ADVERTISEMENT

ಕಾರ್ಕಳ: ಸಂಭ್ರಮದ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 10:16 IST
Last Updated 10 ನವೆಂಬರ್ 2017, 10:16 IST

ಕಾರ್ಕಳ: ನಗರದ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ ದೇವತಾ ಪ್ರಾರ್ಥನೆಯ ತರುವಾಯ ಲಕ್ಷದೀಪೋತ್ಸವ ದೇವಸ್ಥಾನದ ಶ್ರೀನಿವಾಸ ದೇವರು ಹಾಗೂ ವೆಂಕಟರಮಣ ದೇವರನ್ನು ಸ್ವರ್ಣ ಪಲ್ಲಕ್ಕಿಯಲ್ಲಿರಿಸಿ ವೆಂಕಟರಮಣ ದೇವಸ್ಥಾನದಿಂದ ಶ್ರೀನಿವಾಸಾಶ್ರಮದ ತನಕ ಭಕ್ತರು ಮೆರವಣಿಗೆಯಲ್ಲಿ ಕರೆದೊಯ್ದರು. ಶ್ರೀನಿವಾಸ ಆಶ್ರಮದ ವನದಲ್ಲಿ ದೇವರಿಗೆ ಕಲಶಾಭಿಷೇಕ, ಪಂಚಾಮೃತ ಅಭಿಷೇಕ ನಡೆದ ತರುವಾಯ ಧಾತ್ರಿ ಹವನ ನಡೆದು ಅಲಂಕಾರ ಪೂಜೆ ನಡೆಯಿತು.

ಮಂಗಳೂರು ಕೊಂಚಾಡಿ ಸ್ವಮಠದಿಂದ ಆಗಮಿಸಿದ ಕಾಶೀಮಠಾ ಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರನ್ನು ಬರಮಾಡಿ ಕೊಂಡ ದೇವಸ್ಥಾನದ ಆಡಳಿತ ವರ್ಗ, ಸ್ವಾಮೀಜಿ ಉಪಸ್ಥಿತಿಯಲ್ಲಿ ದೇವರಿಗೆ ಪ್ರಸನ್ನ ಪೂಜೆ, ಮಂಗಳಾರತಿಯಲ್ಲಿ ಭಾಗಿಯಾದರು. ದೇವರ ಸನ್ನಿಧಿಯಲ್ಲಿ ಮಹಾ ಭಕ್ತಜನರಿಗೆ ಸ್ವಾಮೀಜಿ ಆಶೀ ರ್ವಚನ ನೀಡಿದರು.

ರಾತ್ರಿ ತನಕ ನಡೆದ ವನಭೋಜನದಲ್ಲಿ ಊರ–ಪರವೂರಿನ ಭಕ್ತಾದಿಗಳು ಭಾಗಿಯಾದರು. ಅಲ್ಲಿಂದ ಊರ ಮೆರವಣಿಗೆಯಲ್ಲಿ ಹೊರಟ ದೇವರು ಅಲ್ಲಲ್ಲಿ ಗುರ್ಜಿ ಪೂಜೆಗಳಲ್ಲಿ ಭಾಗಿಯಾಗಿ ಮಣ್ಣಗೋಪುರದಲ್ಲಿ ಬಂದು ಸೇರಿದಾಗ ಮಹಿಳಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ, ಸಂಗೀತ ವಾದ್ಯ ಗೋಷ್ಠಿಗಳು ನಡೆದವು. ಭಕ್ತಾದಿಗಳಿಂದ ಹಣ್ಣುಕಾಯಿ ಸಮ ರ್ಪಣೆ, ಸೇವೆಗಳು ನಡೆದವು. ರಾತ್ರಿ ದೇವಸ್ಥಾನಕ್ಕೆ ಉತ್ಸವ ಮೆರವಣಿಗೆ ನಡೆಯಿತು.

ADVERTISEMENT

ಆಡಳಿತ ಮೊಕ್ತೇಸರ ಜಯರಾಮ ಪ್ರಭು, ಪರ್ಯಾಯ ಅರ್ಚಕ ಮೋಹನ ಭಟ್, ತಂತ್ರಿ ಸುರೇಂದ್ರ ಭಟ್, ಗುರು ತಂತ್ರಿ, ಸಂತೋಷ ಭಟ್, ಸಂದೀಪ ಭಟ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.