿಯೂರು, ಕಲ್ಲಬೋರನಹಳ‍್ಳಿ, ಸುಂಕಲಾಪುರ, ಮದಾಪಟ್ಟಣ, ಅರಳೀಕೆರೆ, ಮಲ್ಲಾಘಟ್ಟ, ಗಂಗನಹಳ‍್ಳಿ, ತಾವರೆಕೆರೆಗಳಲ್ಲಿ ‌ರಾಗಿ ನೆಲಕ್ಕೆ ಬಾಗಿದೆ.

ADVERTISEMENT

ಇಲಿ ಪಾಲಾದ ತೆನೆ: ರಾಗಿ ನೆಲ ಕಚ್ಚಿದ್ದರಿಂದ ಇಲಿ, ಹೆಗ್ಗಣಗಳು ತೆನೆಯನ್ನು ತಿನ್ನುತ್ತಿವೆ. ಗಿಳಿ, ನವಿಲು ಸೇರಿದಂತೆ ಅನೇಕ ಹಕ್ಕಿಪಕ್ಷಿಗಳು ರಾಗಿ ತೆನೆಯ ಕಾಳುಗಳನ್ನು ಹೆಕ್ಕಿ ತಿನ್ನುವುದನ್ನು ಕಾಣಬಹುದು. ಅಳಿಲು ಮತ್ತು ಇರುವೆಗಳು ಸಹ ಮುತ್ತಿವೆ.

ಹೊಲ ಕೊಯ್ಲಿಗೆ ಹಿಂದೇಟು: ಆಳೆತ್ತರಕ್ಕೆ ಬೆಳೆದು ನೆಲ ಕಚ್ಚಿರುವ ರಾಗಿ ಕಟಾವು ಮಾಡುವುದು ಕಷ್ಟ. ಇದನ್ನು ಅರಿತ ಕಾರ್ಮಿಕರು ಹೆಚ್ಚು ಕೂಲಿ ನೀಡುತ್ತೇವೆ ಕೆಲಸಕ್ಕೆ ಬನ್ನಿ ಎಂದರೂ ಬರುತ್ತಿಲ್ಲ ಎನ್ನುವ ಗೋಳನ್ನು ರೈತರು ಹೊರ ಹಾಕುವರು. ಯಂತ್ರಗಳಿಂದ ಕಟಾವು ಸಾಧ್ಯವಾಗುವುದಿಲ್ಲ. ಹಾಗೆ ಬಿಟ್ಟರೆ ರಾಗಿ ಹುಲ್ಲು ಗೆದ್ದಲು ಹಿಡಿಯುತ್ತದೆ ಎನ್ನುವ ಆತಂಕ ವ್ಯಕ್ತಪಡಿಸುವರು.

-ಪಾಂಡುರಂಗಯ್ಯ ಎ.ಹೊಸಹಳ್ಳಿ

**

ತಾಲ್ಲೂಕಿನ 4 ಹೋಬಳಿಗಳಲ್ಲೂ ಉತ್ತಮವಾಗಿ ರಾಗಿ ಬಿತ್ತಿದ್ದಾರೆ. ಫಸಲು ರೈತರಿಗೆ ಸಿಗುವ ನಿರೀಕ್ಷೆ ಇತ್ತು. ರೈತರು ಹೆಚ್ಚಿನ ಆತಂಕ ಒಳಗಾಗುವುದು ಬೇಡ. ಇಲಾಖೆ ನೆರವಿಗೆ ಬರುತ್ತದೆ.
-ಡಿ.ಹನುಮಂತರಾಯಪ್ಪ, ಕೃಷಿ ಇಲಾಖೆ ಅಧಿಕಾರಿ

**

ಸಾಲ ಮಾಡಿ ರಾಗಿ ಬಿತ್ತಿದ್ದೆ.  ಹುಲ್ಲು ಹಾಗೂ ರಾಗಿಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ಆಸೆ ಇತ್ತು. ಈಗ ಬಂಡವಾಳ ಸಹ ವಾಪಸ್ ಬರುತ್ತದೆ ಎನ್ನುವ ಗ್ಯಾರೆಂಟಿ ಇಲ್ಲ‌

-ಸಣ್ಣತಿಮ್ಮಯ್ಯ,  ರೈತ, ಅರೆಕುರುಬರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.