ADVERTISEMENT

ಅವ್ಯವಸ್ಥೆಯ ಗೂಡಾದ ಕಾರವಾರ ಬಸ್‌ನಿಲ್ದಾಣ

ನಿಲ್ದಾಣದಲ್ಲಿ ಮೂಲಸೌಕರ್ಯ ಕೊರತೆ, ಕಿಷ್ಕೆಂಧೆಯಾದ ಸ್ಥಳದಲ್ಲಿ ಬಸ್‌ ನಿಲುಗಡೆಗೆ ಅವಕಾಶ

ಪಿ.ಕೆ.ರವಿಕುಮಾರ
Published 20 ಫೆಬ್ರುವರಿ 2017, 6:48 IST
Last Updated 20 ಫೆಬ್ರುವರಿ 2017, 6:48 IST
ಕಾರವಾರದ ಬಸ್‌ ನಿಲ್ದಾಣದಲ್ಲಿ ಸ್ಥಳಾವಕಾಶ ಕೊರತೆಯಿಂದ ನಗರ ಸಾರಿಗೆ ಬಸ್‌ವೊಂದು (ಬಲಬದಿ) ನಿಲ್ದಾಣದ ಹೊರಗೆ ನಿಂತಿರುವುದು
ಕಾರವಾರದ ಬಸ್‌ ನಿಲ್ದಾಣದಲ್ಲಿ ಸ್ಥಳಾವಕಾಶ ಕೊರತೆಯಿಂದ ನಗರ ಸಾರಿಗೆ ಬಸ್‌ವೊಂದು (ಬಲಬದಿ) ನಿಲ್ದಾಣದ ಹೊರಗೆ ನಿಂತಿರುವುದು   

ಕಾರವಾರ: ಮೂಲಸೌಕರ್ಯಗಳ ಕೊರತೆ ಇಲ್ಲಿನ ಕೇಂದ್ರ ಬಸ್‌ನಿಲ್ದಾಣ ವನ್ನು ಕಾಡುತ್ತಿದೆ. ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಭದ್ರತಾ ವ್ಯವಸ್ಥೆ ಇಲ್ಲಿ ಮರೀಚಿಕೆಯಾಗಿದ್ದು, ಬಸ್‌ಗಳ ನಿಲುಗಡೆಗೂ ಇಲ್ಲಿ ಸಮರ್ಪಕ ಸ್ಥಳಾವಕಾಶ ಇಲ್ಲವಾಗಿದೆ.

₹ 2.77 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಬಸ್‌ ನಿಲ್ದಾಣವನ್ನು ಡಿ. 26, 2012ರಲ್ಲಿ ಆಗಿನ ಮುಖ್ಯ ಮಂತ್ರಿ ಜಗದೀಶ್‌ ಶೆಟ್ಟರ್‌ ತರಾತುರಿ ಯಲ್ಲಿ ಉದ್ಘಾಟನೆ ಮಾಡಿದ್ದರು. ಆದರೆ ಈ ನಿಲ್ದಾಣವು ಅಭಿವೃದ್ಧಿಯಲ್ಲಿ ತೀರಾ ಹಿಂದೆ ಬಿದ್ದಿದ್ದು, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಾಯವ್ಯ ಕರ್ನಾ ಟಕ ರಾಜ್ಯ ಸಾರಿಗೆ ಸಂಸ್ಥೆ ವಿಫಲವಾಗಿದೆ.

ಸ್ಥಳಾವಕಾಶದ ಕೊರತೆ: ಕಿರಿದಾಗಿದ್ದ ನಿಲ್ದಾಣವನ್ನು ವಿಸ್ತರಣೆ ಮಾಡುವ ದೃಷ್ಟಿ ಯಿಂದ ಪಕ್ಕದಲ್ಲಿದ್ದ ಹಳೆ ತಹಶೀಲ್ದಾರ್‌ ಕಚೇರಿ ಜಾಗವನ್ನು ಸಾರಿಗೆ ಸಂಸ್ಥೆಯು ಕಂದಾಯ ಇಲಾಖೆಯಿಂದ ₹ 55 ಲಕ್ಷಕ್ಕೆ ಈ ಹಿಂದೆ ಖರೀದಿ ಮಾಡಿತ್ತು. ಆದರೆ ಅಲ್ಲಿದ್ದ ಹಳೆ ಕಟ್ಟಡವನ್ನು ನೆಲಸಮ ಗೊಳಿಸಲು ವಿಳಂಬಧೋರಣೆ ಅನು ಸರಿಸಿತು. ಜಯಕರ್ನಾಟಕ ಸಂಘಟ ನೆಯ ಹೋರಾಟದ ಫಲವಾಗಿ  ಕಟ್ಟಡ ವನ್ನು ಕೆಡವಿ, ಆ ಜಾಗದಲ್ಲಿ ಬಸ್‌ಗಳು ನಿಲುಗಡೆ ಮಾಡಲು ಅನುಕೂಲ ವಾಗುವಂತೆ ಇಂಟರ್‌ಲಾಕ್‌ ಟೈಲ್ಸ್‌ಗ ಳನ್ನು ಅಳವಡಿಸಲಾಗಿದೆ. ಇನ್ನೂ ಸ್ವಲ್ಪ ಭಾಗಕ್ಕೆ ಟೈಲ್ಸ್‌ ಹಾಕದೇ ಹಾಗೆಯೇ ಬಿಡಲಾಗಿದ್ದು, ಈ ಜಾಗದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ.

ಹೊರಗೆ ನಿಲ್ಲುತಿದೆ ಬಸ್‌: ಜೆ–ನರ್ಮ್‌ ಯೋಜನೆಯಡಿ ಮೊದಲ ಹಂತದಲ್ಲಿ 4 ನಗರಸಾರಿಗೆ ಬಸ್‌ಗಳು ಬಂದಿದ್ದವು. ಇದೀಗ ಹೊಸದಾಗಿ ಇನ್ನೂ 16 ಬಸ್‌ ಗಳು ಬಂದಿವೆ. ಹೀಗಾಗಿ ನಿಲ್ದಾಣದಲ್ಲಿ ಬಸ್‌ಗಳ ಸಂಖ್ಯೆ ಜಾಸ್ತಿ ಆಗಿದ್ದು, ಅವುಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಒಮ್ಮೊಮ್ಮೆ ಸ್ಥಳದ ಅಭಾವದಿಂದ ಚಾಲಕರು ಬಸ್ಸನ್ನು ನಿಲ್ದಾಣದಿಂದ ಹೊರಗಡೆ ನಿಲ್ಲಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

‘ಪ್ರಯಾಣಿಕರ ಭದ್ರತೆ ದೃಷ್ಟಿಯಿಂದ ನಿಲ್ದಾಣದಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಬೇಕಿದೆ. ಕುಡಿಯುವ ನೀರು, ಮಹಿಳೆಯರಿಗೆ ಹಾಗೂ ಚಾಲನಾ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ನಿಲ್ದಾಣದಲ್ಲಿ ಸ್ವಚ್ಛತೆಗೂ ಆದ್ಯತೆ ಇರಲಿ. ಇಲ್ಲಿನ ಶೌಚಾಲಯದಲ್ಲಿ ಮೂತ್ರ ವಿಸ ರ್ಜನೆಗೂ ಹಣ ವಸೂಲಿ ಮಾಡಲಾ ಗುತ್ತಿದ್ದು, ಅದನ್ನು ತಡೆಗಟ್ಟಬೇಕು’ ಎನ್ನುತ್ತಾರೆ ಪ್ರಯಾಣಿಕ ಸುರೇಶ್‌.
 
ನಿಲ್ದಾಣ ವಿಸ್ತರಣೆಗೆ ಪ್ರಸ್ತಾವ: ‘ಕಾರವಾರ ಬಸ್‌ ನಿಲ್ದಾಣದ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಳ್ಳು ವಂತೆ ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕಚೇರಿಗೆ ಪ್ರಸ್ತಾವ ಸಲ್ಲಿಸಿ ದ್ದೇವೆ. ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿ ಅನುದಾನ ಬಿಡುಗಡೆ ಯಾಗುವ ನಿರೀಕ್ಷೆಯಿದ್ದು, ಅಂದಾಜು ₹ 8 ಕೋಟಿ ವೆಚ್ಚದಲ್ಲಿ ವಿಸ್ತರಣಾ ಕಾಮ ಗಾರಿ ನಡೆಯಲಿದೆ. ನಿಲ್ದಾಣದಲ್ಲಿ ಇರು ವ ಕುಡಿಯುವ ನೀರಿನ ಸಮಸ್ಯೆಯನ್ನು ಇನ್ನೆರಡು ವಾರದಲ್ಲಿ ಬಗೆಹರಿಸಲಾ ಗುವುದು’ ಎಂದು ಕಾರವಾರ ಡಿಪೋ ವ್ಯವಸ್ಥಾಪಕ ಎಚ್‌.ಸಿ.ತುಷಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆದಾಯಕ್ಕೂ ಪೆಟ್ಟು
ಬಸ್‌ ನಿಲ್ದಾಣದಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಖಾಸಗಿ ಸಾರಿಗೆ ವಾಹನಗಳಿಗೆ ನಿರ್ಬಂಧ ಇದೆ. ಈ ಬಗ್ಗೆ ನಿಲ್ದಾಣದ ಬಳಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಆದರೆ ಕಾರು, ಟೆಂಪೊ ಹಾಗೂ ಖಾಸಗಿ ಬಸ್‌ಗಳು ನಿಲ್ದಾಣದ ಬಳಿಯಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇದರಿಂದ ಸಾರಿಗೆ ನಿಗಮದ ಆದಾಯಕ್ಕೂ ಹೊಡೆತ ಬೀಳಲಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗೂ ಮನವಿ ಕೂಡ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ ಡಿಪೋದ ಎಐಟಿಯುಸಿ ಸಂಘಟನಾ ಕಾರ್ಯದರ್ಶಿ ಅಶೋಕ ವಿ.ನಾಯ್ಕ.

ಕಾರವಾರದ ಬಸ್‌ನಿಲ್ದಾಣದ ವಿಸ್ತರಣೆಗೆ ಬರುವ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ
- ಎಚ್‌.ಸಿ.ತುಷಾರ್‌, ಕಾರವಾರ ಡಿಪೊ ವ್ಯವಸ್ಥಾಪಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.