ADVERTISEMENT

ಯೋಜನೆಗಳನ್ನು ಸಮರ್ಪಕ ಜಾರಿಗೊಳಿಸಿ

ಜಿಲ್ಲಾ ಕಟ್ಟಡ ಮತ್ತು ಕೋರೆ ಕಾರ್ಮಿಕರ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:34 IST
Last Updated 25 ಮೇ 2017, 5:34 IST

ಉಡುಪಿ: ಕಟ್ಟಡ ಕಾರ್ಮಿಕರ ವಿವಿಧ ಯೋಜನೆಗಳನ್ನು ವಿಳಂಬ ಇಲ್ಲದೆ ಜಾರಿ ಮಾಡಬೇಕು ಎಂದು ಜಿಲ್ಲಾ ಕಟ್ಟಡ, ಕೋರೆ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ ಒತ್ತಾಯಿಸಿದೆ.

ಉಡುಪಿ ನಗರದ ಹಿಂದಿ ಪ್ರಚಾರ ಸಮಿತಿ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಈ ಬೇಡಿಕೆ ಮಂಡಿಸಲಾಯಿತು. ಕಟ್ಟಡ ಕಾರ್ಮಿಕರು ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಇನ್ನೂ ಮಂಜೂರಾಗಿಲ್ಲ.

ಮದುವೆ ಸಹಾಯ ಧನ, ಶೈಕ್ಷಣಿಕ ಸಹಾಯ ಧನ, ವೈದ್ಯಕೀಯ ಸಹಾಯ ಧನ ಯೋಜನೆಗೆ ಅರ್ಜಿ ಸಲ್ಲಿಸಿರುವವರಿಗೆ ಕೂಡಲೇ ಸವಲತ್ತು ಮಂಜೂರು ಮಾಡಬೇಕು ಎಂದು ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

ಐದು ವರ್ಷ ಪೂರೈಸಿದ ಕಟ್ಟಡ ಕಾರ್ಮಿಕರಿಗೆ ಮನೆ ಕಟ್ಟಲು ₹2 ಲಕ್ಷ ನೀಡುವ ಘೋಷಣೆ ಮಾಡಲಾಗಿದೆ. ಆದರೆ ಈ ವರೆಗೂ ಒಬ್ಬರಿಗೂ ಸೌಲಭ್ಯ ಸಿಕ್ಕಿಲ್ಲ. ಕೂಡಲೇ ಸಾಲ ಮಂಜೂರು ಮಾಡುವ ಮೂಲಕ ಕಾರ್ಮಿಕರು ಸೂರು ಕಟ್ಟಿಕೊಳ್ಳಲು ನೆರವಾಗಬೇಕು. ಪ್ರಸಕ್ತ ಜಾರಿಯಲ್ಲಿರುವ ಶೈಕ್ಷಣಿಕ ಸಹಾಯ ಧನ ಯೋಜನೆಯನ್ನು 1ನೇ ತರಗತಿಯಿಂದಲೇ ಜಾರಿ ಮಾಡಬೇಕು ಎಂದು ಸಹ ಒತ್ತಾಯಿಸಿತು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿ. ಭಟ್ ಅವರು ಮಂಡಿಸಿದ ಹಿಂದಿನ ವರ್ಷದ ಚಟುವಟಿಕೆಗಳ ವರದಿ ಮತ್ತು ವಾರ್ಷಿಕ ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಒಟ್ಟು 25 ಜನರ ಕಾರ್ಯಕಾರಿ ಸಮಿತಿ ರಚಿಸಿ ಒಂಬತ್ತು ಮಂದಿ ಪದಾಧಿಕಾರಿಗಳನ್ನು ಚುನಾಯಿಸಲಾಯಿತು.

ಅಧ್ಯಕ್ಷ– ಗಣಪತಿ ಪ್ರಭು, ಉಪಾಧ್ಯಕ್ಷರು– ಗೋಪಾಲ ನಾಯಕ, ಲೋಕೇಶ ಕರ್ಕೇರ, ಸತೀಶ ಕುಲಾಲ, ಪ್ರಧಾನ ಕಾರ್ಯದರ್ಶಿ– ಕೆ.ವಿ. ಭಟ್‌, ಕಾರ್ಯದರ್ಶಿಗಳು ದಿನೇಶ್ ಕನ್ನಡ, ಸುಧಾಕರ ನಾಯ್ಕ, ಶಿವ ಪೂಜಾರಿ, ಕೋಶಾಧಿಕಾರಿ ಶಶಿಕಲಾ ಗಿರೀಶ್.

ಸಿಪಿಐನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್‌, ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಬಿ. ಶೇಖರ್‌, ಎಐಟಿಯುಸಿ ಮುಖಂಡ ರಾಮ ಮೂಲ್ಯ ಶಿರ್ವ, ಸಂಜೀವ ಶೇರಿಗಾರ, ಸೋಮಪ್ಪ ಜತ್ತನ್ನ ಉಪಸ್ಥಿತರಿದ್ದರು. ಶಶಿಕಲಾ ಗಿರೀಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.