ADVERTISEMENT

ಪರಶುರಾಮನ ಪ್ರತಿಮೆ ಮೇಲೆ ‘ರಾಜಕೀಯ': ಅಸಲಿಯೊ ನಕಲಿಯೊ ಚರ್ಚೆ ತಾರಕಕ್ಕೆಸಂಘರ್ಷ

ಎಚ್.ಬಾಲಚಂದ್ರ
Published 22 ಅಕ್ಟೋಬರ್ 2023, 23:49 IST
Last Updated 22 ಅಕ್ಟೋಬರ್ 2023, 23:49 IST
ಹಳೆಯ ಪರಶುರಾಮನ ಪ್ರತಿಮೆ (ಮೇಲಿನ ಚಿತ್ರ), ವಿನ್ಯಾಸ ಬದಲಾವಣೆಯ ಬಳಿಕ ಪರಶುರಾಮನ ಪ್ರತಿಮೆ (ಕೆಳಚಿತ್ರ)
ಹಳೆಯ ಪರಶುರಾಮನ ಪ್ರತಿಮೆ (ಮೇಲಿನ ಚಿತ್ರ), ವಿನ್ಯಾಸ ಬದಲಾವಣೆಯ ಬಳಿಕ ಪರಶುರಾಮನ ಪ್ರತಿಮೆ (ಕೆಳಚಿತ್ರ)   

ಉಡುಪಿ: ಕಾರ್ಕಳ ತಾಲ್ಲೂಕು ಉಮ್ಮಿಕಲ್‌ ಬೆಟ್ಟದ ಮೇಲೆ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ 33 ಅಡಿ ಎತ್ತರದ ಪರಶುರಾಮನ ‘ಕಂಚಿನ’ ಪ್ರತಿಮೆ ಅಸಲಿಯೊ ನಕಲಿಯೊ ಎಂಬ ಚರ್ಚೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

‘ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಪರಶುರಾಮನ ‘ನಕಲಿ’ ಪ್ರತಿಮೆ ನಿರ್ಮಾಣ ಮಾಡಿ, ಇದೀಗ ಅಪೂರ್ಣ ಕಾಮಗಾರಿ ಹೆಸರಿನಲ್ಲಿ ಪ್ರತಿಮೆಯನ್ನು ಸ್ಥಳಾಂತರಿಸಲಾಗಿದೆ. ಅಸಲಿಗೆ ಪರಶುರಾಮನ ಪ್ರತಿಮೆ ಪೂರ್ಣ ಪ್ರಮಾಣದಲ್ಲಿ ಕಂಚಿನದ್ದಲ್ಲ; ಸೊಂಟದ ಮೇಲ್ಭಾಗ ಫೈಬರ್ ಅಥವಾ ಇತರ ಸಾಮಗ್ರಿಗಳಿಂದ ನಿರ್ಮಾಣ ಮಾಡಲಾಗಿದೆ. ತುಳುನಾಡಿನ ಸೃಷ್ಟಿಕರ್ತನ ಹೆಸರಲ್ಲಿ ಬಿಜೆಪಿ ಧರ್ಮ ರಾಜಕಾರಣ ಮಾಡಿದೆ’ ಎಂಬುದು ಕಾಂಗ್ರೆಸ್‌ ನಾಯಕರ ಆರೋಪ.

ಗೋಮಾಳ ಜಾಗದಲ್ಲಿ ಪರಶುರಾಮ ಥೀಂ ಪಾರ್ಕ್‌ ನಿರ್ಮಾಣ ಮಾಡಲಾಗಿದೆ. ‘ಅನ್ಯ ಉದ್ದೇಶಕ್ಕೆ ಗೋಮಾಳ ಜಾಗವನ್ನು ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಮಾರ್ಚ್‌ನಲ್ಲಿಯೇ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದರೂ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ನಿರ್ಮಿತಿ ಕೇಂದ್ರದಿಂದ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗಿದೆ. ಅನಧಿಕೃತ ಕಾಮಗಾರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಅನುದಾನವೂ ಬಿಡುಗಡೆಯಾಗಿದೆ. ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದ ಬಳಿಕ ಕಾಮಗಾರಿ ಅಪೂರ್ಣ ನೆಪವೊಡ್ಡಿ ಪ್ರತಿಮೆಯನ್ನು ಸ್ಥಳಾಂತರಿಸಲಾಗಿದೆ’ ಎಂದು ಆರೋಪಿಸುತ್ತಾರೆ ಕಾಂಗ್ರೆಸ್ ಮುಖಂಡ ಶುಭದ ರಾವ್.

ADVERTISEMENT

ಪರಶುರಾಮನ ಪ್ರತಿಮೆ ನಿರ್ಮಾಣಕ್ಕೆ ಕಾಂಗ್ರೆಸ್‌ನ ಎಳ್ಳಷ್ಟೂ ವಿರೋಧವಿಲ್ಲ. ಆದರೆ, ಪ್ರತಿಮೆ ಅಸಲಿಯೊ, ನಕಲಿಯೊ ಎಂಬುದು ಬಹಿರಂಗವಾಗಬೇಕು. ಪ್ರತಿಮೆ ನಕಲಿಯಾಗಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಾರೆ ಶುಭದ ರಾವ್‌.

ಸಿಬಿಐ ತನಿಖೆ ಮಾಡಿಸಿ:

ಕಾಂಗ್ರೆಸ್‌ ನಾಯಕರ ಆರೋಪಗಳನ್ನು ಶಾಸಕ ವಿ. ಸುನಿಲ್ ಕುಮಾರ್ ತಳ್ಳಿ ಹಾಕಿದ್ದಾರೆ. ಪರಶುರಾಮನ ಪ್ರತಿಮೆ ನಕಲಿಯಲ್ಲ; ಸಂಪೂರ್ಣ ಕಂಚಿನಿಂದ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಜ್ಞರ ಸಲಹೆಯಂತೆ ಪ್ರತಿಮೆಯ ಕೆಲವು ಭಾಗಗಳನ್ನು ಬದಲಾವಣೆ ಮಾಡಬೇಕಿದೆ. ಪ್ರತಿಮೆಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಸ್ಥಳಾಂತರಿಸಲಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಹಾಗೂ ಜಿಲ್ಲೆಯ ಪ್ರವಾಸೋದ್ಯಮವನ್ನು ಹಾಳುಗೆಡವಲು ಕಾಂಗ್ರೆಸ್ ನಾಯಕರು ವಾಸ್ತವ ಮರೆಮಾಚಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರ್ಕಳ ತಾಲ್ಲೂಕಿನ ಉಮಿಲ್ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದ್ದ ಪರಶುರಾಮನ ಕಂಚಿನ ಪ್ರತಿಮೆಯ ಅರ್ಧ ಭಾಗ ತೆರವುಗೊಳಿಸಿರುವುದು

₹14.5 ಕೋಟಿ ವೆಚ್ಚದ ಪರಶುರಾಮ ಥಿಂ ಪಾರ್ಕ್‌ ಕಾಮಗಾರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹6.5 ಕೋಟಿ ಮಾತ್ರ ಬಿಡುಗಡೆಯಾಗಿದೆ. ಉಳಿದ ₹8 ಕೋಟಿ ಬಿಡುಗಡೆ ಮಾಡಲು ಕಾಂಗ್ರೆಸ್‌ ಸರ್ಕಾರ ಅಡ್ಡಗಾಲು ಹಾಕಿದೆ. ಪರಶುರಾಮನ ಪ್ರತಿಮೆ ನಕಲಿ ಎಂದಾದರೆ ಸಿಬಿಐ ಸೇರಿದಂತೆ ಯಾವುದೇ ತನಿಖೆ ಎದುರಿಸಲು ಸಿದ್ಧ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇದ್ದರೂ ತನಿಖೆಗೆ ಹಿಂದೇಟು ಹಾಕುತ್ತಿರುವುದು ಏಕೆ, ಯಾವುದೇ ಸಾಕ್ಷ್ಯಗಳನ್ನು ನೀಡದೆ ಆಧಾರ ರಹಿತ ಆರೋಪ ಮಾಡುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸುತ್ತಾರೆ ಸುನಿಲ್ ಕುಮಾರ್.

ಏನೆಲ್ಲ ಬದಲಾವಣೆ?

ಪರಶುರಾಮ ಬಲಗೈನಲ್ಲಿ ಹಿಡಿದಿರುವ ಕೊಡಲಿ ತೀರಾ ಭಾರವಾಗಿರುವುದರಿಂದ ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಬಲಗೈಗೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪರಶುರಾಮನ ಕೈನಲ್ಲಿರುವ ಕೊಡಲಿಯನ್ನು ಜುಟ್ಟಿಗೆ ಸೇರಿಸಿ ಸಾಮರ್ಥ್ಯ ಬಲಗೊಳಿಸಬೇಕಿದೆ ಎಂಬುದು ಅಧಿಕಾರಿಗಳ ವಿವರಣೆ.

  • ಪರಶುರಾಮ ಥೀಂ ಪಾರ್ಕ್‌ ನಿರ್ಮಾಣದ ವೆಚ್ಚ: ₹14.5 ಕೋಟಿ‌

  • ಸರ್ಕಾರದಿಂದ ಬಿಡುಗಡೆಯಾಗಿರುವ ಮೊತ್ತ: ₹6.5 ಕೋಟಿ

  • ಬಿಡುಗಡೆಗೆ ಬಾಕಿ ಇರುವ ಮೊತ್ತ: ₹8 ಕೋಟಿ

  • ಕಾಮಗಾರಿ ನಿರ್ಮಾಣ ಹೊಣೆ: ನಿರ್ಮಿತಿ ಕೇಂದ್ರ

  • ಪರಶುರಾಮನ ಪ್ರತಿಮೆಯ ಎತ್ತರ: 33 ಅಡಿ

  • ಕಂಚಿನ ಪ್ರತಿಮೆಯ ತೂಕ: 15 ಟನ್‌

  • ನೆಲಮಟ್ಟದಿಂದ 400 ಅಡಿ ಮೇಲೆ ಪರಶುರಾಮ ವಿಗ್ರಹ ನಿರ್ಮಾಣ ಥೀಂ ಪಾರ್ಕ್‌ನಲ್ಲಿ ಪರಶುರಾಮನ ಜೀವನ ವೃತ್ತಾಂತ ಗ್ಯಾಲರಿ ನಿರ್ಮಾಣ

ಪರಶುರಾಮ ಥೀಂ ಪಾರ್ಕ್ ಇರುವ ಗೋಮಾಳ ಜಾಗವನ್ನು ವಿರಹಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಾರ್ವಜನಿಕ ಉದ್ದೇಶಗಳಿಗೆ ಗೋಮಾಳ ಬಳಸಲು ಕಾನೂನಿನಲ್ಲಿ ಅವಕಾಶವಿರುವುದರಿಂದ ಸಂಪುಟ ಸಭೆ ಒಪ್ಪಿಗೆ ನೀಡಿದರೆ ಜಾಗದ ಸಮಸ್ಯೆ ಬಗೆಹರಿಯಲಿದೆ. ಆದರೆ ಕಾರ್ಕಳ ಕ್ಷೇತ್ರದ ಪ್ರತಿಷ್ಠೆ ಹಾಗೂ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಹಾಳುಮಾಡುವ ಉದ್ದೇಶದಿಂದ ವ್ಯವಸ್ಥಿತ ಸಂಚು ರೂಪಿಸಿ ಅಪಪ್ರಚಾರ ನಡೆಸಲಾಗುತ್ತಿದೆ. ಈ ಷಡ್ಯಂತ್ರದ ಹಿಂದೆ ಬುದ್ದಿಜೀವಿಗಳು ನಗರ ನಕ್ಸಲರು ಅನ್ಯ ಧರ್ಮೀಯರು ಸೇರಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ಲಾಭ ಪಡೆಯುವ ದುರದ್ದೇಶವೂ ಅಡಗಿದೆ.
– ವಿ.ಸುನಿಲ್ ಕುಮಾರ್ ಕಾರ್ಕಳ ಶಾಸಕ
ಪರಶುರಾಮನ ಪ್ರತಿಮೆ ಕಂಚಿನದ್ದಾಗಿದ್ದಾರೆ 10 ಟನ್‌ ತೂಕವಿರುವ ಪ್ರತಿಮೆಯ ಮೇಲ್ಭಾಗವನ್ನು ಕ್ರೇನ್ ಬಳಸದೆ ಸುಲಭವಾಗಿ ಕೆಳಗಿಳಿಸಿ ಕಂಟೆನರ್‌ನಲ್ಲಿ ಸಾಗಿಸಿದ್ದು ಹೇಗೆ? ಪ್ರತಿಮೆ ಸುತ್ತಲೂ ಹೊದಿಕೆ ಮುಚ್ಚಿದ್ದು ಏಕೆ? ಪ್ರತಿಮೆ ಕಂಚಿನದ್ದು ಎಂದಾರೆ ಸೊಂಟದ ಮೇಲ್ಭಾಗವನ್ನು ಮಾತ್ರ ಸಾಗಿಸಿ ಉಳಿದ ಭಾಗವನ್ನು ಬಿಟ್ಟಿದ್ದು ಏಕೆ? ಪರಶುರಾಮನ ಪ್ರತಿಮೆ ಕಂಚಿನದ್ದಲ್ಲ ಹಾಗೂ ಅಕ್ರಮಗಳು ನಡೆದಿರುವುದಕ್ಕೆ ಬಹಳಷ್ಟು ಪುರಾವೆಗಳು ಆರ್‌ಟಿಐನಡಿ ಸಿಕ್ಕಿವೆ.
–ಶುಭದ ರಾವ್‌ ಕಾಂಗ್ರೆಸ್ ಮುಖಂಡ
ಪರಶುರಾಮನ ಪ್ರತಿಮೆ ನಿರ್ಮಾಣ ಕಾಮಗಾರಿ ತುರ್ತಾಗಿ ನಡೆದಿರುವುದರಿಂದ ಕೆಲವು ಲೋಪದೋಷಗಳು ಇವೆ. ಪ್ರತಿಮೆಯ ಕೆಲವು ಭಾಗಗಳು ಭಾರ ಹೆಚ್ಚಾಗಿರುವುದರಿಂದ ಮಳೆ–ಗಾಳಿಗೆ ತುಂಡಾಗುವ ಆತಂಕಗಳಿತ್ತು. ಮುಖ್ಯವಾಗಿ ಪ್ರತಿಮೆಗೆ ಸಿಡಿಲು ನಿರೋಧಕ ವ್ಯವಸ್ಥೆ ಅಳವಡಿಕೆಯಾಗಿರಲಿಲ್ಲ. ಹಾಗಾಗಿ ತಜ್ಞರ ಸಲಹೆ ಹಿನ್ನೆಲೆಯಲ್ಲಿ ಪ್ರತಿಮೆ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪ್ರತಿಮೆ ನಿರ್ಮಾಣದ ಪ್ರತಿ ಹಂತವನ್ನು ಎನ್‌ಐಟಿಕೆ ತಜ್ಞರ ತಂಡ ಪರಿಶೀಲಿಸಲಿದೆ. ಅದರನ್ವಯ ಪ್ರತಿಮೆ ನಿರ್ಮಾಣ ಕಾಮಗಾರಿ ನಡೆಯಲಿದೆ. ವಿಧಾನಸಭೆ ಚುನಾವಣೆಗೂ ಮೊದಲೇ ಕಾಮಗಾರಿ ಆರಂಭವಾಗಬೇಕಿತ್ತು. ನೀತಿ ಸಂಹಿತೆಯಿಂದ ತಡವಾಯಿತು. ಮಳೆಗಾಲ ಬಂದಿದ್ದರಿಂದ ಮತ್ತಷ್ಟು ವಿಳಂಬವಾಯಿತು. ಎರಡೂವರೆ ತಿಂಗಳಲ್ಲಿ ಥೀಂ ಪಾರ್ಕ್‌ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷೆ ಇದೆ.
–ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ ಉಡುಪಿ
33 ಅಡಿ ಪರಶುರಾಮನ ಪ್ರತಿಮೆ ಪೂರ್ಣ ಕಂಚಿನಿಂದ ನಿರ್ಮಾಣವಾಗಿರುವುದು ಸತ್ಯ. ಎಲ್ಲಿಯೂ ಫೈಬರ್ ಬಳಕೆ ಮಾಡಿಲ್ಲ; ಪ್ರತಿಮೆಯ ವೆಲ್ಡಿಂಗ್ ಜಾಗದಲ್ಲಿ ಚೆಂದಗಾಣಿಸಲು ಪೇಸ್ಟ್‌ ಬಳಕೆ ಮಾಡಲಾಗಿದೆ. ಪ್ರತಿಮೆಗೆ 15 ಟನ್‌ ಕಂಚು ಬಳಕೆಯಾಗಿಲ್ಲ ಎಂದು ಸಾಬೀತುಪಡಿಸಿದರೆ ಕಲಾ ವೃತ್ತಿಯನ್ನೇ ಬಿಟ್ಟುಬಿಡುತ್ತೇನೆ. ಪ್ರತಿಮೆ ನಿರ್ಮಾಣದಲ್ಲಿ ಕೆಲವು ಲೋಪದೋಷಗಳಾಗಿದ್ದು ಮುಂದೆ ಸರಿಪಡಿಸಲಾಗುವುದು. ಸರ್ಕಾರದಿಂದ ಬಾಕಿ ಹಣ ಬಿಡುಗಡೆ ಮಾಡಿದರೆ ಐದಾರು ತಿಂಗಳಲ್ಲಿ ಪರಶುರಾಮನ ಅದ್ಭುತ ಕಲಾಕೃತಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸುತ್ತೇನೆ.
–ಕೃಷ್ಣಾ ನಾಯ್ಕ್‌ ಶಿಲ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.