ADVERTISEMENT

ಅಡಿಕೆಗೆ ಎಲೆಚುಕ್ಕೆ ರೋಗ ಬಾಧೆ

ಹಾರ್ಟಿ ಕ್ಲಿನಿಕ್‌ನಿಂದ ರೋಗ ನಿಯಂತ್ರಿಸಲು ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:55 IST
Last Updated 11 ಜುಲೈ 2017, 11:55 IST

ಶಿರಸಿ: ಜಿಲ್ಲೆಯ ಕರಾವಳಿ, ಮಲೆನಾಡಿ ನಲ್ಲಿ ಸಾಮಾನ್ಯ ಮಳೆಯಾಗಿದ್ದರೆ ಅರೆ ಮಲೆನಾಡು, ಬಯಲು ಸೀಮೆ ಪ್ರದೇಶ­ದಲ್ಲಿ ಕಡಿಮೆ ಮಳೆಯಾಗಿದೆ. ಹವಾ­ಮಾನ ವೈಪರೀತ್ಯದಿಂದ ಹಲವು ಕಡೆಗಳಲ್ಲಿ ಅಡಿಕೆಗೆ ರಸ ಹೀರುವ ತಿಗಣೆ ಕೀಟ ಮತ್ತು ಎಲೆಚುಕ್ಕೆ ರೋಗ ತೀವ್ರವಾಗಿದೆ.

ಇಲ್ಲಿನ ತೋಟಗಾರಿಕೆ ಇಲಾಖೆ­ಯಲ್ಲಿರುವ ಹಾರ್ಟಿ ಕ್ಲಿನಿಕ್ ರೋಗ ನಿಯಂತ್ರಿಸಲು ರೈತರಿಗೆ ಸಲಹೆ ನೀಡಿದೆ.

ಎಳೆ ಅಡಿಕೆ ರಸ ಹೀರುವ ತಿಗಣೆ ಕೀಟದ ಬಾಧೆಯಿಂದ ಅಡಿಕೆ ಉದು­ರುತ್ತಿದ್ದಲ್ಲಿ ಡೈಮಿಥೋಯೇಟ್ 1.75 ಮಿ.ಲಿ ಅಥವಾ ಮೊನೋಕ್ರೊಟೋ­ಫಾಸ್ 1.5ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಮಳೆ ಬಿಡುವಿದ್ದಾಗ ಮಾತ್ರ ಗೊನೆಗಳಿಗೆ ಸಿಂಪಡಿಸಬೇಕು.

ADVERTISEMENT

ಅಡಿಕೆ ಕೊಳೆ ರೋಗ ಮತ್ತು ಕೋಕೊಕಾಯಿ ಕೊಳೆ ರೋಗ ನಿಯಂತ್ರಣಕ್ಕೆ ಮುಂಜಾಗ್ರತೆಯಾಗಿ ಶೇ 1ರ  ಬೋರ್ಡೊ ದ್ರಾವಣ ಸಿಂಪಡಿಸ­ಬೇಕು. ಎಲೆಚುಕ್ಕೆ ರೋಗವಿರುವ ಇರುವ ಅಡಿಕೆ ಮರದ ಎಲೆಗಳಿಗೂ ಬೋರ್ಡೊದ್ರಾವಣ ಸಿಂಪಡಿಸಬಹುದು.

ಅಡಿಕೆಯಲ್ಲಿ ಬೇರುಹುಳ ನಿಯಂತ್ರಣಕ್ಕೆ ಕ್ಲೋರೋಫೈರಿಫಾಸ್ ಕೀಟನಾಶಕವನ್ನು 4 ಮಿ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ. ಈ ದ್ರಾವಣವನ್ನು ಪ್ರತಿ ಮರದ ಬುಡದ ಸುತ್ತಲೂ 3ಲೀಟರ್‌ನಷ್ಟು ಹಾಕಬೇಕು. ಜೈವಿಕ ಬೇರು ಹುಳನಾಶಕ(ಸೋಲ್ಜರ್)ವನ್ನು 5ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ, ಪ್ರತಿ ಮರದ ಬುಡದ ಸುತ್ತಲೂ ಒಂದು ಲೀಟರ್ ದ್ರಾವಣ ಹಾಕಬೇಕು.

ಕಾಳು ಮೆಣಸಿನ ಬಳ್ಳಿಯ ಸೊರಗು ರೋಗ ನಿಯಂತ್ರಣಕ್ಕೆ ಬಳ್ಳಿಯ ಎಲೆ, ಚಿಗುರು ಕೊಳೆ ನಿಯಂತ್ರಣಕ್ಕೆ ಮುಂಜಾಗ್ರತೆ­ಯಾಗಿ ಶೇ 1ರ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು. ಶುಂಠಿಯ ಗಡ್ಡೆ ಕೊಳೆ ನಿಯಂತ್ರಣಕ್ಕಾಗಿ ಕಾಪರ್ ಆಕ್ಸಿಕ್ಲೋರೈಡ್ ಶೀಲೀಂಧ್ರ­ನಾಶಕ­ವನ್ನು 3ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು.

ರೋಗ ಪ್ರಾರಂಭವಾಗಿದ್ದಲ್ಲಿ ಮೆಟಾಲಾಕ್ಸಿಲ್ ಎಂ.ಝಡ್ 2ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣ ಹಾಕಬೇಕು. ಶುಂಠಿಯಲ್ಲಿ ಕಾಂಡ ಕೊರೆಯುವ ಮತ್ತು ಎಲೆ ತಿನ್ನುವ ಕೀಟಗಳ ನಿಯಂತ್ರಣಕ್ಕೆ ಮೊನೋ­ಕ್ರೊಟೋಫಾಸ್ 1.5ಮಿ.ಲಿ ಅಥವಾ ಡೈಮಿಥೋಯೇಟ್ 1.75 ಮಿ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಹಾರ್ಟಿ ಕ್ಲಿನಿಕ್ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.