ADVERTISEMENT

ಪರ್ಯಾಯಕ್ಕೆ ಬರಲಿದೆ ಮಟ್ಟುಗುಳ್ಳ

ಇಂದು 20 ಸಾವಿರ ಗುಳ್ಳ ಬದನೆ ಹೊತ್ತು ತರಲಿದ್ದಾರೆ ರೈತರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 5:30 IST
Last Updated 16 ಜನವರಿ 2016, 5:30 IST

ಶಿರ್ವ: ಉಡುಪಿ ಪೇಜಾವರ ಸ್ವಾಮೀಜಿ ಅವರ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಸಮೀಪದ ಮಟ್ಟುವಿನಿಂದ 20 ಸಾವಿರ ಮಟ್ಟುಗುಳ್ಳವನ್ನು ರೈತರು ತಲೆಹೊರೆಯಲ್ಲಿ ಹೊತ್ತು ತರಲಿದ್ದಾರೆ.

ಹೊರೆಕಾಣಿಕೆ ಸಮರ್ಪಿಸಲು ಭರದ ಸಿದ್ಧತೆ ನಡೆಸುತ್ತಿರುವ ರೈತರು ಶನಿವಾರ ಶನಿವಾರ ಸುಮಾರು 20ಸಾವಿರ ಮಟ್ಟು ಗುಳ್ಳವನ್ನು ಮಟ್ಟುಗ್ರಾಮದ ನಾಗರಿಕರು ಅರ್ಪಣೆ ಮಾಡಲಿದ್ದಾರೆ. ಮಟ್ಟುಗುಳ್ಳ ಬೆಳಗಾರರ ಸಂಘ ಮತ್ತು ಮಟ್ಟು ಗ್ರಾಮದ ಸುತ್ತಮುತ್ತಲಿನ ಗುಳ್ಳ ಕೃಷಿಕರ ನೇತೃತ್ವದಲ್ಲಿ ಶನಿವಾರ ಸಂಭ್ರಮ ಸಡಗರದಿಂದ ಮಟ್ಟುಗುಳ್ಳದ ಹೊರೆ ಕಾಣಿಕೆ ಮೆರವಣಿಗೆ ಸಂಪನ್ನಗೊಳ್ಳಲಿದೆ.

ಉಡುಪಿಯಲ್ಲಿ ಪಂಚಮ ಪರ್ಯಾಯ ಪೀಠವನ್ನೇರಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಮಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶ ದಲ್ಲಿ ಬಲು ಆಸ್ಥೆಯಿಂದ ಬೆಳೆದ ಮಟ್ಟುಗುಳ್ಳವನ್ನು ಸಂಪ್ರದಾಯದಂತೆ ಸ್ವತಃ ಗುಳ್ಳ ಬೆಳೆಗಾರರೇ ತಲೆಹೊರೆಯಲ್ಲಿ ತರುವರು.

ಮಟ್ಟು ಗ್ರಾಮದ ಡಾ. ಟಿ.ಎಸ್. ರಾವ್ ಅವರ ಮುಂದಾಳತ್ವದಲ್ಲಿ ಮಟ್ಟುವಿನಿಂದ ಗುಳ್ಳದ ಹೊರೆಕಾಣಿಕೆ ಯನ್ನು ನೂರಾರು ಮಂದಿ ಕೃಷಿಕರು ಮತ್ತು ಊರಿನ ಪ್ರಮುಖರು ಸೇರಿ ಉಡುಪಿಗೆ ತಂದು, ಉಡುಪಿ ಜೋಡು ಕಟ್ಟೆಯಿಂದ ಶ್ರೀ ಕೃಷ್ಣಮಠಕ್ಕೆ ಮೆರವಣಿಗೆ ಯಲ್ಲಿ ಸಮರ್ಪಣೆ ಮಾಡಲಿದ್ದಾರೆ.

ಉಡುಪಿ ಪರ್ಯಾಯ ಮಹೋತ್ಸವದ ಎರಡು ದಿನಗಳ ಭೋಜನಕ್ಕೆ ಮಟ್ಟು ಗುಳ್ಳದ ‘ಬೋಳು ಹುಳಿ’ ಪದಾರ್ಥ ತಯಾರಿಸಲು ಈ ಬಾರಿ ಒಟ್ಟು ಎರ ಡೂವರೆ ಟನ್‍ನಷ್ಟು ಗುಳ್ಳದ ಅವಶ್ಯಕತೆ ಯಿದೆ.  ಮಟ್ಟುಗುಳ್ಳ ಕೃಷಿಕರು 3 ಟನ್ ಗುಳ್ಳ ಸಮರ್ಪಣೆಗೆ ಸಿದ್ಧತೆ ನಡೆಸಿದ್ದಾರೆ. ಮಟ್ಟು ಗ್ರಾಮದ ನೂರಾರು ಕುಟುಂಬ ಗಳಿಂದ ಮಟ್ಟುಗುಳ್ಳ ಬೆಳೆಗಾರರ ಸಂಘ ದವರು ಕಳೆದೆರಡು ದಿನಗಳಿಂದ ಗುಳ್ಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.

ಇದೀಗ 3 ಟನ್ ಮಟ್ಟುಗುಳ್ಳವನ್ನು ಶೇಖರಣೆ ಗೊಳಿಸಲಾಗಿದ್ದು, ಇನ್ನೂ ಅನೇಕ ಕೃಷಿಕರು ಮಟ್ಟುಗುಳ್ಳದೊಂದಿಗೆ ತೆಂಗಿನ ಕಾಯಿ ಇನ್ನಿತರ ವಸ್ತುಗಳನ್ನು ಸಮರ್ಪಣೆ ಮಾಡಲಿದ್ದಾರೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುಧಾಕರ್ ಡಿ.ಅಮೀನ್ ತಿಳಿಸಿದ್ದಾರೆ. 

ಅನಾದಿ ಕಾಲದಿಂದಲೂ ಉಡು ಪಿಯ ಕೃಷ್ಣ ಮಠದಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವದಲ್ಲಿ ಮಟ್ಟುಗುಳ್ಳದ ಹೊರೆ ಕಾಣಿಕೆಯನ್ನು ಸಲ್ಲಿಸುವುದು ವಾಡಿಕೆ. ಉಡುಪಿಯ ಪ್ರಸಿದ್ಧ ಯತಿವರ್ಯರಾದ ವಾದಿರಾಜ ಸ್ವಾಮೀಜಿಗಳು ಮಟ್ಟು ಗ್ರಾಮದ ಜನತೆಯ ಜೀವನೋಪಾಯಕ್ಕೆ ಮಂತ್ರಿಸಿಕೊಟ್ಟ ವಿಶಿಷ್ಟ ಬೀಜದಿಂದಾಗಿ ಮಟ್ಟು ಗ್ರಾಮದಲ್ಲಿ ಮಟ್ಟುಗುಳ್ಳ ಬೆಳೆಯ ಕೃಷಿ ಪ್ರಾರಂಭವಾಯಿತು  ಎಂಬ ಐತಿಹ್ಯವಿದೆ.

ಈ ಕಾರಣದಿಂದಾಗಿ ಐತಿಹಾಸಿಕ ಮಟ್ಟುಗುಳ್ಳ ಉಡುಪಿ ಪರ್ಯಾಯ ಮಹೋತ್ಸವದಲ್ಲಿ ವಿಶೇಷತೆ ಪಡೆ ಯುವಂತಾಗಿದೆ. ಹಿರಿಯರು ನಡೆಸಿ ಕೊಂಡು ಬಂದ ಪರಂಪರೆಯನ್ನು ಅನೂ ಚಾನವಾಗಿ ಉಳಿಸುತ್ತಾ ಬಂದಿರುವ ಮಟ್ಟು ಗ್ರಾಮದ ಜನತೆ ಈ ಬಾರಿ ಮಟ್ಟುಗುಳ್ಳ ಬೆಳೆಗೆ ವಿಪರೀತವಾದ ರೋಗಭಾಧೆ ಇದ್ದರೂ ಧಾರ್ಮಿಕ ಶ್ರದ್ದೆಯಿಂದ ಗುಳ್ಳಬೆಳೆದು ಸಮರ್ಪಣೆ ಮಾಡಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.