ADVERTISEMENT

ಯಶಸ್ವಿನಿ ಯೋಜನೆಯ ವೈದ್ಯಕೀಯ ವೆಚ್ಚದ ಮಿತಿ ರದ್ದು: ಸಚಿವ ಪ್ರಮೋದ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:47 IST
Last Updated 18 ಏಪ್ರಿಲ್ 2017, 6:47 IST
ಬ್ರಹ್ಮಾವರ: ‘ಯಶಸ್ವಿನಿ ಯೋಜನೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ನೀಡುತ್ತಿರುವ ₹ 2 ಲಕ್ಷಗಳ ಮಿತಿಯನ್ನು ಸರ್ಕಾರ ರದ್ದುಗೊಳಿಸಲಿದ್ದು, ಇನ್ನು ಮುಂದೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಯಶಸ್ವಿನಿ ಯೋಜನೆಯಡಿ ಪಡೆಯುವ ಚಿಕಿತ್ಸೆ ಸಂಪೂರ್ಣ ಉಚಿತವಾಗಲಿದೆ’ ಎಂದು ರಾಜ್ಯದ ಮೀನುಗಾರಿಕೆ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು. 
 
ಅವರು ಸೋಮವಾರ ಬ್ರಹ್ಮಾವರ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಉಡುಪಿ, ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ದಿ ಮತ್ತು ಸುಧಾರಣೆ ಯೋಜನೆ ವತಿಯಿಂದ ಆಯೋಜಿಸಿದ್ದ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
 
‘ಕಾಂಗ್ರೆಸ್‌ ಸರ್ಕಾರ ಬಂದ ನಂತರ ವೈದ್ಯರು, ನರ್ಸ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿ ನೇಮಕಾತಿಯನ್ನು ನಡೆಸಿದ್ದು, ಇದರಿಂದ ಹಲವು ವರ್ಷಗಳಿಂದ ಇದ್ದ ಕೊರತೆ ನಿವಾರಣೆಯಾಗಿದೆ. ನಾಗರಿಕರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗಿದೆ.
 
ಈ ಬಾರಿಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ  ₹ 1000 ಗೌರವ ಧನ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಜನರಿಕ್ ಔಷಧ ಕೇಂದ್ರಗಳನ್ನು ತೆರೆದಿದ್ದು, ಇಲ್ಲಿ ಮಾರು ಕಟ್ಟೆ ಬೆಲೆಗಿಂತ ಶೇ 90 ರಿಯಾಯತಿ ದರದಲ್ಲಿ ಔಷಧಗಳು ಲಭ್ಯವಾಗುತ್ತಿವೆ. ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೇವೆ ಒದಗಿಸುವ ಚಿಂತನೆ ಇದೆ’ ಎಂದು ಸಚಿವರು ತಿಳಿಸಿದರು.
 
ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಪಂಚಾಯಿತಿ ಉಪಾ ಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಜನಾ ರ್ದನ ತೋನ್ಸೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸದಸ್ಯ ರಾದ ದಿನಕರ ಪೂಜಾರಿ, ಸುಧೀರ್‌ ಕುಮಾರ್ ಶೆಟ್ಟಿ, ಡಾ.ಸುನೀತಾ ಶೆಟ್ಟಿ,  ವಸಂತಿ ಪೂಜಾರಿ, ಕುಸುಮ ಪೂಜಾರಿ, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಹಾರಾಡಿ ಅಧ್ಯಕ್ಷೆ ಜಯಲಕ್ಷ್ಮಿ ಎ ಶೆಟ್ಟಿ, ಹಂದಾಡಿ ಅಧ್ಯಕ್ಷೆ ಪ್ರತಿಮಾ ಶೆಟ್ಟಿ, ಕೆಡಿಪಿ ಸದಸ್ಯ ಉಮೇಶ್ ನಾಯಕ್, ತಾಲ್ಲೂಕು ಆರೋಗ್ಯಾಧಿಕರಿ ಡಾ. ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಅರೋಗ್ಯಾಧಿಕಾರಿ ಡಾ.ರೋಹಿಣಿ ಸ್ವಾಗತಿಸಿದರು.
****
ನೂತನ ಆಸ್ಪತ್ರೆಯಲ್ಲಿ ಏನೇನಿದೆ?
ಬ್ರಹ್ಮಾವರದಲ್ಲಿ 30 ಹಾಸಿಗೆಗಳ ಸಾಮರ್ಥ್ಯದ ₹ 9.36 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕ, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಎಕ್ಸ್ ರೇ ಕೊಠಡಿ, ಪರೀಕ್ಷಾ ಕೇಂದ್ರ ಮಾತ್ರವಲ್ಲದೇ, ಸೋಲಾರ್ ಬಿಸಿ ನೀರಿನ ವ್ಯವಸ್ಥೆ, ಶೀಥಿಲೀಕರಣ ವ್ಯವಸ್ಥೆ ಹೊಂದಿರುವ ಶವಾಗಾರ, ಕೊಳವೆಬಾವಿ, ಮಳೆ ನೀರು ಸಂಗ್ರಹ ವ್ಯವಸ್ಥೆ ಇರಲಿವೆ. ವೈದ್ಯರು, ದಾದಿಯರು ಹಾಗೂ ಡಿ ಗ್ರೂಪ್‌ ಸಿಬ್ಬಂದಿಗಾಗಿ 16 ವಸತಿಗೃಹ ನಿರ್ಮಾಣ ಆಗಲಿದ್ದು, 12 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಸಚಿವ ಪ್ರಮೋದ್‌ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.