ADVERTISEMENT

ರಾಮಾನುಜಾಚಾರ್ಯರ ಜಯಂತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 11:12 IST
Last Updated 7 ಜುಲೈ 2017, 11:12 IST

ತುಮಕೂರು: ‘ಎಲ್ಲ ಮಹಾಪುರುಷರ ಜಯಂತಿ ಆಚರಿಸುವಂತೆ ಸರ್ಕಾರಿ ಗೌರವಗಳೊಂದಿಗೆ ಸರ್ಕಾರ ರಾಮಾನುಜಾಚಾರ್ಯರ ಜಯಂತಿಯನ್ನೂ ಆಚರಿಸಬೇಕು’ ಎಂದು ಅಖಿಲ ಕರ್ನಾಟಕ ವೈಷ್ಣವ ಮಹಾಸಭಾ ರಾಜ್ಯ ಸಂಚಾಲಕ ಸಾಲಕಟ್ಟೆ ಶ್ರೀನಿವಾಸ್ ಆಗ್ರಹಿಸಿದರು.

ರಾಮಾನುಜಾಚಾರ್ಯ ಸಹಸ್ರಮಾನೋತ್ಸವ ಆಚರಣೆ ಬಗ್ಗೆ ರಾಜ್ಯ ಸರ್ಕಾರ ತೋರಿರುವ ನಿರ್ಲಕ್ಷ್ಯ ಖಂಡಿಸಿ ಅಖಿಲ ಕರ್ನಾಟಕ ವೈಷ್ಣವ ಮಹಾಸಭಾ, ರಾಮಾನುಜ ಸೇವಾ ಸಮಿತಿ ಹಾಗೂ ಜಿಲ್ಲಾ ವೈಷ್ಣವ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರ, ರಾಮನುಜಾಚಾರ್ಯರ ಜಯಂತಿ ಆಚರಿಸದಿದ್ದರೆ ರಾಜ್ಯದಾದ್ಯಂತ ವೈಷ್ಣವ ಸಮುದಾಯದವರು ಸಾಮೂಹಿಕವಾಗಿ ಮುಂಬರುವ ಚುನಾವಣೆ ಬಹಿಷ್ಕರಿಸಲಿದ್ದಾರೆ’ ಎಂದರು. ಅಖಿಲ ಕರ್ನಾಟಕ ವೈಷ್ಣವ ಸಭಾ ಜಂಟಿ ಕಾರ್ಯದರ್ಶಿ ಜಯರಾಮ್‌ ಮಾತನಾಡಿ, ‘ಆಚಾರ್ಯರ ಸಹಸ್ರಮಾನೋತ್ಸವ ಆಚರಣೆಗೆ ಸರ್ಕಾರ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸಬೇಕಾಗಿದೆ’ ಎಂದರು.

ADVERTISEMENT

‘ರಾಮಾನುಜಾಚಾರ್ಯರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸರ್ಕಾರ ಗೌರವಿಸಬೇಕು. ಆಚಾರ್ಯರಿಗೆ ಅವಮಾನಿಸಿದರೆ ವೈಷ್ಣವ ಸಮಾಜಕ್ಕೆ ಆಗೌರವ ತೋರಿದಂತೆ’ ಎಂದರು. ಜಿಲ್ಲಾ ಮಟ್ಟದ ಅರ್ಚಕ ಸಂಘದ ಅಧ್ಯಕ್ಷ ರಾಮತೀರ್ಥನ್ ಮಾತನಾಡಿ, ‘ವೈಷ್ಣವ ಸಮಾಜದವರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸಮಾಜ ಅಲ್ಪಸಂಖ್ಯಾತವಾಗಿದೆ ಎಂಬ ಮನೋಭಾವದಿಂದಾಗಿ ನಮ್ಮನ್ನು ತುಳಿಯಲಾಗಿದೆ’ ಎಂದು ದೂರಿದರು.

‘ರಾಮಾನುಜಾಚಾರ್ಯರು ದೀನ ದಲಿತರ ಬಗ್ಗೆ ಹೋರಾಟ ಮಾಡಿ ಸಮಾನತೆ ದೊರಕಿಸಿ ಕೊಟ್ಟವರು. ಗ್ರಾಮಗಳಿಗೆ ಕೆರೆ ಕಟ್ಟೆ ನಿರ್ಮಿಸಿ ಜನರಿಗೆ ಸುಭಿಕ್ಷೆ ನೀಡಿದವರು. ಅಂತಹವರನ್ನು ಸರ್ಕಾರ ಕಡೆಗಣಿಸಿದೆ’ ಎಂದು ಆರೋಪಿಸಿದರು.

ಧರಣಿಗೂ ಮೊದಲು ಟೌನ್‌ಹಾಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ವಕೀಲ ರಘು ಮಾತನಾಡಿದರು. ಅಖಿಲ ಕರ್ನಾಟಕ ವೈಷ್ಣವ ಸಂಘದ ಅಧ್ಯಕ್ಷ ಎನ್.ಎಲ್.ನಾರಾಯಣ ಸ್ವಾಮಿ, ನಿರ್ದೇಶಕ ಭಾಸ್ಕರ್, ಎಸ್. ಪದ್ಮನಾಭ್, ಜಗನ್ನಾಥ್, ಗೋಪಾಲಯ್ಯ, ಅನಂತು, ವಿಜಯ ಕುಮಾರ್ ಇದ್ದರು.

ಬೆಂಗಳೂರಿನಲ್ಲಿ ಪ್ರತಿಭಟನೆ
ಇತರ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ವೈಷ್ಣವ ಮಹಾಸಭಾದಿಂದ ಆಗಸ್ಟ್ ಮೊದಲ ವಾರದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ಪ್ರತಿಭಟನೆಯಲ್ಲಿ ಸಮುದಾಯದ 8 ಲಕ್ಷ ಜನರು ಭಾಗವಹಿಸುವರು.
ಸಾಲಕಟ್ಟೆ ಶ್ರೀನಿವಾಸ್‌, ವೈಷ್ಣವ ಮಹಾಸಭಾ ರಾಜ್ಯ ಸಂಚಾಲಕ.

ವೈಷ್ಣವ ಸಮಾಜದ ಬೇಡಿಕೆಗಳು
* ರಾಮಾನುಜಾಚಾರ್ಯರ ಜಂಯತಿಯನ್ನು ಪ್ರತಿ ವರ್ಷ ಸರ್ಕಾರದಿಂದ ಆಚರಿಸಬೇಕು.
* ವೈಷ್ಣವ, ಶಾತ್ತಾದ ವೈಷ್ಣವ, ಸಾತಾನಿ, ಸಮಯರಾಯ, ಖದ್ರಿ ವೈಷ್ಣವ, ಸಾತಾದವಲ್‌ ಎಂದು ಕರೆಯಲಾಗುವ ಎಲ್ಲ ಪಂಗಡಗಳನ್ನು ವೈಷ್ಣವ ಎಂದು ಉಲ್ಲೇಖಿಸಬೇಕು.
* ಆರ್ಥಿಕತೆ ಆಧಾರದ ಮೇಲೆ ಮೀಸಲಾತಿ ನೀಡಬೇಕು.
* ವೈಷ್ಣವ ಜನಾಂಗ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವುದರಿಂದ ಅಲ್ಪಸಂಖ್ಯಾತರು ಎಂದು ಪರಿಗಣಿಸಬೇಕು.
* ಹಳ್ಳಿಗಳಲ್ಲಿ ಅರ್ಚಕ ವೃತ್ತಿ ನಡೆಸುತ್ತಿರುವ ಕುಟುಂಬಗಳಿಗೆ ನಿವೇಶನ ಹಾಗೂ ಮನೆ ಒದಗಿಸಿಕೊಡಬೇಕು.
* ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಆಗಮ ಪಾಠಶಾಲೆ ತೆರೆಯಬೇಕು.
* ಪ್ರತಿ ಜಿಲ್ಲೆಗೆ ಒಂದರಂತೆ ರಾಮಾನುಜ ಭವನ ನಿರ್ಮಿಸಿ ಕೊಡಬೇಕು.
* ಜನಾಂಗದ ಅಭಿವೃದ್ಧಿಗೆ ವೈಷ್ಣವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
* ಮುಜರಾಯಿ ವ್ಯಾಪ್ತಿಗೆ ಸೇರಿರದ ದೇವಾಲಯಗಳಲ್ಲಿ ಅರ್ಚಕ ವೃತ್ತಿ ನಡೆಸುತ್ತಿರುವವರಿಗೆ ತಸ್ತಿಕ್‌ ಹಣ ನೀಡಬೇಕು.

* * 

ವೈಷ್ಣವರು ಎಂದೂ ಬೀದಿಗಿಳಿದು ಘೋಷಣೆ ಕೂಗಿದ ಹಾಗೂ ಪ್ರತಿಭಟನೆ ಮಾಡಿದ ಉದಾಹರಣೆಗಳಿಲ್ಲ. ಆದರೆ ಅಂತಹವರನ್ನು ಸರ್ಕಾರ ಇಂದು ಬೀದಿಗಿಳಿಸಿದೆ
ರಾಮತೀರ್ಥನ್, ಜಿಲ್ಲಾಮಟ್ಟದ ಆರ್ಚಕ ಸಂಘದ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.