ADVERTISEMENT

ವಿದ್ಯಾರ್ಥಿ ನಿಲಯದ ಗೋಳು, ಕೇಳುವರ‍್ಯಾರು?

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 9:19 IST
Last Updated 11 ನವೆಂಬರ್ 2017, 9:19 IST
ವಿದ್ಯಾರ್ಥಿ ನಿಲಯದ ಒಳನೋಟ
ವಿದ್ಯಾರ್ಥಿ ನಿಲಯದ ಒಳನೋಟ   

ತುಮಕೂರು: ಈಗಲೋ ಆಗಲೋ ಕುಸಿದು ಬೀಳುವಂತಿರುವ ಕಟ್ಟಡ, ಹಾಳಾಗಿ ತಿಂಗಳುಗಳೇ ಕಳೆದರೂ ದುರಸ್ಥಿ ಕಾಣದ ವಾಟರ್‌ ಫಿಲ್ಟರ್‌, ಸಿಬ್ಬಂದಿ ಕೊರತೆ, ರುಚಿಯೇ ಇಲ್ಲದ ಅಡುಗೆ...ಇದು ನಗರದ ಎಸ್‌.ಎಸ್‌.ಪುರಂನಲ್ಲಿರುವ ಸರ್ಕಾರಿ ಮೆಟ್ರಿಕ್‌ ನಂತರದ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯದ ದುಸ್ಥಿತಿ.

ಸಮಾಜ ಕಲ್ಯಾಣ ಇಲಾಖೆಯ ಆಡಳಿತಕ್ಕೆ ಒಳಪಡುವ ಈ ವಿದ್ಯಾರ್ಥಿ ನಿಲಯದಲ್ಲಿ ಬಹುತೇಕ ನಗರದ ಕಾನೂನು, ಶಿಕ್ಷಣ ಮತ್ತಿತರ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೇ ಪ್ರವೇಶ ಪಡೆದಿದ್ದಾರೆ. ಆದರೆ ಇದು ಹೆಸರಿಗಷ್ಟೇ ವಿದ್ಯಾರ್ಥಿ ನಿಲಯ, ಆದರೆ ವಿದ್ಯಾರ್ಥಿ ನಿಲಯದ ಯಾವೊಂದು ಲಕ್ಷಣಗಳು ಇಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು.

ಬಾಡಿಗೆ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಉಳಿಯಲು ಯಾವುದೇ ಸೌಲಭ್ಯವಿಲ್ಲ. ಆದರೆ ಊಟದ ವ್ಯವಸ್ಥೆಯನ್ನು ಮಾತ್ರ ಒದಗಿಸುತ್ತಾ ಬರಲಾಗುತ್ತಿದೆ. ನೀಡುವುದೊಂದೆ ಸೌಲಭ್ಯ. ಅದನ್ನಾದರೂ ಸರಿಯಾಗಿ ನೀಡಿದರೆ ಸಾಕು ಎನ್ನುವುದು ಅವರ ಅಭಿಪ್ರಾಯ.

ADVERTISEMENT

‘ಕಟ್ಟಡದಲ್ಲಿ ಊಟದ ವ್ಯವಸ್ಥೆ ಮಾತ್ರ ಇದೆ. ಹಲವು ಬಾರಿ ವಸತಿ ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಿಕೊಂಡರೂ, ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ವಸತಿ ನಿಲಯದಲ್ಲಿ ಪ್ರವೇಶವಿರುವುದರಿಂದ ಯಾವುದೇ ಶಿಷ್ಯ ವೇತನಗಳನ್ನು ಕೂಡ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾದರೇ ಬಡವರಾದ ನಾವು ಬಾಡಿಗೆ ರೂಮು ಮಾಡಿಕೊಂಡು ಓದುವುದಾದರೂ ಹೇಗೆ?’ ಎನ್ನುತ್ತಾರೆ ಕಾನೂನು ವಿದ್ಯಾರ್ಥಿ ಜೆ.ಸಿ.ನಾಗರಾಜು.

‘ಇಲ್ಲಿ ನೀಡುವ ಊಟದಲ್ಲಂತೂ ಯಾವುದೇ ರುಚಿ ಇರುವುದಿಲ್ಲ. ಇಲಾಖೆಯ ನಿಯಮದ ಪ್ರಕಾರ ತಿಂಗಳಿಗೆ ಎರಡು ಬಾರಿ ಚಿಕನ್‌ ಊಟ, ಎರಡು ದಿನಕ್ಕೊಮ್ಮೆ ಮೊಟ್ಟೆ ನೀಡಬೇಕು ಎಂದಿದೆ. ಆದರೆ ಇಲ್ಲಿ ಈ ನಿಯಮಗಳ್ಯಾವುದು ಅನ್ವಯವಾಗುತ್ತಿಲ್ಲ. ಮಧ್ಯಾಹ್ನದ ಊಟವನ್ನೂ ಹಲವು ತಿಂಗಳಿನಿಂದ ನೀಡುತ್ತಿಲ್ಲ’ ಎನ್ನುತ್ತಾರೆ.

‘ಹೆಚ್ಚಿನ ವಿದ್ಯಾರ್ಥಿಗಳು ಪದವಿ ಜತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಓದುತ್ತಿದ್ದಾರೆ. ಆದರೆ ಅವರು ಆರೋಗ್ಯವಾಗಿ ಓದಬೇಕಾದರೆ ಉತ್ತಮ ಗುಣಮಟ್ಟದ ಆಹಾರದ ಅವಶ್ಯಕತೆಯೂ ಇದೆ’ ಎನ್ನುತ್ತಾರೆ ನಾಗರಾಜು.

‘ಇಲ್ಲಿಯ ಕಟ್ಟಡ ಬಹಳ ಹಳೆಯದಾಗಿದ್ದು, ವಿದ್ಯಾರ್ಥಿಗಳು ಜೀವ ಭಯದಲ್ಲಿಯೇ ಇಲ್ಲಿ ಬಂದು ಊಟ ಮಾಡಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವು ದಿನಗಳ ಹಿಂದೆ ಕಟ್ಟಡದ ಮೇಲ್ಛಾವಣಿಯ ತುಕಡಿ ಕುಸಿದಿತ್ತು. ಯಾವುದೇ ಅಪಘಾತ ಸಂಭವಿಸಿಲ್ಲ’ ಎನ್ನುತ್ತಾರೆ ವಿದ್ಯಾರ್ಥಿ ಡಿ.ಸಿ.ನರಸಿಂಹಮೂರ್ತಿ.

‘ಇಲ್ಲಿರುವ ಕುಡಿಯುವ ನೀರಿನ ಫಿಲ್ಟರ್‌ ಹಾಳಾಗಿ ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೂ ದುರಸ್ಥಿ ಮಾಡಿಲ್ಲ. ಮೊದಲೇ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಶುದ್ಧ ಕುಡಿಯುವ ನೀರನ್ನು ಓದಗಿಸಲು ಸಾಧ್ಯವಾಗದಿದ್ದರೆ ಇಲ್ಲಿನ ವಿದ್ಯಾರ್ಥಿಗಳ ಆರೋಗ್ಯಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.