ADVERTISEMENT

ಕಬ್ಬಿನ ಕೊಡಿ, ಸುತ್ತಕ್ಕಿ ಸೇವೆಗಳೇ ವಿಶೇಷ

ಇಂದು ಕೋಟೇಶ್ವರದ ಇತಿಹಾಸ ಪ್ರಸಿದ್ಧ ‘ಕೊಡಿ ಹಬ್ಬ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 4:51 IST
Last Updated 25 ನವೆಂಬರ್ 2015, 4:51 IST

ಕುಂದಾಪುರ: ಧ್ವಜಪುರವೆಂದು ಪ್ರಸಿದ್ಧಿ ಯಾದ ಕೋಟೇಶ್ವರದ ಶ್ರೀ ಕೋಟಿ ಲಿಂಗೇಶ್ವರ ದೇವರಿಗೆ ಬುಧವಾರ ನಡೆ ಯುವ ಬ್ರಹ್ಮರಥೋತ್ಸವ ಹಾಗೂ ‘ಕೊಡಿ’ ಹಬ್ಬಕ್ಕಾಗಿ ದೇಶ-–ವಿದೇಶ  ದಲ್ಲಿರುವ ದೇಗುಲದ ಭಕ್ತರು ಊರಿಗೆ ಬಂದಿದ್ದಾರೆ.

ವೃಶ್ಚಿಕ ಮಾಸದಂದು ನಡೆಯುವ ಇಲ್ಲಿನ ಬ್ರಹ್ಮರಥೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಕೋಟಿಲಿಂಗೇಶ್ವರ ಬ್ರಹ್ಮ ರಥ ರಾಜ್ಯದಲ್ಲಿರುವ ಬ್ರಹ್ಮ ರಥಗಳ ಪೈಕಿ ದೊಡ್ಡದು ಎನ್ನುವ ಹೆಗ್ಗಳಿಕೆ ಪಡೆದು ಕೊಂಡಿದೆ.

7 ದಿನಗಳ ಕಾಲ ಉತ್ಸವವನ್ನು ವೈಭವದಿಂದ ಆಚರಿಸಲಾಗುತ್ತದೆ. ಧ್ವಜ ಸ್ತಂಭಕ್ಕೆ ಗರ್ನಪಠಾರೋಹಣ (ಗರ್ನ ಕಟ್ಟುವುದು) ನಡೆದ ಬಳಿಕ, ಉತ್ಸವದ ಧಾರ್ಮಿಕ ವಿಧಿಗಳು ಪ್ರಾರಂಭ ವಾಗುತ್ತದೆ. ಜಾತ್ರೆಯ ಪೂರ್ವಭಾವಿ ಯಾಗಿ ಕಟ್ಟ ಕಟ್ಟಳೆ ಕಟ್ಟೆ ಸೇವೆಗಾಗಿ ಸುತ್ತ-ಮುತ್ತಲಿನ ಗ್ರಾಮಗಳ ಮನೆ ಬಾಗಿಲಿಗೆ ಬರುವ ಶ್ರೀ ದೇವರನ್ನು ಅತ್ಯಂತ ಶೃದ್ಧೆಯಿಂದ ಬರಮಾಡಿಕೊಂಡು ಪೂಜೆ ಯನ್ನು ಸಲ್ಲಿಸುವುದು ವಾಡಿಕೆ. ಹೆದ್ದಾರಿ ಯಲ್ಲಿ ಚತುಷ್ಪಥ ಕಾಮಗಾರಿಗಳು ನಡೆಯುತ್ತಿರುವುದರಿಂದಾಗಿ ಹೆಚ್ಚಿನ ಪಾರಂಪರಿಕ ಕಟ್ಟೆಗಳು ತೆರವಾಗಿರುವುದ ರಿಂದಾಗಿ, ತಾತ್ಕಾಲಿಕವಾಗಿ ನಿರ್ಮಿಸ ಲಾದ ಕಟ್ಟೆಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಇಟ್ಟು ಪೂಜಿಸುವ ಸಂಪ್ರದಾಯ ಪ್ರಾರಂಭವಾಗಿದೆ.

ಕೊಡಿ ಹಬ್ಬ: ಕರಾವಳಿ ಜಿಲ್ಲೆಯ ಜನರ ಆಡು ಭಾಷೆಯಲ್ಲಿ ಜನಜನಿತವಾಗಿರುವ  ‘ಕೊಡಿ ಹಬ್ಬ’ ಎನ್ನುವ ಹೆಸರು ಹುಟ್ಟಿ ಕೊಳ್ಳಲು ಹಲವು ಕಾರಣಗಳನ್ನು ಹೇಳ ಲಾಗುತ್ತಿದೆ. ಕೋಟಿಲಿಂಗೇಶ್ವರನಿಗೆ ಬ್ರಹ್ಮ ರಥ ಅರ್ಪಣೆ ಮಾಡಲು ನಿಶ್ಚಯಿಸಿದ್ದ ಮಾಹಿಷ್ಮತಿ ರಾಜನಾದ ವಸು ಮಹಾ ರಾಜನಿಗೆ ಜಾತ್ರೆಯ ದಿನವಾದರೂ ರಥ ನಿರ್ಮಾಣ ಸಾಧ್ಯವಾಗದೆ ಇದ್ದುದ ರಿಂದಾಗಿ, ಕೊಡಿ (ಬಿದಿರು) ಯಿಂದ ನಿರ್ಮಿಸಿದ ರಥದಲ್ಲಿ ಮೊದಲ ಉತ್ಸವ ನಡೆಯಿತು ಎನ್ನುವುದಕ್ಕಾಗಿ ’ಕೊಡಿ ಹಬ್ಬ’ ಎಂದಾಯಿತು ಎನ್ನುವ ನಂಬಿಕೆ ಇದೆ. ಪ್ರತಿ ವರ್ಷವೂ ಜಾತ್ರೆಗೆ ಆಗಮಿ ಸುವ ನವ ದಂಪತಿಗಳು ದೇವರ ದರ್ಶನ ಮಾಡಿ ಕೊಡಿ (ಕಬ್ಬಿನ ಜಲ್ಲೆ) ಯನ್ನು ತೆಗೆದುಕೊಂಡು ಹೋದರೆ, ಸಂತಾನದ ಕೊಡಿ ಅರಳುತ್ತದೆ ಎನ್ನುವ ನಂಬಿಕೆಗಳು ಇದೆ.

ಕೋಟಿ ತೀರ್ಥ: ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಕ್ಷೇತ್ರದ ಬಗ್ಗೆ ಪುರಾಣಗಳಲ್ಲಿ ಉಲ್ಲೇಖ ವಿದೆ. ಕೋಟಿ ಋಷಿಗಳು ಒಂದಾಗಿ ತಪ್ಪಸ್ಸು ಮಾಡಿದ ಮೋಕ್ಷ ಕ್ಷೇತ್ರ ಎನ್ನುವ ನಂಬಿಕೆಗಳಿವೆ. ದೇವಸ್ಥಾನದ ಮೇಲ್ಛಾ ವಣೆಗಾಗಿ ಜೋಡಿಸಲಾದ ಕಲ್ಲುಗಳ ಕೆಳ ಭಾಗದಲ್ಲಿ ನಿಂತು ಮೇಲೆ ದೃಷ್ಟಿ ಹಾಯಿಸಿ ದರೆ ಭಯ ಹುಟ್ಟಿಸುವಂತೆ ದೇವಾಲ ಯದ ರಚನೆಯಾಗಿದೆ.

ಅಂದಾಜು 4.5 ಎಕರೆ ವಿಸ್ತಿರ್ಣ ವನ್ನು ಹೊಂದಿರುವ ಕೋಟಿ ತೀರ್ಥ ಪುಷ್ಕರಣಿಗೆ ಜಾತ್ರೆಯಂದು ನಸುಕಿನಲ್ಲಿ ಆಗಮಿಸುವ ಭಕ್ತರು ಪುಷ್ಕರಣಿಯಲ್ಲಿ ಸ್ನಾನ ಮಾಡಿ, ಸರೋವರದ ಸುತ್ತು ಬಿಳಿ ಬಟ್ಟೆಯನ್ನು ಹಾಸಿರುವ ಅಪೇಕ್ಷಿತರಿಗೆ, ಮುಷ್ಟಿ ಅಕ್ಕಿಯನ್ನು ಹಾಕಿ, ದೇವರ ದರ್ಶನ ಪಡೆಯುತ್ತಾರೆ. ಈ ರೀತಿ ನಡೆಯುವ ಸೇವೆಗೆ ‘ಸುತ್ತಕ್ಕಿ’ ಸೇವೆ ಎನ್ನುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅಕ್ಕಿ ಅಪೇಕ್ಷಿತರ ಸಂಖ್ಯೆ ಕಡಿಮೆಯಾಗುತ್ತಿ ರುವುದರಿಂದ ಹರಕೆ ಸೇವೆಯ ಪೂರೈಕೆ ಗಾಗಿ ಬರುವ ಭಕ್ತರು ಸರೋವರಕ್ಕೆ ಎಸೆ ಯುವ ಅಕ್ಕಿ ಅಲ್ಲಿನ ಮೀನುಗಳ ಜೀವಕ್ಕೆ ಸಂಚಕಾರ ತರುತ್ತಿರುವ ಘಟನೆಗಳು ನಡೆದಿದೆ.

ಜಾತಿ-–ಮತವನ್ನು ಮೀರಿದ ಕೊಡಿ ಹಬ್ಬದಲ್ಲಿ ಎಲ್ಲ ಧರ್ಮದವರು ಸಂಭ್ರಮ ದಿಂದ ಪಾಲ್ಗೊಳ್ಳುತ್ತಾರೆ. ಜಾತ್ರೆಯ ಮಾರನೇಯ ದಿನ ಮಧ್ಯರಾತ್ರಿಯ ಹೊತ್ತಿನಿಂದ ನಸುಕಿನ ತನಕ ನಡೆಯುವ ಪಾರಂಪರಿಕ ಓಕುಳಿಯಾಟಕ್ಕೂ ಸಾಕಷ್ಟು ಹಿನ್ನೆಲೆ ಇದೆ.

ಪಾರ್ಕಿಂಗ್‌ ಸಮಸ್ಯೆ
ಜಾತ್ರೆ ನಡೆಯುವ ರಥ ಬೀದಿ ಹಾಗೂ ಕೋಟೇಶ್ವರದ ಒಳ ಭಾಗದ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಊರಿನ ಹೊರ ಭಾಗದ ಹೆದ್ದಾರಿ ರಸ್ತೆಯ ಬದಿಗಳನ್ನು ವಾಹನದ ಪಾರ್ಕಿಂಗ್‌ಗಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ ಈ ಬಾರಿ ಈ ವ್ಯವಸ್ಥೆಗೂ ತೊಡಕಾಗಿದೆ. ಹೆದ್ದಾರಿ 66 ರಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿ, ಕೋಟೇಶ್ವರದ ಬೈಪಾಸ್‌ನಲ್ಲಿ ನಡೆಯುತ್ತಿರು ಅಂಡರ್‌ ಪಾಸ್ ಕಾಮಗಾರಿ ಹಾಗೂ ಕಡಿದಾದದ ಸರ್ವಿಸ್‌ ರಸ್ತೆಗಳಿಂದಾಗಿ ವಾಹನ ನಿಲುಗಡೆಗೆ ತೊಡಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.