ADVERTISEMENT

ಜ್ಞಾನದ ಆಕೃತಿಯ ಬಳಕೆಯೇ ಸವಾಲು

ಪುರುಷೋತ್ತಮ ಬಿಳಿಮಲೆ ಅಭಿನಂದನೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿಂತಕ ಪ್ರಭಾಕರ ಜೋಶಿ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:50 IST
Last Updated 22 ಮೇ 2017, 5:50 IST
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಪುರುಷೋತ್ತಮ ಬಿಳಿಮಲೆ ಅವರ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಕ್ಷಗಾನ ಚಿಂತಕ ಎಂ. ಪ್ರಭಾಕರ ಜೋಶಿ ಉದ್ಘಾಟಿಸಿದರು. –ಪ್ರಜಾವಾಣಿ ಚಿತ್ರ
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಪುರುಷೋತ್ತಮ ಬಿಳಿಮಲೆ ಅವರ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಕ್ಷಗಾನ ಚಿಂತಕ ಎಂ. ಪ್ರಭಾಕರ ಜೋಶಿ ಉದ್ಘಾಟಿಸಿದರು. –ಪ್ರಜಾವಾಣಿ ಚಿತ್ರ   

ಉಡುಪಿ: ‘ಪ್ರತೀ ಸಮುದಾಯ ಹಾಗೂ ದೇಶಕ್ಕೆ ಅದರದ್ದೇ ಆದ ಜ್ಞಾನದ ಆಕೃತಿ ಇದೆ. ಆದರೆ, ಅದನ್ನು ಯಾವ ರೀತಿ ಬಳಸಿಕೊಳ್ಳಬೇಕೆಂಬುವುದೇ ನಮ್ಮ ಮುಂದಿರುವ ದೊಡ್ಡ ಸವಾಲು’ ಎಂದು ಯಕ್ಷಗಾನ ಚಿಂತಕ ಎಂ. ಪ್ರಭಾಕರ ಜೋಶಿ ಹೇಳಿದರು.

ಉಡುಪಿ ಯಕ್ಷಗಾನ ಕಲಾರಂಗದ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಪುರುಷೋತ್ತಮ ಬಿಳಿಮಲೆ ಅವರ ಅಭಿನಂದನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಜ್ಞಾನ ಪ್ರಧಾನ ದೇಶ ಕಟ್ಟುವ ಕಾರ್ಯವಾಗಬೇಕಿದ್ದು, ಅದಕ್ಕೆ ಅರಿವಿನಿಂದ ಕೂಡಿದ ಇಚ್ಛಾಶಕ್ತಿಯ ಅಗತ್ಯವಿದೆ. ಅಲ್ಲದೆ, ಬಹುಸಂಖ್ಯಾತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜಾತಿ, ವರ್ಗಗಳ ಸಹಕಾರ ಮತ್ತು ದೋಷಗಳನ್ನು ತಿಳಿಯಬೇಕು’ ಎಂದರು.

‘ಪ್ರೀತಿಯ ಕೊಡುಕೊಳ್ಳುವಿಕೆಯಲ್ಲಿ ಬಿಳಿಮಲೆ ಅವರು ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಅತೀ ಹೆಚ್ಚು ಲೇಖನಐಗಳನ್ನು ಬರೆದು ಕನ್ನಡದ ರಾಯಬಾರಿ ಎಂದು ಎನಿಸಿಕೊಂಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು, ‘ತನ್ನ  ತನವನ್ನು ಕಾಪಾಡಿಕೊಂಡು ಬರುತ್ತಿರುವ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಅಪಾರ ಜಾನಪದ ಶ್ರೀಮಂತಿಕೆ ಇದೆ. ಇಲ್ಲಿ ಅನಕ್ಷರಸ್ಥರು ಜಾನಪದವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅಕ್ಷರಸ್ಥರಾದ ನಾವು ಅದರ ಅರಿವಿಲ್ಲದಂತೆ ವರ್ತಿಸುತ್ತಿರುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಪ್ರತಿದಿನ 15 ನಿಮಿಷಗಳ ಮನೋರಂಜನೆಗೆ 1500 ವರ್ಷಗಳ ಸಾಂಸ್ಕೃತಿಕ ಸಂಗತಿಗಳನ್ನು ಬಿಟ್ಟುಕೊಡುತ್ತಾ ಬರುತ್ತಿದ್ದೇವೆ. ಇದು ನಮ್ಮ ಜಾನಪದ ಸಂಸ್ಕೃತಿಗೆ ದೊಡ್ಡ ಪೆಟ್ಟು. ಇದರಿಂದ ನಾವು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ’ಎಂದರು. 

ಪುರುಷೋತ್ತಮ ಬಿಳಿಮಲೆ ಅವರು ಅಕ್ಷರಸ್ಥರು ಮತ್ತು ಜನಪದರ ನಡುವೆ ಓಡಾಡುವ ಸರಳ ವ್ಯಕ್ತಿ. ಜಾನಪದವನ್ನು ಕೆಲವರು ಸೃಜನಶೀಲತೆಗಾಗಿ ಬಳಸಿಕೊಂಡರೆ, ಇನ್ನು ಕೆಲವರು ಸಂಗ್ರಹಕ್ಕಾಗಿ ಉಪಯೋಗಿಸುತ್ತಾರೆ. ಆದರೆ, ಬಿಳಿಮಲೆ ಜಾನಪದವನ್ನು ನೋಡುತ್ತಾ ನೋಡುತ್ತಾ ಅದರೊಳಗಿರುವ ಅರ್ಥವನ್ನು ಬಿಡಿಸುವುದರ ಜೊತೆಗೆ ಅಲ್ಲಿರುವ ಸಮಸ್ಯೆಯನ್ನು ಜನರ ಮುಂದೆ ಇಡುತ್ತಾರೆ’ ಎಂದು ಹೇಳಿದರು.

ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ಕಿಶನ್‌ ಹೆಗ್ಡೆ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌, ಉಪಾಧ್ಯಕ್ಷ ಗಂಗಾಧರ ರಾವ್, ಎಸ್‌.ವಿ. ಭಟ್‌, ಪ್ರಧಾನ ಕಾರ್ಯದರ್ಶಿ ಮುರಲಿ ಕಡೆಕಾರ್‌ ಇದ್ದರು.  ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
 

*
ಹುನ್ನಾರ ಮತ್ತು ಬಂಡಾಯದ ನಡುವೆ ಸತ್ಯ ಅಡಗಿದೆ. ಅದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು.
–ಎಂ. ಪ್ರಭಾಕರ ಜೋಶಿ,
ಯಕ್ಷಗಾನ ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT