ADVERTISEMENT

ಯುವ ಕಾಂಗ್ರೆಸ್ ಪಾತ್ರ ಮಹತ್ವದ್ದು: ಬಸವನಗೌಡ ಬಾದರ್ಲಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 7:14 IST
Last Updated 1 ಫೆಬ್ರುವರಿ 2018, 7:14 IST

ಉಡುಪಿ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಯುವ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಬೇಕಿದೆ. ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಎಬಿವಿಪಿಯನ್ನು ಎದುರಿಸಲು ಸನ್ನದ್ಧರಾಗಬೇಕು ಎಂದು ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು.

ಯುವ ಕಾಂಗ್ರೆಸ್ ಸಮಿತಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಮಂಗಳೂರು ವಲಯ ಮಟ್ಟದ ನಾಯಕತ್ವ ಅಭಿವೃದ್ಧಿ ತರಬೇತಿ ಶಿಬಿರ ‘ಯುವ ದೃಷ್ಟಿ’ವನ್ನು ಉದ್ಘಾಟಿಸಿ ಮಾತನಾಡಿದರು. ‘ಬಿಜೆಪಿ ಕೋಮು ಗಲಭೆ ಎಬ್ಬಿಸಿ ಜನರನ್ನು ಒಡೆಯಲು ಪ್ರಯತ್ನಿಸುತ್ತದೆ, ಆದರೆ ನಾವು ಅದನ್ನು ತಡೆಯಬೇಕು. ಸಮಾಜದ ಎಲ್ಲ ಧರ್ಮ, ಜಾತಿಯವರೊಂದಿಗೆ ಇದ್ದೇವೆ ಎಂಬುದನ್ನು ತೋರಿಸಬೇಕಿದೆ’ ಎಂದು ಅವರು ಹೇಳಿದರು.

‘ನಾನೂ ಸಹ ಹಿಂದೂ, ಆದರೆ ದೇವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ ಬಿಜೆಪಿ ಅಂತಹ ಕೆಲಸ ಮಾಡುತ್ತಿದ್ದು ಅದನ್ನು ವಿಫಲಗೊಳಿಸಬೇಕು. ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು ಎಷ್ಟು ಗಲಾಟೆ ಮಾಡಿದ್ದೀರ ಎಂದು ಅವರು ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್ ಷಾ ಅವರು ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಪ್ರತಾಪ ಸಿಂಹ ಅವರನ್ನು ಪ್ರಶ್ನಿಸುತ್ತಾರೆ. ಜೈಲಿಗೆ ಹೋಗಿ ಬಂದಿರುವ ಅಮಿತ್ ಷಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಾನ, ಮರ್ಯಾದೆ ಇಲ್ಲ’ ವಾಗ್ದಾಳಿ ನಡೆಸಿದರು.

ADVERTISEMENT

‘ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಇಂತಹ ಬಿಜೆಪಿ ಮುಖಂಡರಿಗೆ ಬುದ್ಧಿ ಕಲಿಸಬೇಕು. ಶೋಭಾ ಕರಂದ್ಲಾಜೆ ಅವರು ತಮ್ಮ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಬೇಕು. ಅದನ್ನು ಬಿಟ್ಟು ಜಾತಿ, ಧರ್ಮದ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು’ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಯುವ ಕಾಂಗ್ರೆಸ್ ಸದಸ್ಯರು ಪಕ್ಷದ ತತ್ವ ಮತ್ತು ಸಿದ್ಧಾಂತದ ಬಗ್ಗೆ ತಿಳಿದುಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನು ಮುಂದಿನ ಪ್ರಧಾನಿ ಮಾಡಲು ಯುವ ಕಾಂಗ್ರೆಸ್ ಕೆಲಸ ಮಾಡಬೇಕು ಎಂದರು.

ಯುವ ಕಾಂಗ್ರೆಸ್ ರಾಷ್ಟ್ರ ಘಟಕದ ಕಾರ್ಯದರ್ಶಿ ಜೆ.ಬಿ. ಮಾಥೂರ್, ರಾಜ್ಯ ಘಟಕದ ಉಪಾಧ್ಯಕ್ಷರಾದ ಶಿವಕುಮಾರ್, ರಾಜೇಂದ್ರ, ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ ಅಮಿನ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಿಥುನ್ ರೈ ಇದ್ದರು. ಆರು ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ದೆಹಲಿ ಚಲೋ ಮಾಡಿ ನಾವೂ ಬರ್ತೇವೆ

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸಿ ಯುವಕರಿಗೆ ಕೆಲಸ ನೀಡುತ್ತೇವೆ ಎಂದು ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. ಆದರೆ ಉದ್ಯೋಗ ಸೃಷ್ಟಿಯಲ್ಲಿ ಪಕ್ಷ ಸಂಪೂರ್ಣ ವಿಫಲವಾಗಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು ಸಂಸದ ಪ್ರತಾಪ ಸಿಂಹ ದೆಹಲಿ ಚಲೋ ಮಾಡಿದರೆ ಯುವ ಕಾಂಗ್ರೆಸ್ ಸಹ ಅವರಿಗೆ ಬೆಂಬಲ ನೀಡಲಿದೆ. ಯುವಕರಿಗೆ ಉದ್ಯೋಗ ಸಿಗಬೇಕು ಎಂಬುದು ನಮ್ಮ ಉದ್ದೇಶ ಸಹ ಆಗಿದೆ.

ಮಂಗಳೂರು ಚಲೋ ಮಾಡುತ್ತೇವೆ, ಬೈಕ್ ರ್‍ಯಾಲಿ ನಡೆಸುತ್ತೇವೆ ಎಂದು ಸಿಂಹ ಹೇಳಿದ್ದರು. ಕೋಮು ಗಲಭೆಗೆ ಪ್ರಚೋದನೆ ನೀಡುವುದನ್ನು ಅವರು ಬಿಡಬೇಕು. ಯುವಕರನ್ನು ದಾರಿ ತಪ್ಪಿಸಬಾರದು ಎಂದು ಬಸನಗೌಡ ಬಾದರ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.