ADVERTISEMENT

ದೇಹವಲ್ಲ ದೇಶ ಮುಖ್ಯ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಮೇ 2017, 8:50 IST
Last Updated 21 ಮೇ 2017, 8:50 IST

ಉಡುಪಿ: ‘ದೇಹದ ಬಗ್ಗೆ ಇರುವ ಅತೀಯಾದ ಮಮತೆಯನ್ನು ಬಿಟ್ಟು, ದೇಶದ ಕುರಿತು ಚಿಂತನೆ ಮಾಡಬೇಕು. ಆಗ ಮಾತ್ರ ನಮ್ಮೆಲ್ಲರ ಕಲ್ಯಾಣ ಸಾಧ್ಯ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.  

ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ  ನಡೆದ ಕಾರ್ಯಕ್ರಮದಲ್ಲಿ , ಕಡೆಕಾರು ಜಯಪ್ರಕಾಶ್‌ ಶೆಟ್ಟಿ ಅವರ ನೇತೃತ್ವದ ‘ಬೋಲೊ ವಂದೇ ಮಾತರಂ’ ಎನ್‌ಜಿಒ ಸಂಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ  ಭಕ್ತಿ, ಅಭಿಮಾನ ಇರಬೇಕು.  ದೇಶ ಅಂದರೆ ಕೇವಲ ಭೂಮಿ ಅಲ್ಲ. ಜನರು, ಪ್ರಕೃತಿ, ಪ್ರಾಣಿ–ಪಕ್ಷಿ ಸಂಕುಲ ಇವೆಲ್ಲವೂ ಸೇರಿವೆ. ಇವುಗಳೆಲ್ಲವನ್ನೂ ರಕ್ಷಣೆ ಮಾಡುವುದೇ ನಿಜವಾದ ದೇಶಪ್ರೇಮ. ಇದು ನಮ್ಮಲ್ಲಿ ಜಾಗೃತವಾಗಬೇಕು’ ಎಂದರು.

ADVERTISEMENT

‘ಸಕಾಲದಲ್ಲಿ ಮಳೆಯಾಗಬೇಕು. ನಮ್ಮ ಭೂಮಿ ಸಸ್ಯ ಸಮೃದ್ಧವಾಗಬೇಕು. ದೇಶದಲ್ಲಿ ಯಾವುದೇ ತರದ ಘರ್ಷಣೆ, ಹಿಂಸೆ ನಡೆಯಬಾರದು. ಶಾಂತಿ ನೆಲೆಸಬೇಕು. ಯಾರಿಗೂ ಯಾರಿಂದಲೂ ಅನ್ಯಾಯ, ತೊಂದರೆಗಳಾಗಬಾರದು. ಅಂತಹ ಸಮಾಜವನ್ನು ನಿರ್ಮಿಸಲು ಪ್ರತಿಯೊಬ್ಬರು ಶ್ರಮಿಸಬೇಕು. ಅದುವೇ ನಿಜವಾದ ದೇಶಭಕ್ತಿ’ ಎಂದು ಅಭಿಪ್ರಾಯಪಟ್ಟರು.

‘ನೆಲ–ಜಲ, ಬೆಟ್ಟ–ಗುಡ್ಡ, ಪ್ರಾಣಿ–ಪಕ್ಷಿ, ಕಾಡು–ನಾಡು ಇವುಗಳೆಲ್ಲವನ್ನೂ ಉಳಿಸಿ ಬೆಳೆಸುವ ಪ್ರಯತ್ನ ನಮ್ಮೆಲ್ಲರಿಂದಲೂ ಆಗಬೇಕಾಗಿದೆ. ಸಮಗ್ರ ದೇಶವನ್ನು ಪ್ರೀತಿಸುವ ಮನೋಪ್ರವೃತ್ತಿ ನಮ್ಮಲ್ಲಿ ಚಿಗುರೊಡೆಯಬೇಕು.

ಆ ನಿಟ್ಟಿನಲ್ಲಿ ಜನರಲ್ಲಿ ದೇಶ ಪ್ರೇಮದ ಬೀಜಬಿತ್ತುವ ಸಲುವಾಗಿ ಜಯಪ್ರಕಾಶ್‌ ಶೆಟ್ಟಿ ಅವರು ಉಡುಪಿಯಿಂದ ಮುಂಬೈವರೆಗೆ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಪಾದಯಾತ್ರೆ ಮಾಡಿರುವುದು ನಿಜವಾಗಿಯೂ ಶ್ಲಾಘನೀಯ ವಿಚಾರ. ಇದು ಎಲ್ಲರಿಗೂ ಮಾದರಿಯಾಗಬೇಕು’ ಎಂದರು.ಬೋಲೊ ವಂದೇ ಮಾತರಂ ಎನ್‌ಜಿಒ ಸಂಸ್ಥೆಯ ಸಂಸ್ಥಾಪಕ ಜಯಪ್ರಕಾಶ್‌ ಶೆಟ್ಟಿ ಕಡೆಕಾರು ಉಪಸ್ಥಿತರಿದ್ದರು.

ಯಾರು ಈ ಜಯಪ್ರಕಾಶ್‌ ಶೆಟ್ಟಿ?:
ಮುಂಬೈ ನಿವಾಸಿಯಾಗಿರುವ ಕಡೆಕಾರಿನ ಜಯಪ್ರಕಾಶ್‌ ಶೆಟ್ಟಿ ಅವರು ಈ ಹಿಂದೆ ಉಡುಪಿಯಿಂದ ಮುಂಬೈಯವರೆಗೆ ರಾಷ್ಟ್ರಧ್ವಜ ಹಿಡಿದು ಪಾದಯಾತ್ರೆ ಮಾಡುವ ಮೂಲಕ ದೇಶಭಕ್ತಿಯನ್ನು  ಜನತೆಗೆ ತೋರಿಸಿಕೊಟ್ಟಿದ್ದಾರೆ.

ಪಾದಯಾತ್ರೆಯ ಜೊತೆಗೆ ಜನರಲ್ಲಿ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಪಾದಯಾತ್ರೆಯನ್ನು ಪೂರ್ಣಗೊಳಿಸಿದ ಬಳಿಕ ರಾಷ್ಟ್ರಧ್ವಜವನ್ನು ದೇಶಸೇವೆ ಮಾಡುವುದರಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂಚೂಣಿಯಲ್ಲಿ ನಿಲ್ಲುವ ಮಡಿಕೇರಿಯ ಜನತೆಗೆ ಅರ್ಪಿಸಿದ್ದಾರೆ. 

ಜೆ.ಪಿ ಅವರು ಈಗ ‘ಬೋಲೊ ವಂದೇ ಮಾತರಂ’ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ  ಮನೆಮನೆಗೂ ದೇಶದ ಹಿರಿಮೆ ಗರಿಮೆಯನ್ನು ಪಸರಿಸಲು ಹೊರಟಿದ್ದಾರೆ. ಮುಂಬೈಯ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಇವರು, ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ತನ್ನ ಹುಟ್ಟೂರು ಉಡುಪಿಯ ಕಡೆಕಾರಿನಲ್ಲಿರುವ ಮನೆಯನ್ನು ಬಳಸಿಕೊಳ್ಳಲು ನಿರ್ಧಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.