ADVERTISEMENT

ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆಗೆ 5ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 13 ಮೇ 2017, 9:39 IST
Last Updated 13 ಮೇ 2017, 9:39 IST

ಕಾರವಾರ: ಕಾರವಾರ ಶೈಕ್ಷಣಿಕ ಜಿಲ್ಲೆ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 87.98ರಷ್ಟು ಫಲಿತಾಂಶ ದಾಖಲಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಸರಾಸರಿ ಶೇ 79.85 ಫಲಿತಾಂಶದೊಂದಿಗೆ 5ನೇ ಸ್ಥಾನ ಪಡೆದುಕೊಳ್ಳುವುದರೊಂದಿಗೆ ಒಂದು ಸ್ಥಾನ ಕೆಳಕ್ಕೆ ಕುಸಿದಿದೆ.

‘ಈ ಬಾರಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿತ್ತು. ಆದರೂ ಸಹ ಲಭ್ಯವಾದ ಫಲಿತಾಂಶಕ್ಕೆ ತೃಪ್ತಿ ಪಡೆದಿದ್ದೇವೆ. ಮುಂದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನಷ್ಟು ಮುತುವರ್ಜಿ ವಹಿಸಲಾಗುವುದು. ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಜ್ಞಾನಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುವದು’ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕ ಪಿ.ಕೆ ಪ್ರಕಾಶ ತಿಳಿಸಿದರು.                  

ಪ್ರಸಕ್ತ ಸಾಲಿನಲ್ಲಿ 5,130 ಬಾಲಕರು ಹಾಗೂ 5,157 ಮಂದಿ ಬಾಲಕಿಯರು ಒಟ್ಟೂ 10,285 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 424 ಮಂದಿ ಪುನರಾವರ್ತಿತ ಅಭ್ಯರ್ಥಿಗಳಿದ್ದರು. 36 ಸರ್ಕಾರಿ ಹಾಗೂ ಒಂದು ಖಾಸಗಿ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗಿತ್ತು.

ADVERTISEMENT

ಕುಮಟಾ ತಾಲ್ಲೂಕಿನ ನಿರ್ಮಲ ಕಾನ್ವೆಂಟ್‌ನ ನಂದಿನಿ ನಾಯ್ಕ, ಮುರೂರು ಪ್ರಗತಿ ವಿದ್ಯಾಲಯದ ಈಶ್ವರ ಜೋಷಿ 624 ಅಂಕ ಗಳಿಸುವುದರೊಂದಿಗೆ ರಾಜ್ಯಕ್ಕೆ 2ನೇ ಸ್ಥಾನ ಪಡೆದು, ಕಾರವಾರ ಶೈಕ್ಷಣಿಕ ಜಿಲ್ಲೆಗೆ ಮೊದಲಿಗರೆನಿಸಿದ್ದಾರೆ. ಹೊನ್ನಾವರದ ಮಾರ್ಥೋಮಾ ಕಾನ್ವೆಂಟ್‌ನ ಪ್ರಮಥಾ ಭಟ್ಟ 623 ಅಂಕದೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.