ADVERTISEMENT

ದೇವಸ್ಥಾನಕ್ಕಾಗಿ ಶಾಲೆ ಜಾಗ ಒತ್ತುವರಿ

ಶಾಸಕ ಘೋಟ್ನೇಕರ ವಿರುದ್ಧ ಬಿಜೆಪಿ ಮುಖಂಡ ಸುನಿಲ್‌ ಹೆಗಡೆ ಆರೋಪ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 10:02 IST
Last Updated 23 ಮಾರ್ಚ್ 2017, 10:02 IST

ಕಾರವಾರ: ದೇವಸ್ಥಾನ ನಿರ್ಮಾಣಕ್ಕಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಘೋಟ್ನೇಕರ  ಹಳಿಯಾಳದ ಶಿವಾಜಿ ಸರ್ಕಾರಿ ಪ್ರೌಢಶಾಲೆಯ ಜಾಗ ಒತ್ತುವರಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಸುನಿಲ್‌ ಹೆಗಡೆ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣ್ಣಿನ ಆಸ್ಪತ್ರೆ ನಿರ್ಮಾಣಕ್ಕಾಗಿ ಹಿಂದಿನ ಸರ್ಕಾರ ಲಯನ್ಸ್‌ ಕ್ಲಬ್‌ಗೆ ಧಾರವಾಡ ರಸ್ತೆಯಲ್ಲಿನ ಎಂಟು ಗುಂಟೆ ಜಾಗವನ್ನು ಮಂಜೂರು ಮಾಡಿತ್ತು. ಆದರೆ ಈ ಜಾಗ ಅನ್ಯ ಉದ್ದೇಶಕ್ಕೆ ಬಳಕೆಯಾಗಿದ್ದು, ಘೋಟ್ನೇಕರ ಇಲ್ಲಿ ನಾಗದೇವತಾ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.

ಇದಕ್ಕಾಗಿ ಹಿಂಬದಿ ಇರುವ ಪ್ರೌಢಶಾಲೆಯ ಜಾಗವನ್ನು ಒತ್ತುವರಿ ಮಾಡಿ ದೇವಸ್ಥಾನದ ಕಾಂಪೌಂಡ್‌ ವಿಸ್ತರಿಸಿದ್ದಾರೆ. ಅಲ್ಲದೇ ದೇವಸ್ಥಾನದ ಅರ್ಚಕರ ವಾಸ್ತವ್ಯಕ್ಕಾಗಿ ಸರ್ಕಾರಿ ಶಾಲೆಯ ಜಾಗದಲ್ಲಿಯೇ  ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅನುಮತಿ ಇಲ್ಲದೇ ಕಾಂಪೌಂಡ್‌ ಕೆಡವಿದರು.

ಪಟ್ಟಣ ಪಂಚಾಯ್ತಿಗೆ ಸೇರಿದ ಕಾಂಪ್ಲೆಕ್ಸ್‌ ನಿರ್ಮಾಣದ ಗುತ್ತಿಗೆ ಪಡೆದಿದ್ದ ಘೋಟ್ನೇಕರ  ಪುತ್ರ ಶ್ರೀನಿವಾಸ್‌, ಬಸ್‌ನಿಲ್ದಾಣದ ಕಾಂಪೌಂಡ್‌ ಅನ್ನು ಅನುಮತಿ ಇಲ್ಲದೇ ಜೆಸಿಬಿ ಬಳಸಿ ಕೆಡವಿದ್ದಾರೆ.

ಈ ಬಗ್ಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಬಳಿಕ ಅಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿಗೂ ದೂರು ನೀಡಿದ್ದು, ಕಾಂಪ್ಲೆಕ್ಸ್ ಕಟ್ಟಲು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ, ಮುಖಂಡ ನಾಗರಾಜ ಜೋಶಿ ಹಾಜರಿದ್ದರು. ಕರೆಗೆ ಸಿಗದ ಘೋಟ್ನೇಕರ್‌: ಸುನಿಲ್‌ ಹೆಗಡೆ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ಪಡೆಯಲು ಘೋಟ್ನೇಕರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

*
ಸರ್ಕಾರಿ ಪ್ರೌಢಶಾಲೆ ಜಾಗವನ್ನು ಒತ್ತು ವರಿ ಮಾಡಿರುವ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ವಿರುದ್ಧ ಜಿಲ್ಲಾಡಳಿತಕ್ಕೆ, ರಾಜ್ಯಪಾಲರಿಗೆ ದೂರು ನೀಡಲಾಗುವುದು.
-ಸುನಿಲ್‌ ಹೆಗಡೆ,
ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT