ADVERTISEMENT

ಮುನಿಯಪ್ಪಸ್ವಾಮಿ ರಥೋತ್ಸವ ವಿಜೃಂಭಣೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 6:52 IST
Last Updated 13 ಡಿಸೆಂಬರ್ 2017, 6:52 IST

ತಿಪಟೂರು: ತಾಲ್ಲೂಕಿನ ಬಾಗುವಾಳ ಆಲದಮರ ಮುನಿಯಪ್ಪಸ್ವಾಮಿ ಕ್ಷೇತ್ರದಲ್ಲಿ ಮುನಿಯಪ್ಪ ಸ್ವಾಮಿ ರಥೋತ್ಸವ ಸೋಮವಾರ ಕೆರೆಗೋಡಿ-ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ರಥದ ಮೇಲೆ ಭಕ್ತರು ಹೂವು, ಬಾಳೆ ಹಣ್ಣು ಎಸೆಯುವ ಮೂಲಕ ಹರಕೆ ತೀರಿಸಿದರು. ರಥೋತ್ಸವದ ನಂತರ ಸ್ವಾಮೀಜಿ ಮಾತನಾಡಿ, ‘ಇದು ಜನ ಮತ್ತು ಜಾನುವಾರುಗಳ ವಿಶೇಷ ಗ್ರಾಮೀಣ ಸೊಗಡಿನ ಜಾತ್ರೆಯಾಗಿದೆ’ ಎಂದರು.

‘ಈ ಭಾಗದ 20ಕ್ಕೂ ಹೆಚ್ಚು ಗ್ರಾಮಗಳ ರೈತರು ವರ್ಷಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ಈ ವೇಳೆಯಲ್ಲಿ ಜಾನುವಾರುಗಳನ್ನು ಕೊಡು-ಕೊಳ್ಳುವ ಉದ್ದೇಶದಿಂದ ಸೇರುತ್ತಾರೆ. ಹಾಗೆಯೇ ಜಾನಪದ ಸೊಗಡಿನ ಈ ಜಾತ್ರೆಯಲ್ಲಿ ಜನರು ತಮ್ಮ ಶಾಂತಿ, ನೆಮ್ಮದಿ ಹಾಗೂ ಇಷ್ಟಾರ್ಥಗಳ ಈಡೇರಿಕೆಗಾಗಿ ಬಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ’ ಎಂದರು.

‘ಎಲ್ಲರೂ ಹಿರಿಯರ ಮಾರ್ಗದರ್ಶನ, ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕು ಸಾಗಿಸಿದಲ್ಲಿ ಸ್ವಾಭಿಮಾನಿ-ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ’ ಎಂದರು.

ADVERTISEMENT

ಅರಸೀಕೆರೆ ತಾಲ್ಲೂಕು ಮಾಡಾಳು ರುದ್ರಮುನಿಸ್ವಾಮೀಜಿ, ಶಾಸಕ ಕೆ. ಷಡಕ್ಷರಿ, ಜೆಡಿಎಸ್ ಮುಖಂಡ ಲೋಕೇಶ್ವರ, ಮುಖಂಡ ಬಿ. ನಂಜಾಮರಿ, ಬಿ.ಸಿ.ನಾಗೇಶ್, ಸಮಾಜ ಸೇವಕ ಕೆ.ಟಿ. ಶಾಂತಕುಮಾರ್, ಜಿ.ಪಂ. ಸದಸ್ಯ ಜಿ. ನಾರಾಯಣ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶಂಕರ್, ಗುಡಿಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷ ಕುಮಾರ್ ಪಾಲ್ಗೊಂಡಿದ್ದರು. ಜಾತ್ರೆಗೆ ಕೆ.ಎಸ್‍.ಆರ್‍.ಟಿ.ಸಿ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು.

ಹುಳಿಯಾರು: ಸಮೀಪದ ಸೋಮಜ್ಜನಪಾಳ್ಯದಲ್ಲಿ ಅಂತರಗಟ್ಟಮ್ಮ ದೇವಿಯ ದೇಗುಲ ಪ್ರಾರಂಭೋತ್ಸವದ ಮಂಡಲಪೂಜೆ ಮಂಗಳವಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಎರಡು ದಿನ ಹಿಂದೂಪುರದ ಋತ್ವಿಜರಾದ ಸುಭ್ರಾಯ ಶರ್ಮ ಮತ್ತು ಸಂಗಡಿಗರಿಂದ ನಡೆಯಿತು. ಹುಳಿಯಾರು ಗ್ರಾಮದೇವತೆಗಳಾದ ದುರ್ಗಾಪರಮೇಶ್ವರಿ, ಹುಳಿಯಾರಮ್ಮನವರ ಆಗಮನದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು.

ಗಂಗಾಪೂಜೆ, ಸ್ವಸ್ಥಿವಾಚನ, ದೇವನಾಂದಿ, ಕಲಶ ಸ್ಥಾಪನೆ,ಚಂಡಿಪಾರಾಯಣ, ಗಣಪತಿ ನವಗ್ರಹ ಜಪಹೋಮ, ಸಹಸ್ರನಾಮಾರ್ಚನೆ ನಡೆಯಿತು. ಅಭಿಷೇಕ, ಅರ್ಚನೆ, ಕುಮಾರಿಪೂಜೆ, ಸುಹಾಸಿನಿ ಪೂಜೆ ನಡೆದು ಚಂಡಿಯಾಗ, ರುದ್ರಯಾಗದ ನಂತರ ಬಲಿಪೂರ್ಣಾಹುತಿ ಸಲ್ಲಿಸಲಾಯಿತು. ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಅಂತರಗಟ್ಟಮ್ಮ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಿವನಂಜಪ್ಪ, ಅಧ್ಯಕ್ಷ ದುರ್ಗಯ್ಯ, ಎಸ್.ಸಿ.ಬೀರಲಿಂಗಯ್ಯ, ಶಿವಯ್ಯ, ಬಾಲರಾಜು, ಕೃಷ್ಣಮೂರ್ತಿ, ಉಮೇಶ್, ನಾಗಪ್ಪ, ನಾಗರಾಜು, ಕರಿಯಪ್ಪ, ಕಾಂತರಾಜು, ಅನಸೂಯಮ್ಮ, ದಾಕ್ಷಾಯಣಮ್ಮ, ದುರ್ಗಮ್ಮ ದೇಗುಲದ ಕನ್ವೀನಿಯರ್ ಹು.ಕೃ.ವಿಶ್ವನಾಥ್, ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲೋಕೇಶಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.