ADVERTISEMENT

‘ಸಾವಿನಲ್ಲಿ ರಾಜಕೀಯ ಹುಡುಕುತ್ತಿರುವ ಬಿಜೆಪಿ’

ರುದ್ರೇಶ್‌ ಹತ್ಯೆ ಪ್ರಕರಣ– ಐವನ್‌ ಡಿಸೋಜ ಆರೋಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 6:35 IST
Last Updated 22 ಅಕ್ಟೋಬರ್ 2016, 6:35 IST
ಮಂಗಳೂರು: ಬೆಂಗಳೂರಿನಲ್ಲಿ ನಡೆದ ರುದ್ರೇಶ್‌ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್‌ ಇಲಾಖೆ ತೀವ್ರವಾಗಿ ಪ್ರಯತ್ನಿಸುತ್ತಿದೆ.  ಆರೋಪಿಗಳನ್ನು ಪತ್ತೆ ಮಾಡಲು ಆರು ತಂಡಗಳನ್ನು ರಚಿಸಿ ದೇಶದ ವಿವಿಧೆಡೆ ಕಳುಹಿಸಲಾಗಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿಸೋಜ ಹೇಳಿದ್ದಾರೆ. 
 
ಅವರು ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 35 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರೂ, ಈ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ ಮುಖಂಡ ಯಡಿಯೂರಪ್ಪ ಅವರು ರಾಜ್ಯ ಬಂದ್‌ ಮಾಡುವುದಾಗಿ ಹೇಳುತ್ತಿದ್ದಾರೆ. ಸಾವಿನ ವಿಚಾರದಲ್ಲಿ ಯೂ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದರು. 
 
ಒಬ್ಬ ವ್ಯಕ್ತಿಯ ಸಾವು ಎಂದರೆ ಅದನ್ನು ಕಾಂಗ್ರೆಸ್‌ ಬಿಜೆಪಿಯ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಸಾವಿನಿಂದ ಸಮಾಜಕ್ಕೆ ನಷ್ಟವಾಗುತ್ತದೆ. ಅಪ್ಪ ಅಮ್ಮ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಬಿಜೆಪಿ ಕೇರಳ ಮಾದರಿಯ ರಾಜಕೀಯ ದ್ವೇಷ ಇದೆ ಎಂದು ಹೋಲಿಕೆಯನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು.
 
ಕೇರಳ, ಬಿಹಾರ ಮಾದರಿ, ಗುಜರಾತ್‌ ಮಾದರಿ ಎಂದು ಹೆಸರಿಸು ವುದು ಸರಿಯಲ್ಲ. ಎಲ್ಲ ರಾಜ್ಯಗಳ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವುದು ಪ್ರಜಾಪ್ರಭುತ್ವದ ಆಶಯ ವಾಗಿದೆ. ಆದರೆ ಬಿಜೆಪಿ ಮಾತ್ರ ಸಾವಿನ ಬಗ್ಗೆ ಆಯ್ದ ಟೀಕೆಗಳನ್ನು ಮಾಡುತ್ತದೆ.
 
ಬಿಜೆಪಿಯ ಕಾರ್ಯಕರ್ತರೇ ಆಗಿದ್ದ ವಿನಾಯಕ ಬಾಳಿಗಾ ಮತ್ತು ಪ್ರವೀಣ್‌ ಪೂಜಾರಿ ಕೊಲೆ ಆದಾಗ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅಥವಾ ಇತರ ಯಾವುದೇ ಮುಖಂಡರು ಅವರ ಮನೆಗೆ ಭೇಟಿ ನೀಡಿ ಸಾಂತ್ವನವನ್ನೂ ಹೇಳಲಿಲ್ಲ. ಪರಿಹಾರಕ್ಕೂ ಆಗ್ರಹಿಸಲಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. 
 
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ನಾಗೇಂದ್ರ ಕುಮಾರ್‌, ನಜೀರ್‌ ಬಜಾಲ್‌ ಮತ್ತಿತರರು ಇದ್ದರು.
 
ಭ್ರಷ್ಟಾಚಾರ ಆರೋಪ ಸರಿಯಲ್ಲ
ಎತ್ತಿನಹೊಳೆ ತಿರುವು ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಂಸದ ನಳಿನ್‌ ಕುಮಾರ್‌ ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಯೋಜನೆಯನ್ನು ಆರಂಭಿಸಿದ್ದು ಬಿಜೆಪಿ ಆಡಳಿತ. ಅಲ್ಲದೆ ಕರಾವಳಿಯನ್ನು ಹೊರತುಪಡಿಸಿ ಇತರ ಕಡೆಗಳಲ್ಲಿ ಬಿಜೆಪಿ ಈ ಯೋಜನೆಯನ್ನು ಬೆಂಬಲಿಸುತ್ತಿದೆ. ಆದರೆ ಯೋಜನೆಯಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಆಧಾರ ಸಹಿತ ಹೇಳಬೇಕು ಎಂದು ಶಾಸಕ ಐವನ್‌ ಆಗ್ರಹಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.