ADVERTISEMENT

ಭಾರಿ ವಾಹನ ಓಡಾಟ: ದೂಳಿನ ಮಜ್ಜನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 7:17 IST
Last Updated 7 ಫೆಬ್ರುವರಿ 2018, 7:17 IST

ತೋವಿನಕೆರೆ: ಗ್ರಾಮದ ಬಸ್ ನಿಲ್ದಾಣದ ಮೂಲಕ  ಜಲ್ಲಿ, ಎಂ–ಸ್ಯಾಂಡ್‌ ಸಾಗಾಟದ ಲಾರಿಗಳ ಓಡಾಡುತ್ತಿರುವುದರಿಂದ ನಿಲ್ದಾಣ ದೂಳುಮಯವಾಗಿದೆ. ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿಯ ಕೆಲವು ಹಳ್ಳಿಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿಂದ ಬೇರೆಬೇರೆ ಕಡೆಗಳಿಗೆ ಜಲ್ಲಿ, ಎಂ–ಸ್ಯಾಂಡ್‌ ಸಾಗಾಟ ಮಾಡಲಾಗುತ್ತಿದೆ. ತೋವಿನಕೆರೆ ರಸ್ತೆಗಳಲ್ಲಿ 20-25 ಟನ್ ತೂಕದ ವಾಹನಗಳು ಮಾತ್ರ ಓಡಾಡಬೇಕು ಎಂದು ನಿಗದಿ ಪಡಿಸಲಾಗಿದೆ. ಆದರೆ ಈ ವಾಹನಗಳು 40-45 ಟನ್‌ಗೂ ಹೆಚ್ಚು ತೂಕ ಸಾಗಿಸುತ್ತಿವೆ. ಇದರಿಂದ ರಸ್ತೆ ಕಿತ್ತು ಹೋಗಿದೆ.

ಪ್ರತಿದಿನ ನೂರಕ್ಕೂ ಅಧಿಕ ಲಾರಿಗಳು ಸಂಚರಿಸುತ್ತವೆ. ದೂಳು ಕುಡಿದು, ಕುಡಿದು ಸಾಕಾಗಿ ಹೋಗಿದೆ. ಬಿಳಿ ಬಟ್ಟೆ ತೊಟ್ಟು ಬಂದರೆ ಕ್ಷಣ ಮಾತ್ರದಲ್ಲಿ ದೂಳಿನಿಂದ ಮಾಸಿ ಹೋಗುತ್ತದೆ. ಪ್ರಯಾಣಿಕರ ಪರಿಪಾಟಲು ಹೇಳತೀರದಾಗಿದೆ ಎಂದು ನಿಲ್ದಾಣದ ಅಂಗಡಿ ವರ್ತಕರೊಬ್ಬರು ತಿಳಿಸಿದರು.

‘ಚುನಾವಣೆಯ ಕಾರಣ ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿವೃದ್ಧಿಯ ಬಗ್ಗೆ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಕ್ರಷರ್‌ ಲಾರಿಗಳಿಂದ ಹಾಳಾಗುತ್ತಿರುವ ಗ್ರಾಮದ ರಸ್ತೆ, ಪರಿಸರದ ಬಗ್ಗೆ ಮಾತ್ರ ತುಟಿ ಬಿಚ್ಚುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ರಸ್ತೆಗೆ ಪ್ರತಿ ದಿನ ನೀರು ಸಿಂಪಡಣೆ ಮಾಡುವುದಾಗಿ ಕ್ರಷರ್ ಮಾಲೀಕರು ನೀಡಿರುವ ಭರವಸೆ ಸಹ ಸರಿಯಾಗಿ ಜಾರಿಯಾಗಿಲ್ಲ. ಇಷ್ಟ ಬಂದ ದಿನ ನೀರು ಹಾಕುತ್ತಾರೆ. ಉಳಿದಂತೆ ಇಲ್ಲವಾಗಿದೆ.

ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಆಂಧ್ರ ಪ್ರದೇಶದ ವಾಹನಗಳು ಈ ಸಹ ಇದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ರಸ್ತೆಯ ಅಂಚಿನಲ್ಲಿರುವ ತೆಂಗು, ಅಡಿಕೆ ಮರಗಳು,  ತರಕಾರಿ, ಹೂವಿನ ಗಿಡಗಳ ಮೇಲೆ ದೂಳು ಕುಳಿತು ಇಳುವರಿ ಕುಂಠಿತವಾಗಿರುವುದು ಕಂಡು ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.