ADVERTISEMENT

ಹತ್ತು ಪೈಸೆಯನ್ನೂ ನೀಡಲಿಲ್ಲ: ಸಚಿವ ಮಧ್ವರಾಜ್

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ರಕ್ತ ನೀಡುತ್ತೇನೆ ಎಂದಿದ್ದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 12:32 IST
Last Updated 24 ಏಪ್ರಿಲ್ 2018, 12:32 IST

ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ರಕ್ತ ಕೊಡುತ್ತೇನೆ ಎಂದು ಹೇಳಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹತ್ತು ಪೈಸೆಯನ್ನೂ ನೀಡಲಿಲ್ಲ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಸೋಮವಾರ ನಾಮಪತ್ರ ಸಲ್ಲಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸಕ್ಕರೆ ಕಾರ್ಖಾನೆ ಆರಂಭಿಸಲು ಕೇಂದ್ರ ಕಬ್ಬು ಮಂಡಳಿಯೂ ಅಗತ್ಯ ನೆರವು ನೀಡಬೇಕಾಗುತ್ತದೆ. ಆದರೆ ಕೇಂದ್ರ ಯಾವುದೇ ರೀತಿಯ ನೆರವು ನೀಡುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ₹12 ಕೋಟಿಯನ್ನು ಸಕ್ಕರೆ ಕಾರ್ಖಾನೆಗೆ ಬಿಡುಗಡೆ ಮಾಡಿದೆ. ಕಾರ್ಖಾನೆ ಪುನಶ್ಚೇತನದ ಬಗ್ಗೆ ಆಡಳಿತ ಮಂಡಳಿ ಯೋಜನಾ ವರದಿ ತಯಾರಿಸಿದೆ. ಅದು ಕಾರ್ಯಸಾಧುವೆ ಹಾಗೂ ಎಷ್ಟು ಹಣ ಬೇಕಾಗುತ್ತದೆ ಎಂದು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಆ ಜಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣ ಮಾಡುವ ಚಿಂತನೆಯೂ ಇದೆ ಎಂದು ಅವರು ಹೇಳಿದರು.

ADVERTISEMENT

‘ಕಳೆದ ಐದು ವರ್ಷ ನಾನು ಮಾಡಿದ ಸೇವೆ ಹಾಗೂ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ನೋಡಿ ಜನರು ಮತ್ತೊಮ್ಮೆ ಗೆಲ್ಲಿಸುವ ವಿಶ್ವಾಸ ಇದೆ. ಭಾನುವಾರ ನಡೆದ ಜನಾಶೀರ್ವಾದ ಸಮಾವೇಶಕ್ಕೆ ನಿರೀಕ್ಷಿಸಿದಷ್ಟು ಜನರು ಬಂದು ಹರಸಿದರು. ಹತ್ತಾರು ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಇದ್ದರೂ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಂದಿದ್ದು ನೋಡಿ ಸಂತಸವಾಯಿತು. ಕಾರ್ಯಕರ್ತರ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ್ದೇನೆ. ನಾನು ಇನ್ನೊಂದು ಪಕ್ಷಕ್ಕೆ ಹೋಗುತ್ತೇನೆ ಎಂಬ ಅಪಪ್ರಚಾರಕ್ಕೆ ಈಗ ತೆರೆ ಬಿದ್ದಿದೆ ಎಂದು ಹೇಳಿದರು.

ಭಟ್ಟರು ಕುತಂತ್ರಿ, ನಾನು ಸೀದಾ– ಸಾದ ಸಭ್ಯ

‘ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಕುತಂತ್ರ ರಾಜಕಾರಣ ಮಾಡುತ್ತಾರೆ ಎಂದು ಎಲ್ಲ ಜನರಿಗೆ ಗೊತ್ತಿದೆ. ಅವರು ಏನೇ ಮಾಡಿದರೂ ಅದು ಕುತಂತ್ರ ಎಂದು ಜನರಿಗೆ ಗೊತ್ತಾಗುತ್ತದೆ. ನಾನು ಹಾಗಲ್ಲ ಸೀದಾ– ಸಾದಾ ಹಾಗೂ ಸಭ್ಯ ರಾಜಕಾರಣಿ’ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

‘ನಾನು ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ರಘುಪತಿ ಭಟ್ ಅವರು ಎಂಎಲ್‌ಎ ಆಗಿದ್ದಾಗ ನನ್ನ ಕಂಡರೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದರು. ನಾನು ಎಂದಿಗೂ ಆ ರೀತಿ ಮಾಡಿಲ್ಲ. ಕ್ಷೇತ್ರದಲ್ಲಿ ಒಂದೂವರೆ ಲಕ್ಷಕ್ಕಿಂತ ಅಧಿಕ ಮತದಾರರು ಇದ್ದಾರೆ. ಆದ್ದರಿಂದ ಅವರು ಹೀಗೆಯೇ ಮತ ಚಲಾಯಿಸುತ್ತಾರೆ ಎಂದು ಹೇಳಲು ಆಗುವುದಿಲ್ಲ. ಇಷ್ಟೇ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದರೆ ಅದು ದುರಹಂಕಾರ ಆಗುತ್ತದೆ. ಆದರೆ ಕಳೆದ ಐದು ವರ್ಷಗಳಲ್ಲಿ ನಾನು ಮಾಡಿರುವ ಕೆಲಸವನ್ನು ಪರಿಗಣಿಸಿ ಇನ್ನೊಮ್ಮೆ ಕೆಲಸ ಮಾಡಲು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.