ADVERTISEMENT

ಮಿತಿಮೀರಿದ ನಾಯಿಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 9:34 IST
Last Updated 7 ನವೆಂಬರ್ 2017, 9:34 IST
ಚಿಕ್ಕನಾತಯಕನಹಳ್ಳಿ ಪಟ್ಟಣದ ಖಾಸಗಿ ಬಸ್ಸ್ಟಾಂಡ್ ಎದುರು ಫೆರೆಡ್ ಹೊರಟಿರುವ ಬೀದಿನಾಯಿಗಳು
ಚಿಕ್ಕನಾತಯಕನಹಳ್ಳಿ ಪಟ್ಟಣದ ಖಾಸಗಿ ಬಸ್ಸ್ಟಾಂಡ್ ಎದುರು ಫೆರೆಡ್ ಹೊರಟಿರುವ ಬೀದಿನಾಯಿಗಳು   

ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು ಹಾಗೂ ದೊಡ್ಡವರ ಮೇಲೆ ನಾಯಿಗಳ ದಾಳಿ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಭಯ ಮನೆ ಮಾಡಿದೆ. ಶನಿವಾರ ಪಟ್ಟಣದಲ್ಲಿ ಹತ್ತು ನಾಯಿಗಳ ಗುಂಪೊಂದು ಏಕಾಏಕಿ ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿವೆ. ಜೋಗಿಹಳ್ಳಿ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ 3 ನಾಯಿಗಳ ಗುಂಪು ಹಂದಿ ಮರಿಯನ್ನು ಎಳೆದಾಡಿ ತಿಂದು ಹಾಕಿವೆ. ಕಳೆದ ನಾಲ್ಕು ದಿನಗಳಲ್ಲಿ 5 ಜನರಿಗೆ ನಾಯಿಕಡಿತಕ್ಕೆ ತುತ್ತಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಸಾರ್ವಜನಿಕರನ್ನು ಬೆಚ್ಚಿಬೀಳಿಸಿವೆ.

ಖಾಸಗಿ ಬಸ್ಟ್ಯಾಂಡ್, ಬನಶಂಕರಿ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ಕುರುಬರ ಹಳ್ಳಿ ರಸ್ತೆ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಖಾಸಗಿ ಬಸ್‌ಸ್ಟ್ಯಾಂಡ್‌ ಪಕ್ಕ ಇರುವ ಕೋಳಿ ಅಂಗಡಿಗಳ ಸಮಚ್ಛಯವೇ ಇದಕ್ಕೆ ಕಾರಣ. ಕೋಳಿ ವ್ಯಾಪಾರಿಗಳು ಕೋಳಿ ತ್ಯಾಜ್ಯವನ್ನು ಪಕ್ಕದಲ್ಲೇ ಇರುವ ಪಾಳು ಬಾವಿಗೆ ಹಾಕುತ್ತಿದ್ದು, ನಾಯಿಗಳು ಅಲ್ಲಿ ಜಮಾಯಿಸುತ್ತವೆ. ಮಾಂಸದ ರುಚಿ ಕಂಡಿರುವ ನಾಯಿಗಳು ಮನುಷ್ಯರು ಹಾಗೂ ಸಾಕು ಪ್ರಾಣಿಗಳ ಮೇಲೆ ಎರಗುತ್ತಿವೆ ಎಂಬುದು ಸಾರ್ವಜನಿಕರ ಆರೋಪ.

ಈ ಕುರಿತ ಪುರಸಭೆ ಸದಸ್ಯ ಮಾತನಾಡಿ, ‘ಕೋಳಿ ಮಾರುಕಟ್ಟೆ ಪಟ್ಟಣದ ಹೃದಯಭಾಗವಾದ ಖಾಸಗಿ ಬಸ್‌ಸ್ಟ್ಯಾಂಡ್‌ ಬಳಿ ಇರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸುತ್ತಮುತ್ತಲಿನ ಬಡಾವಣೆಗಳಿಗೆ ಕೋಳಿ ತ್ಯಾಜ್ಯದಿಂದ ತೊಂದರೆಯಾಗುತ್ತಿದೆ.

ADVERTISEMENT

ನಾಯಿಗಳ ಹಾವಳಿಗೂ ಕಾರಣವಾಗುತ್ತಿದೆ ಎಂಬ ದೂರುಗಳು ಬಂದಿವೆ. ಕೋಳಿ ಮಾರಾಟ ಮಳಿಗೆಗಳು ಖಾಸಗಿ ಜಾಗದಲ್ಲಿ ಇರುವುದರಿಂದ ಪುರಸಭೆ ವತಿಯಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಮೂಹಿಕ ಕೋಳಿ ಮಳಿಗೆಗಳನ್ನು ನಿರ್ಮಿಸಲು ಪಟ್ಟಣದ ವ್ಯಾಪ್ತಿಯಲ್ಲಿ ಜಾಗ ಗುರುತಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದರು.

ಪುರಸಭೆ ವತಿಯಿಂದ ತ್ಯಾಜ್ಯ ಸಂಗ್ರಹಣಾ ತೊಟ್ಟಿಗಳನ್ನು ಇಡಲಾಗಿದೆ. ಪ್ರತೀ ಅಂಗಡಿಯವರೂ ತ್ಯಾಜ್ಯ ನಿರ್ವಹಣೆಗೆ ನಿತ್ಯ ₹ 10ರಂತೆ ಪುರಸಭೆಗೆ ನೀಡುತ್ತಿದ್ದೇವೆ. ನಿತ್ಯ ಕೋಳಿ ತ್ಯಾಜ್ಯವನ್ನು ವರ್ಗಾಯಿಸಲಾಗುತ್ತದೆ. ಪುರಸಭೆಯವರು ನಿಯಮಿತವಾಗಿ ಕಸ ತೆಗೆಯದೇ ಇರುವುದರಿಂದ ಸಮಸ್ಯೆ ಆಗಿದೆ ಎಂದು ಕೋಳಿ ಅಂಗಡಿ ಮಾಲೀಕರು ದೂರುತ್ತಾರೆ.

ನಾಯಿ ಕಡಿತಕ್ಕೆ ಔಷಧಿ ಇಲ್ಲ: ಪಟ್ಟಣದ ಬಸವೇಶ್ವರ ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಹುಚ್ಚು ನಾಯಿಯೊಂದು 11ವರ್ಷದ ವೇದ ಎಂಬ ಮಗುವಿಗೆ ಕಡಿದಿದ್ದು, ಪೋಷಕ ಜಯರಾಮ್ ಎಂಬುವರು ಮಗುವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಆದರೆ ಹುಚ್ಚು ನಾಯಿ ಕಡಿದ ಪರಿಣಾಮ ಅದಕ್ಕೆ ಚಿಕಿತ್ಸೆಗೆ ಔಷಧಿ ಇಲ್ಲದೇ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಬರೆದುಕೊಟ್ಟಿದ್ದಾರೆ. ಅದರಂತೆ ಮಗುವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ, ವೈದ್ಯರಿಗೆ ತೋರಿಸಿದಾಗ ಅವರು ಔಷಧಿಯನ್ನು ಖಾಸಗಿ ಔಷಧಿ ಅಂಗಡಿಯಿಂದ ತರುವಂತೆ ತಿಳಿಸಿರುತ್ತಾರೆ. ಪೋಷಕರು ಖಾಸಗಿ ಅಂಗಡಿಯಲ್ಲಿ ₹ 5,287 ಕೊಟ್ಟು ಔಷಧಿಯನ್ನು ತಂದು ಚಿಕಿತ್ಸೆ ಕೊಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.