ADVERTISEMENT

ಸರಳ ವಿವಾಹಗಳ ಕ್ಷೇತ್ರ : ಅನ್ನಲಪುರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 7:10 IST
Last Updated 19 ನವೆಂಬರ್ 2017, 7:10 IST

ಕಿಕ್ಕಿರಿದು ತುಂಬಿದ ದೇವಾಲಯ, ಆವರಣದಲ್ಲಿರುವ ಜಗುಲಿಕಟ್ಟೆ, ಅಶ್ವತ್ಥ್‌ಮರದ ಕಟ್ಟೆ, ಕಲ್ಯಾಣವೇದಿಕೆ, ಕಲ್ಯಾಣಮಂಟಪಗಳಲ್ಲಿ ಕಂಕಣಭಾಗ್ಯಕ್ಕೆ ಹಾತೊರೆಯುತ್ತ ನಿಂತಿರುವ ನವ ವಧು-ವರರ ಜೋಡಿಗಳು, ಅವರ ಸುತ್ತಮುತ್ತ ಕೈಯಲ್ಲಿ ಅಕ್ಷತೆ ಹಿಡಿದು ಆಶೀರ್ವದಿಸಲು ಕಾದಿರುವ ಬಂಧು– ಬಳಗ ಸ್ನೇಹಿತರು, ದೇವಾಲಯದ ಹಿಂಭಾಗ ಆವರಣ, ಹೊರಬಾಗದ ಗಿಡ–ಮರಗಳ ಕೆಳಗೆ ತಿಂಡಿ ಸವಿಯುತ್ತಾ ಕುಳಿತಿರುವ ವಿವಾಹ ಮುಗಿಸಿಬಂದ ಜನರು ಈ ದೃಶ್ಯಗಳು ಸಾಮಾನ್ಯವಾಗಿ ಕಾಣುವುದು ಇತಿಹಾಸ ಪ್ರಸಿದ್ಧ ಅಲಕೂರು ಆಂಜನೇಯಸ್ವಾಮಿ ನೆಲೆ ನಿಂತಿರುವ ಅನ್ನಲಪುರಿ ಕ್ಷೇತ್ರದಲ್ಲಿ.

ಬಡವರ ವಿವಾಹ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಅನ್ನಲಪುರಿ ಸ್ಥಳವು ಒಂದು ಬೇಚರಾಕ್ ಗ್ರಾಮವಾಗಿದ್ದು, ರಾಜಾ ಯಲ್ಲಪ್ಪನಾಯಕನ ಆಳ್ವಿಕೆಯ ಕಾಲದಲ್ಲಿ ಪ್ರವರ್ಧಮಾನದಲ್ಲಿ ಇದ್ದ ಪಟ್ಟಣವಾಗಿದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡು ವೈ.ಎನ್.ಹೊಸಕೋಟೆಯಿಂದ ವಾಯುವ್ಯಕ್ಕೆ 5 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಲ್ಲಿದೆ.

ಕ್ಷೇತ್ರದ ಅಲಕೂರು ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ವಿವಾಹವಾದರೆ ಗಂಡುಸಂತಾನ ಲಭಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ವರ್ಷದ ಎಲ್ಲ ಮುಹೂರ್ತಗಳಲ್ಲೂ ಇಲ್ಲಿ ವಿವಾಹಗಳು ನಡೆಯುತ್ತವೆ. ವರ್ಷಕ್ಕೆ ಕನಿಷ್ಠ 500 ರಿಂದ 600 ಜೋಡಿಗಳು ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಅನ್ಯರ ಗಮನಕ್ಕೆ ಬಾರದ ಮುಂಜಾನೆ ಮುಹೂರ್ತಗಳೂ ಇಲ್ಲಿ ನಡೆಯುವುದುಂಟು.

ADVERTISEMENT

ಶ್ವೇತವಸ್ತ್ರ, ತಾಳಿ ಮತ್ತು ಹೂಮಾಲೆಗಳೊಂದಿಗೆ ಬರುವ ಅದೆಷ್ಟೋ ಬಡ ಕುಟುಂಬಗಳ ವಧು-ವರರು ತಮಗೆ ಅನುಕೂಲದವಾದ ಸಮಯಕ್ಕೆ ದೈಸನ್ನಿಧಿಗೆ ಬಂದು ವಿವಾಹವಾಗುತ್ತಾರೆ. ಕೆಲವರು ರಾತ್ರಿಯೇ ದೇವಾಲಯಕ್ಕೆ ಬಂದು ತಂಗಿದ್ದು, ವಿವಾಹ ಶುಲ್ಕವನ್ನು ಪಾವತಿಸಿ ಇಲ್ಲಿ ದೊರೆಯುವ ಪಾತ್ರೆಗಳನ್ನು ಪಡೆದು ಉಪಹಾರ ತಯಾರಿಸಿ ಬೆಳಿಗ್ಗೆ ಮುಹೂರ್ತ ಮುಗಿಸಿಕೊಂಡು ತಿಂಡಿ ಸವಿದು ಹೋಗುತ್ತಾರೆ.

ಮನೆಯಂಗಳದಲ್ಲಿ ಸ್ಥಳಾವಕಾಶ ಇಲ್ಲದ ಸುತ್ತಮುತ್ತಲಿನ ಹಳ್ಳಿಯ ಜನತೆ ಮುಹೂರ್ತ ಪೂರ್ವ ಎಲ್ಲ ಸಂಪ್ರದಾಯಗಳನ್ನು ಮನೆಯಲ್ಲೇ ನೆರವೇರಿಸಿಕೊಂಡು ಸಿದ್ಧ ಆಹಾರದೊಂದಿಗೆ ವಿವಾಹ ಮುಹೂರ್ತ ಸಮಯಕ್ಕೆ ಸರಿಯಾಗಿ ಕ್ಷೇತ್ರಕ್ಕೆ ಬರುತ್ತಾರೆ. ದೇವಾಲಯದ ಆವರಣ, ಕಲ್ಯಾಣಮಂಟಪ ಅಥವಾ ಸ್ಥಳಾವಕಾಶ ಇದ್ದ ಕಡೆ ಮಾಂಗಲ್ಯ ಧಾರಣೆ ಮಾಡಿಕೊಂಡು ಹೊರಬಾಗದ ಗಿಡ–ಮರಗಳ ಕೆಳಗೆ ಊಟ ಮಾಡಿ ತೆರಳುತ್ತಾರೆ.

ಇಲ್ಲಿ ನಡೆಯುವ ಬಹಳಷ್ಟು ವಿವಾಹಗಳಿಗೆ ಓಲಗದ ಗದ್ದಲ, ಪುರೋಹಿತರ ಮಂತ್ರೋಪಚಾರ, ಸವಿರುಚಿಗಳ ಅಡುಗೆ ಅಗತ್ಯವಾಗಿ ಕಾಣುವುದಿಲ್ಲ. ಆದರೆ ನವಜೋಡಿಗಳಲ್ಲಿ ಸಂತಸ ಬಂಧುಬಳಗದ ಸಡಗರ ಕುಟುಂಬದವರಿಗೆ ದೈವಸನ್ನಿಧಿಯಲ್ಲಿ ವಿವಾಹ ನೆರವೇರಿಸಿದ ತೃಪ್ತಿ ಕಾಣುತ್ತದೆ. ಒಟ್ಟಾರೆ ಅವರವರ ಕುಟುಂಬಗಳ ಅನುಕೂಲಕ್ಕೆ ತಕ್ಕಂತೆ ಸರಳವಿವಾಹಗಳು ನೆರವೇರಿಕೊಂಡು ಹೋಗಲು ಅನ್ನಲಪುರಿ ಕ್ಷೇತ್ರವು ನಿತ್ಯಕಲ್ಯಾಣಮಂಟಪ ಆಗಿದೆ.

ಸ್ಥಳನಾಮ: 16ನೇ ಶತಮಾನದಷ್ಟು ಹಳೆಯದಾದ ಆಂಜನೇಯಸ್ವಾಮಿ ದೇವಾಲಯ ಇರುವ ಈ ಸ್ಥಳದಲ್ಲಿ ಹಿಂದೆ ಗ್ರಾಮವಿದ್ದ ಕುರುಗಳಿವೆ. ಯಲ್ಲಪ್ಪನಾಯಕನ ಹೊಸಕೋಟೆಗೆ ಸಂಬಂದಿಸಿದ ಶಿಲಾ ಶಾಸನದಲ್ಲಿ ಇಲ್ಲಿನ ಅನ್ನಲಪುರಿ ಎಂಬ ಗ್ರಾಮದ ಉಲ್ಲೇಖವಿದೆ. ತಾಮ್ರಶಾಸನ ಒಂದರಲ್ಲಿ ಹನುಮದೇವರಪಾಳ್ಯ ಎಂಬುದಾಗಿ ಲಿಖಿತವಾಗಿದೆ. ಅನ್ನಲಪುರಿ ಪಟ್ಟಣದ ಹೆಣ್ಣುಮಗಳನ್ನು ಕುಂದುರ್ಪಿ ಸಂಸ್ಥಾನದ ದೊರೆಗೆ ವಿವಾಹ ಮಾಡಿಕೊಡಲಾಗಿತ್ತು. ಆಕೆಯು ಕೋಳಿ ಪಂದ್ಯಾವಳಿಯ ವಿಚಾರಕ್ಕಾಗಿ ತವರು ಮನೆಯ ಅಣ್ಣತಮ್ಮಂದಿರ ಜೊತೆ ಮುನಿಸಿಕೊಂಡು ಈ ಸ್ಥಳದಿಂದ ಹೊರಟು ಹೋಗಿದ್ದಳು. ಹಾಗಾಗಿ ಈ ಸ್ಥಳಕ್ಕೆ ಅಲಕೂರು (ಮುನಿಸಿಕೊಂಡ ಊರು) ಎಂಬ ಹೆಸರು ಬಂದಿದೆ ಎಂದು ಜಾನಪದ ಕತೆ ತಿಳಿಸುತ್ತದೆ. ತೆಲುಗಿನ ಅಲಕ ಎಂಬ ಪದಕ್ಕೆ ಮುನಿಸು ಎಂಬ ಕನ್ನಡದ ಅರ್ಥ ಇದೆ.

ಸಂತಾನಕ್ಕಾಗಿ ಪೂಜೆ: ಈ ಕ್ಷೇತ್ರದಲ್ಲಿರುವ ಹಳ್ಳದಲ್ಲಿ ಗಂಗಾಪೂಜೆ ನೆರವೇರಿಸಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. ದೇವಾಲಯದ ಪೂರ್ವದಲ್ಲಿ ಹಳ್ಳವಿದೆ. ಇದಕ್ಕೆ ಹೊಂದಿಕೊಂಡಂತೆ ಈ ಹಿಂದೆ ಕಲ್ಯಾಣಿಬಾವಿ ಇತ್ತು. ಅದರ ನೀರಿನಲ್ಲಿ ಮಹಿಳೆಯರು ಪುಣ್ಯಸ್ನಾನ ಮಾಡಿ ಗಂಗಾಪೂಜೆ ನೆರವೇರಿಸುತ್ತಿದ್ದರು. ಆದರೆ ಈಗ ಬಾವಿ ಮುಚ್ಚಿ ಹೋಗಿದೆ. ಆದಾಗ್ಯೂ ಪ್ರತಿ ಸೋಮವಾರ ನವವಿವಾಹಿತರು ಮತ್ತು ಸಂತಾನ ಇಲ್ಲದವರು ಮಕ್ಕಳ ಭಾಗ್ಯಕ್ಕಾಗಿ ಹಳ್ಳದಲ್ಲಿ ಗಂಗಾಪೂಜೆ ನೆರವೇರಿಸುವ ಸಂಪ್ರದಾಯ ಮುಂದುವರೆಯುತ್ತಿದೆ. ಹಲವು ಸ್ತ್ರೀ ಸಮಸ್ಯೆಗಳ ಪರಿಹಾರಕ್ಕಾಗಿ ಕನ್ಯೆಯರು ಇಲ್ಲಿ ಗಂಗಾಪೂಜೆ ಮಾಡುವುದುಂಟು.

ಕ್ಷೇತ್ರದ ವಿಶೇಷತೆ: ಪುರಾತನ ದೇವಾಲಯವಾಗಿರುವುದರಿಂದ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚು. ಶ್ರೀಕ್ಷೇತ್ರದಲ್ಲಿ ಶುಭದಿನಗಳಲ್ಲಿ ಎಲೆಪೂಜೆ, ಕುಂಕುಮಾರ್ಚನೆ, ಪ್ರಾಖಾರೋತ್ಸವ ಇತ್ಯಾದಿಗಳು ನೆರವೇರುತ್ತವೆ. ಕಾರ್ತೀಕ ಮಾಸದಲ್ಲಿ ಬ್ರಹ್ಮರಥೋತ್ಸವ, ಲಕ್ಷದೀಪೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ. ಪ್ರತಿ ಶನಿವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಮಾಡುತ್ತಾರೆ. ಶ್ರಾವಣಮಾಸದ ಕೊನೆಯ ಶನಿವಾರದಂದು ನಡೆಯುವ ಜಾತ್ರೆ ಕ್ಷೇತ್ರದ ವಿಶೇಷವಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ನೆರೆಯ ಆಂಧ್ರಪ್ರದೇಶದ ರಾಯದುರ್ಗ, ಅನಂತಪುರ ಒಳಗೊಂಡಂತೆ ರಾಜ್ಯದ ಬಳ್ಳಾರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಜಾತ್ರೆಗೆ ಜನರು ಬಂದು ದರ್ಶನ ಪಡೆಯುತ್ತಾರೆ. ಇಷ್ಟಾರ್ಥಿ ಸಿದ್ಧಿಗಾಗಿ ಹರಕೆ ಹೊತ್ತ ಭಕ್ತರು ಜಾತ್ರೆಯಲ್ಲಿ ಅನ್ನಸಂತರ್ಪಣೆ ಮಾಡುತ್ತಾರೆ.

ಇಲ್ಲಿನ ದೇವರನ್ನು ಮೂಲದೈವ ಎಂದು ಪರಿಗಣಿಸಿಕೊಂಡಿರುವ ಹಲವಾರು ಬುಡಕಟ್ಟುಗಳ ಜನರು ಶ್ರಾವಣದ ಶುಕ್ರವಾರ ಮತ್ತು ಶನಿವಾರದ ರಾತ್ರಿಗಳಲ್ಲಿ ತಮ್ಮ ಸಂಪ್ರದಾಯ ಮತ್ತು ಆಚರಣೆಗಳ ಮತ್ತು ಮೂಲ ಪರಂಪರೆಯನ್ನು ಸ್ಮರಿಸುವ ಜನಪದ ಕಾವ್ಯಗಳನ್ನು ರಾತ್ರಿ ಪೂರ್ತಿ ಹಾಡುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ.

ವಂಶಪಾರಂಪರ್ಯ ಸಂಪ್ರದಾಯ
ಅಲಕೂರು ಆಂಜನೇಯಸ್ವಾಮಿಯು ನಮಗೆ ಮನೆ ದೇವರಾಗಿದ್ದಾರೆ. ನಮ್ಮ ಮನೆತನದಲ್ಲಿ ನಡೆಯುವ ಕೇಶಕಂಡನ, ನಾಮಕರಣ, ವಿವಾಹ ಇತ್ಯಾದಿ ಎಲ್ಲ ಶುಭಕಾರ್ಯಗಳನ್ನು ಶ್ರೀಕ್ಷೇತ್ರದಲ್ಲೇ ನಾವು ನೆರವೇರಿಸಿಕೊಂಡು ಬರುತ್ತಿದ್ದೇವೆ. ಇದು ನಮ್ಮ ವಂಶಪಾರಂಪರ್ಯ ಸಂಪ್ರದಾಯವಾಗಿದೆ.
ಲಾಯರ್ ವೆಂಕಟೇಶ,
ರುದ್ರಯ್ಯನರೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.