ADVERTISEMENT

ವಿರೋಧ ಪಕ್ಷಗಳನ್ನು ನಿದ್ದೆಗೆಡಿಸಿದೆ: ಜಿಎಸ್‌ಬಿ

ದಲಿತರ ಮನೆಯಲ್ಲಿ ಉಪಹಾರ ಸೇವನೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:01 IST
Last Updated 22 ಮೇ 2017, 5:01 IST

ತುಮಕೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ದಲಿತರ ಮನೆಯಲ್ಲಿ ಉಪಹಾರ ಮಾಡಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರನ್ನು ನಿದ್ದೆಗೆಡಿಸಿದೆ’ ಎಂದು ಬಿಜೆಪಿ ಅಭಿವೃದ್ಧಿ, ಮಾಹಿತಿ ಪ್ರಕೋಷ್ಠದ ಸಂಚಾಲಕ ಜಿ.ಎಸ್.ಬಸವರಾಜ್ ಹೇಳಿದರು.

‘ದಲಿತರ ಮನೆಯಲ್ಲಿ ಉಪಹಾರ ಸೇವಿಸಿರುವುದು ಐತಿಹಾಸಿಕ ಕಾರ್ಯಕ್ರಮ. ಭವಿಷ್ಯದಲ್ಲೂ ಇದು ನಿರಂತರ ಮುಂದುವರಿಯಲಿದೆ. ಆದರೆ, ವಿರೋಧ ಪಕ್ಷಗಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ತುಮಕೂರು ಮತ್ತು ಗುಬ್ಬಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ಕಂಡು ಕಾಂಗ್ರೆಸ್ ಮತ್ತು ಜೆಡಿಎಸ್‌ನವರಿಗೆ ನಡುಕ ಹುಟ್ಟಿದೆ. ಅಷ್ಟು ಜನರು ಸೇರುತ್ತಾರೆ ಎಂದು ಭಾವಿಸಿರಲಿಲ್ಲ. ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಇದರಿಂದ ಹತಾಶೆಗೊಂಡ ವಿರೋಧ ಪಕ್ಷಗಳ ಮುಖಂಡರು ಮನಬಂದಂತೆ ಟೀಕಿಸುತ್ತಿರುವುದು ಸರಿಯಲ್ಲ’ ಎಂದರು.

‘ಹನುಮಂತಪ್ಪ ಅವರು ದಲಿತ ಕಾಲೊನಿ ನಿವಾಸಿ. ಅವರ ಮಗ ಮಧು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರು. ತಮ್ಮ ಮನೆಯಲ್ಲೇ ಉಪಹಾರಕ್ಕೆ ಬರಬೇಕು ಎಂದು ಆಹ್ವಾನ ನೀಡಿದ್ದರಿಂದ ಮುಖಂಡರು ಉಪಹಾರಕ್ಕೆ ಹೋಗಿದ್ದರು. 30 ಮಂದಿಗಾಗುವಷ್ಟು ತಿಂಡಿ ತಯಾರಿಸಿದ್ದರು. ಹೆಚ್ಚಿನ ಮುಖಂಡರು, ಪದಾಧಿಕಾರಿಗಳು ಬಂದಿದ್ದರಿಂದ ಹೊಟೇಲ್‌ನಿಂದ ತರಿಸಿ ಕೊಡಲಾಗಿದೆ. ಇದನ್ನೇ ತಪ್ಪಾಗಿ ಗ್ರಹಿಸಿ ದಲಿತರ ಮನೆಯಲ್ಲಿ ಬಿಜೆಪಿ ಮುಖಂಡರು ಹೊಟೇಲ್‌ನಿಂದ ತರಿಸಿ ಉಪಹಾರ ಸೇವಿಸಿದ್ದಾರೆ ಎಂದು ಟೀಕಿಸುವುದು ದಲಿತರಿಗೆ ಅವಮಾನ ಮಾಡಿದಂತೆ’ ಎಂದು ಹೇಳಿದರು.

‘ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಸೇರಿ ಅನೇಕರು ಟೀಕಿಸಿದ್ದಾರೆ. ಟೀಕಿಸುವ ಮುನ್ನ ವಿಚಾರಿಸಬೇಕಿತ್ತು. ಪರಮೇಶ್ವರ್ ದಲಿತರ ಮನೆಯಲ್ಲಿ ಊಟ ಮಾಡಿಲ್ಲ’ ಎಂದು ತಿಳಿಸಿದರು. ಬಿಜೆಪಿ ವಕ್ತಾರ ಹಾಲನೂರು ಲೇಪಾಕ್ಷ ಗೋಷ್ಠಿಯಲ್ಲಿದ್ದರು.

ನಮ್ಮ ಮನೆ ಉಪಹಾರ ಕ್ರಮ ನಿಮಗ್ಯಾಕೆ?
‘ಬಿ.ಎಸ್.ಯಡಿಯೂರಪ್ಪ ಹಾಗೂ ಮುಖಂಡರು ನಮ್ಮ ಮನೆಯಲ್ಲಿ ಉಪಹಾರ ಮಾಡಿದ್ದಾರೆ. ನಮ್ಮ ಮನೆಯ ಉಪಹಾರದ ಕ್ರಮ ನಿಮಗೇಕೆ’ ಎಂದು ಬಿಜೆಪಿ ಮುಖಂಡರಿಗೆ ಆತಿಥ್ಯ ನೀಡಿದ್ದ ಹನುಮಂತರಾಯಪ್ಪ ಮತ್ತು ಅವರ ಮಗ ಮಧು ಪ್ರಶ್ನಿಸಿದರು.

ನಮ್ಮ ಮನೆಯಲ್ಲಿಯೇ ಉಪಹಾರ ಮಾಡಿರಲಿ. ಅಥವಾ ಬೇರೆ ಕಡೆಯಿಂದ ತರಿಸಿರಲಿ. ಅದರ ಉಸಾಬರಿ ಬೇರೆಯವರಿಗೇಕೆ? ‘ಯಡಿಯೂರಪ್ಪ  ಮನೆಗೆ ಬರುತ್ತಾರೆ ಎಂಬ ಸಂತೋಷದಲ್ಲಿ ಮನೆ ಮಂದಿಯೆಲ್ಲ ಬೆಳಗಿನ ಜಾವ ಎದ್ದು  ಕೇಸರಿಬಾತ್, ಇಡ್ಲಿ ತಯಾರಿಸಿದ್ದೆವು. 30 ಜನರಿಗೆ ಆಗುವಷ್ಟು ಮನೆಯಲ್ಲಿ ಮಾಡಿದ್ದೆವು. ಹೆಚ್ಚಿನ ಜನರು ಬಂದಿದ್ದರಿಂದ ಹೊಟೇಲ್‌ನಿಂದ ತರಿಸಿ ಕೊಟ್ಟಿವೆ. ಇದಕ್ಕಾಗಿ ₹ 7–8 ಸಾವಿರ ಖರ್ಚು ಮಾಡಿದ್ದೇವೆ. ಇದನ್ನೇ ಹೊಟೇಲ್‌ನಿಂದ ತರಿಸಿ ಉಪಹಾರ ಮಾಡಿದ್ದಾರೆ ಎಂದು ಟೀಕಿಸಿರುವುದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT