ADVERTISEMENT

ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 8:36 IST
Last Updated 8 ಜುಲೈ 2017, 8:36 IST

ಕಾರವಾರ: ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ಹಾಗೂ ಉಚಿತ ಬಸ್‌ಪಾಸ್‌ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಸದಸ್ಯರು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ರಾಜ್ಯದಲ್ಲಿ ಈಗಾಗಲೇ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಪ್ರಸಕ್ತ ವರ್ಷ ಶಾಲಾ-ಕಾಲೇಜುಗಳಲ್ಲಿ ಆಗಿರುವ ಶುಲ್ಕ ಏರಿಕೆ, ರಾಜ್ಯದಲ್ಲಿ ಆವರಿಸಿರುವ ಬರಗಾಲ ಪರಿಸ್ಥಿತಿಯಿಂದ ರೈತ, ಕೃಷಿ-ಕೂಲಿ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ.

ಅಲ್ಲದೇ ಅನೇಕ ಮಂದಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ನಗರ ಪ್ರದೇಶಗಳತ್ತ ಹೋಗುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರವೇಶಾತಿ ಶುಲ್ಕಗಳ ಏರಿಕೆ ಮಾಡುತ್ತಿದೆ.

ADVERTISEMENT

ಮತ್ತೊಂದೆಡೆ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ಪಾಸ್‌ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಾತಿ ವೈಮನಸ್ಸು ಉಂಟು ಮಾಡಲು ಹೊರಟಿದೆ’ ಎಂದು ಎಸ್‌ಎಫ್‌ಐನ ಜಿಲ್ಲಾ ಸಂಚಾಲಕ ಗಣೇಶ ರಾಠೋಡ ಆರೋಪಿದರು.

‘ಯಾವುದೇ ಸರ್ಕಾರ ವಿದ್ಯಾರ್ಥಿ ಸಮುದಾಯದ ಮಧ್ಯೆ ತಾರತಮ್ಯ ಹುಟ್ಟು ಹಾಕುವ ಪ್ರವೃತ್ತಿಯನ್ನು ತಡೆಯ ಬೇಕು. ವಿದ್ಯಾರ್ಥಿ ಸಮುದಾಯಕ್ಕೆ ದೊರಕಬೇಕಾದ ಸವಲತ್ತುಗಳನ್ನು ಎಲ್ಲ ವಿದ್ಯಾರ್ಥಿಗಳಿಗೂ ದೊರಕುವಂತೆ ಮಾಡಬೇಕು. ಆದ್ದರಿಂದ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್ ನೀಡಬೇಕು’ ಎಂದರು.

‘ಈಗಾಗಲೇ ಬಸ್‌ಪಾಸ್‌ ಪಡೆದಿರುವ ವಿದ್ಯಾರ್ಥಿಗಳ ಹಣವನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ ಎಸ್‍ಎಫ್‍ಐ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆಗೆ ಮುಂದಾಗುತ್ತೇವೆ’ ಎಂದು ಎಚ್ಚರಿಸಿದರು.

ಪ್ರಮುಖ ಬೇಡಿಕೆಗಳು: ‘ಶಿಕ್ಷಣಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಶೇ 30 ರಷ್ಟು, ಕೇಂದ್ರ ಬಜೆಟ್‌ನಲ್ಲಿ ಶೇ 10 ರಷ್ಟು, ಜಿ.ಡಿ.ಪಿ. ಯಲ್ಲಿ ಶೇ 6 ರಷ್ಟು ಹಣವನ್ನು ಮೀಸಲಿಡಬೇಕು. ಶಿಕ್ಷಣದ ಖಾಸಗೀಕರಣ– ಕೇಸರೀಕರಣ ಹಾಗೂ ಕೇಂದ್ರೀಕರಣ ನಿಲ್ಲಿಸಬೇಕು. ವೃತ್ತಿ ಶಿಕ್ಷಣ ಶುಲ್ಕಗಳು ಇಳಿಯಬೇಕು.

ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ನಿಲ್ಲಬೇಕು. ಅದಕ್ಕಾಗಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆಯಾಗಬೇಕು. ವಿಶ್ವವಿದ್ಯಾಲಯಗಳಲ್ಲಿನ ಭ್ರಷ್ಟಾಚಾರ ನಿಲ್ಲಿಸಿ. ಸರ್ಕಾರದ ಸೌಲಭ್ಯಗಳನ್ನು ಯಾವುದೇ ತಾರತಮ್ಯ ಇಲ್ಲದೇ ಎಲ್ಲ ವಿದ್ಯಾರ್ಥಿಗಳಿಗೆ ಸೌಲಭ್ಯವನ್ನು ನೀಡಬೇಕು. ಅತಿಥಿ ಹೆಸರಿನಲ್ಲಿ ದುಡಿಯುತ್ತಿರುವ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಕಾಯಂ ಮಾಡಬೇಕು’ ಎಂದು ಒತ್ತಾಯಿಸಿದರು. ಎಸ್‌ಎಫ್‌ಐನ ಬಾಬು, ಗಣೇಶ, ದೊಂಡು, ಸುನಿಲ್‌, ಸಂತೋಷ, ಸಂಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.