ADVERTISEMENT

ಭಾವಲಹರಿಯ ಪ್ರವಾಹವೇ ಕವನ

ಸಾಹಿತ್ಯಾಸಕ್ತರ ಬಳಗದ ಚಿಗುರು ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 12:24 IST
Last Updated 21 ಮಾರ್ಚ್ 2018, 12:24 IST

ವೈ.ಎನ್.ಹೊಸಕೋಟೆ: ‘ವ್ಯಕ್ತಿಯಲ್ಲಿ ಉಂಟಾಗುವ ಭಾವಲಹರಿಯ ಪ್ರವಾಹವೇ ಕವನ’ ಎಂದು ಯುವ ಸಾಹಿತಿ ಕುಮಾರ್ ಇಂದ್ರಬೆಟ್ಟು ಕುಮಾರ್‌ ತಿಳಿಸಿದರು.

ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿಯು ಗ್ರಾಮದ ಸಾಹಿತ್ಯಾಸಕ್ತರ ಬಳಗ ಸೋಮವಾರದಂದು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ 3ನೇ ವರ್ಷದ ಯುಗಾದಿ ಚಿಗುರು ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಲ್ಲಿ ಅಡಗಿರುವ ಸುಪ್ತ ಭಾವನೆಗಳು ಪದಗಳ ರೂಪ ಪಡೆದು ಕವಿತೆಯಾಗಿ ಹೊರಹೊಮ್ಮುತ್ತವೆ. ಅವು ನೋವು ನಲಿವುಗಳಿಂದ ಕೂಡಿದ ಭಾವನೆಗಳಾಗಿರುತ್ತವೆ. ಈ ಭಾವನೆಗಳಿಗೆ ಪದಸಂಪತ್ತು, ರೂಪಕ ಅಲಂಕಾರಗಳನ್ನು ಜೋಡಿಸಿದರೆ ಉತ್ತಮ ಕವಿತೆಗಳು ಮತ್ತು ಕವಿಗಳು ರೂಪುಗೊಳ್ಳುತ್ತಾರೆ’ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಲೇಖಕ ಹೊ.ಮ.ನಾಗರಾಜು ಮಾತನಾಡಿ, ‘ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟ ಕವಿತೆಗಳು ಸ್ಥಳೀಯ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿವೆ ಮತ್ತು ತಾಲ್ಲೂಕಿನ ಜ್ವಲಂತ ಸಮಸ್ಯೆಗಳಾಗಿ ಉಳಿದಿರುವ ಕುಡಿಯುವ ನೀರು, ಬರಗಾಲ ಮತ್ತು ಪರಿಸರ ನಾಶದ ಬಗ್ಗೆ ಆತಂಕವನ್ನು ತೊರ್ಪಡಿಸುತ್ತಾ ಅರಿವನ್ನು ಕಟ್ಟಿಕೊಡುತ್ತಿವೆ’ ಎಂದರು.

ಹೋಬಳಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಐ.ಎ.ನಾರಾಯಣಪ್ಪ ಮಾತನಾಡಿ, ‘ಈ ಪ್ರದೇಶದಲ್ಲಿ ಸಾಹಿತ್ಯ ಬೆಳವಣಿಗೆ ಅಗತ್ಯವಾಗಿದೆ. ಕವಿಗೋಷ್ಠಿ ಕಾರ್ಯಕ್ರಮ ಈ ನಿಟ್ಟಿನಲ್ಲಿ ಸೂಕ್ತವಾಗಿದೆ ಮತ್ತು ಕಾವ್ಯ ಕಮ್ಮಟಗಳು ಅಗತ್ಯವಾಗಿದೆ’ ಎಂದು ತಿಳಿಸಿದರು.

ಡಿ.ವಿ.ಗುಂಡಪ್ಪ ಮತ್ತು ರಾಷ್ಟ್ರಕವಿ ಗೋವಿಂದ ಪೈ ಅವರ ಜನ್ಮ ದಿನಾಚರಣೆಯ ಆಚರಿಸಿ ಅವರ ಜೀವನ ಚಿತ್ರಣ ವಿವರಿಸಲಾಯಿತು.

ಯುವ ಕವಿಗಳಾದ ಯರ‍್ರಮ್ಮನಹಳ್ಳಿ ರಾಮಾಂಜಿ, ಕೃಷ್ಣಕುಮಾರ್, ಎಸ್.ಎಸ್.ರಘುನಂದನ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಕವನ ವಾಚನ ಮಾಡಿದರು. ಸತ್ಯನಾರಾಯಣಚಾರಿ, ರಾಮಚಂದ್ರ, ರಾಜಪ್ಪ, ನೂರುದ್ದೀನ್, ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.