ADVERTISEMENT

‘ತುಳಸಿಗೆ ವೈದ್ಯಕೀಯದಲ್ಲಿ ಮಹತ್ವದ ಸ್ಥಾನ’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 8:26 IST
Last Updated 24 ನವೆಂಬರ್ 2014, 8:26 IST

ಉಡುಪಿ: ‘ವಿಷ್ಣುಸಹಸ್ರನಾಮ ಪಾರಾಯಣದಿಂದ ಪುಣ್ಯ ಲಭಿಸುವುದರ ಜೊತೆಗೆ ನಾವು ಮಾಡಿದ ಪಾಪಗಳನ್ನು ಕಳೆದುಕೊಳ್ಳಬಹುದು. ಕಲಿಯುಗ­ದಲ್ಲಿ ಸಂಕೀರ್ತನೆ ಮೂಲಕ ಭಗವಂತನನ್ನು ಮೆಚ್ಚಿಸಬಹುದು’ ಎಂದು ಪರ್ಯಾಯ ಕಾಣಿ­ಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಕಾಣಿ­ಯೂರು ಮಠ ಮತ್ತು ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಸಂಯುಕ್ತವಾಗಿ ಉಡುಪಿಯ ರಾಜಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಶ್ರೀಕೃಷ್ಣ ದೇವರಿಗೆ ಕೋಟಿ ತುಳಸೀ ಅರ್ಚನೆ’ಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸ್ತ್ರಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ಮಹಾ­ಭಾರತ. ಅದರಲ್ಲಿ ವಿಷ್ಣುಸಹಸ್ರನಾಮ ಮತ್ತು ಭಗವದ್ಗೀತೆ ಶ್ರೇಷ್ಠವಾದದ್ದು, ಇದು ಭಗವಂತನಿಗೆ ಮೆಚ್ಚುಗೆಯಾದ ಸ್ತೋತ್ರವಾಗಿದೆ. ಭಗವಂತನಿಗೆ ಗಂಗಾಜಲ ಮತ್ತು ತುಳಸೀ ಅತ್ಯಂತ ಪ್ರಿಯವಾದ ವಸ್ತು. ಅದರಲ್ಲಿಯೂ ತುಳಸೀ ಇಲ್ಲದಿದ್ದರೆ ಪೂಜೆ ಸಂಪೂರ್ಣವಾಗು­ವುದಿಲ್ಲ. ತುಳಸೀ ಶಾಸ್ತ್ರೀಯ ಹಾಗೂ ಮೌಖಿಕ­ವಾಗಿ ಪ್ರಸಿದ್ಧಿ ಪಡೆದಿದ್ದರೂ, ಅದಕ್ಕೆ ವೈದ್ಯಕೀಯ­ದಲ್ಲಿ ಮಹತ್ವದ ಸ್ಥಾನವಿದೆ. ಅದು ಅಸ್ತಮಾ ಸೇರಿದಂತೆ ಅನೇಕ ಕಾಯಿಲೆಗಳನ್ನು ಗುಣ ಮಾಡುವ ಅಂಶವನ್ನು ಹೊಂದಿದೆ ಎಂದರು.    

ಲೋಕಾಯುಕ್ತ ನ್ಯಾಯಮೂರ್ತಿ ಡಾ. ವೈ. ಭಾಸ್ಕರ ರಾವ್‌ ಮಾತನಾಡಿ, ಪ್ರತಿದಿನ ಪೂಜೆ ಮಾಡುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ, ಅಹಿಂಸೆ ನೆಲೆಯೂರುತ್ತದೆ. ಹಾಗೆಯೇ ಇದು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರೇರಣೆಯಾಗುತ್ತದೆ ಎಂದರು.

‘ಬ್ರಾಹ್ಮಣ ಸಮುದಾಯ ಸ್ವಾರ್ಥಕ್ಕಾಗಿ ಕೆಲಸ ಮಾಡದೇ, ಸಮಾಜದ ಎಲ್ಲಾ ವರ್ಗದ ಜನರನ್ನು ಜೊತೆಗೆ ಕೊಂಡೊಯ್ಯಬೇಕು’ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಗೋಪಾಲ ಬಿ. ಹೊಸೂರ್‌ ಹೇಳಿದರು  ಬೆಂಗಳೂರು ನಿಸರ್ಗ ಆಯುರ್ವೇ­ದಿಕ್‌ ರಿಸರ್ಚ್‌ ಸೆಂಟರ್‌ನ ಡಾ. ವಿ. ಅಶೋಕ್‌ ಕುಮಾರ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಎಂ. ನರೇಂದ್ರ, ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಸ್ಥಾಪಕಾ­ಧ್ಯಕ್ಷ ಹರಿದಾಸ ಉಪಾಧ್ಯಾಯ, ಗೌರವಾಧ್ಯಕ್ಷ ಕೆ. ಕೃಷ್ಣರಾಜ ಸರಳಾಯ ಉಪಸ್ಥಿತರಿದ್ದರು. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.