ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ

ಬಿಜೆಪಿ ರಾಜ್ಯ ಮಟ್ಟದ ಗೊಲ್ಲ (ಯಾದವ) ಸಮಾವೇಶ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 12:27 IST
Last Updated 24 ಮಾರ್ಚ್ 2018, 12:27 IST

ತುಮಕೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಶ್ರೀಕೃಷ್ಣ ವಂಶಜರಾದ ಗೊಲ್ಲ (ಯಾದವ) ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಹೇಳಿದರು.

ಶುಕ್ರವಾರ ಬಿಜೆಪಿ ಆಯೋಜಿಸಿದ್ದ ರಾಜ್ಯಮಟ್ಟದ ಗೊಲ್ಲ (ಯಾದವ) ಸಮಾವೇಶದಲ್ಲಿ ಮಾತನಾಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಧರ್ಮ ಸ್ಥಾಪನೆ ಸಾಧ್ಯ. ಸಿದ್ದರಾಮಯ್ಯ ಅವರಂತಹವರು ಇರುತ್ತಾರೆ ಎಂಬ ಕಾರಣಕ್ಕೆ ಒಂದು ಬಾರಿ ಧರ್ಮ ಸ್ಥಾಪನೆ ಮಾಡಿದರೆ ಸಾಲದು. ಅಧರ್ಮ ತಲೆ ಎತ್ತಿದಾಗ ಮತ್ತೆ ಸ್ಥಾಪನೆ ಮಾಡಬೇಕು ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿಯೇ ಹೇಳಿದ್ದಾನೆ. ಹೀಗಾಗಿ, ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರದಂತೆ ಎಚ್ಚರಿಕೆ ವಹಿಸಿ ಧರ್ಮ ಸ್ಥಾಪನೆಗೆ ಗೊಲ್ಲ ಸಮುದಾಯ ಸಹಕರಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ವಿಶ್ವೇಶ್ವರಯ್ಯ, ಸಂಗೊಳ್ಳಿ ರಾಯಣ್ಣ, ಒನಕೆ ಒಬವ್ವ ಅವರನ್ನು ಗುಣಗಾನ ಮಾಡದ ಸಿದ್ಧರಾಮಯ್ಯ ಅವರು ಟಿಪ್ಪು ಸುಲ್ತಾನ್, ಬಹುಮನಿ ಸುಲ್ತಾನರನ್ನು ಕೊಂಡಾಡುತ್ತಾರೆ. ಟಿಪ್ಪು ಜಯಂತಿ ಆಚರಣೆ ಮಾಡುತ್ತಾರೆ. ಆದರೆ, ಬಿಜೆಪಿ ಕನ್ನಡ ನಾಡು ನುಡಿ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಲಿದೆ ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಗೊಲ್ಲ ಸಮುದಾಯ ಮನಸ್ಸು ಮಾಡಿದರೆ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಿದೆ. ಸಮಾಜಕ್ಕೆ ಶಕ್ತಿ ಬರಬೇಕಾದರೆ ಸಂಘಟಿತರಾಗಲೇಬೇಕು’ ಎಂದು ಹೇಳಿದರು.

ಗೊಲ್ಲ ಸಮುದಾಯದ ಮುಖಂಡ ಬೆಟ್ಟಸ್ವಾಮಿ ಮಾತನಾಡಿ, ನಿಜವಾದ ಅಹಿಂದ ನಾಯಕರೆಂದರೆ ಬಿ.ಎಸ್.ಯಡಿಯೂರಪ್ಪ. ಈ ಹಿಂದೆ ಬೇರೆ ಪಕ್ಷಗಳು ಗೊಲ್ಲ ಸಮುದಾಯವನ್ನು ರಾಜಕೀಯವಾಗಿ ಬಳಸಿಕೊಂಡವೇ ಹೊರತು ಅಭಿವೃದ್ಧಿಗೆ ಗಮನಹರಿಸಲಿಲ್ಲ ಎಂದು ಹೇಳಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಕಷ್ಟದಲ್ಲಿ ನೆರವಿಗೆ ಧಾವಿಸುವವರೇ ನಮ್ಮವರು ಎಂದು ನಮ್ಮ ತಂದೆ ಎ.ಕೃಷ್ಣಪ್ಪ ಅವರು ಸದಾ ಹೇಳುತ್ತಿದ್ದರು. ಈಗ ಗೊಲ್ಲ ಸಮುದಾಯ ಕಷ್ಟಕ್ಕೆ ಸಿಲುಕಿದೆ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಶಕ್ತಿ ತುಂಬಲು ಬಿಜೆಪಿ ಮುಂದೆ ಬಂದಿದೆ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಈಗ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಮತ ಬ್ಯಾಂಕ್ ಆಗಿ ಬಳಸಿಕೊಂಡ ಪಕ್ಷಗಳಿಗೆ ಬುದ್ಧಿ ಕಲಿಸಬೇಕಿದೆ ಎಂದರು.

ಶಾಸಕ ಬಿ.ಸುರೇಶ್‌ಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಹಿರಿಯ ಮುಖಂಡ ಜಿ.ಎಸ್. ಬಸವರಾಜ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್, ಮುಖಂಡರಾದ ಹೆಬ್ಬಾಕ ರವಿಶಂಕರ್, ಬಿ.ಕೆ.ಮಂಜುನಾಥ್, ಗಂಗಹನುಮಯ್ಯ, ವೈ.ಎಚ್.ಹುಚ್ಚಯ್ಯ, ಕೆ.ಸಿ ಉಮೇಶ್, ಕೆ.ಸಿ.ರಮೇಶ್, ಸಮಾಜದ ಮುಖಂಡರಾದ ಟಿ.ಎಂ. ನಾಗರಾಜ್ ಇದ್ದರು. ಸಮಾಜದ ಮುಖಂಡ ಸಿದ್ದೇಶ್ ಯಾದವ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.