ADVERTISEMENT

‘ನಿನಗೆ ನೀನೇ ಗೆಳತಿ’ಯಾದರೆ ಜಗತ್ತನ್ನು ಗೆಲ್ಲಬಲ್ಲೆ

ಸಂಧ್ಯಾ ಹೆಗಡೆ
Published 20 ಮಾರ್ಚ್ 2018, 11:24 IST
Last Updated 20 ಮಾರ್ಚ್ 2018, 11:24 IST

ಪ್ರಸಾದನ ಕಲಾವಿದರಾಗಿದ್ದ ಪುತ್ತಣ್ಣ (ಸದಾನಂದ ಶಾನಭಾಗ) ನೆನಪಿನ ನಾಟಕೋತ್ಸವದಲ್ಲಿ ಶಿರಸಿ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ‘ನಿನಗೆ ನೀನೇ ಗೆಳತಿ’ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು.

ಪುರಾಣದಿಂದ ಇಂದಿನವರೆಗೂ ಸ್ತ್ರೀ ಮೇಲೆ ನಡೆಯುವ ಶೋಷಣೆಯನ್ನು ಬಿಂಬಿಸಿದ ನಾಟಕ, ಹೆಣ್ಣಿಗೆ ಹೆಣ್ಣೇ ಗೆಳತಿಯಾಗಿ, ಸ್ತ್ರೀಶಕ್ತಿ ಬಲಗೊಂಡರೆ, ಪುರುಷ ಸಮಾಜಕ್ಕೆ ತಲೆಬಾಗಿ ಬದುಕುವ ಪ್ರಮೇಯ ಬರಲಾರದು ಎಂಬುದನ್ನು ಸಾರಿತು. ‘ಪಾತ್ರ ಬದಲಾಗಲೇಬೇಕು, ನಾನು ಸೂತ್ರಧಾರಿಯಾಗುವೆ, ನೀನು ನನ್ನ ಹಿಂದೆ ಬರಬೇಕು. ಇಲ್ಲವಾದರೆ, ನಾನೇ ಸೂತ್ರಧಾರಿ ಮತ್ತು ನಟಿಯ ಪಾತ್ರ ನಿಭಾಯಿಸುವೆ’ ಎಂದು ಸೂತ್ರಧಾರಿಣಿ ಆರಂಭದಲ್ಲಿ ಹೇಳುವ ದಿಟ್ಟ ನುಡಿ, ಇಡೀ ಕಥೆ ಸಾಗುವ ಮಾರ್ಗವನ್ನು ಬಿಂಬಿಸಿತು.

ಪುರಾಣದ ದ್ರೌಪದಿ ವಸ್ತ್ರಾಪಹರಣ, ರಾಮನಿಂದ ಪರಿತ್ಯಕ್ತಳಾದ ಸೀತೆ, ದುಷ್ಯಂತನ ಮರೆಗುಳಿತನದ ಸೋಗಿಗೆ ಬಲಿಯಾಗಿ ಕಾಡಿನಲ್ಲಿ ಒಂಟಿ ಜೀವನ ನಡೆಸಿದ ಶಕುಂತಲಾ, ತೀರಾ ಇತ್ತೀಚಿನ ಇಡೀ ದೇಶದಲ್ಲಿ ತಲ್ಲಣ ಮೂಡಿಸಿದ್ದ ನಿರ್ಭಯಾ ಪ್ರಕರಣ, ಈ ಎಲ್ಲ ಪಾತ್ರಗಳಲ್ಲಿ ಹೆಣ್ಣು ಅನುಭವಿಸಿದ ಮಾನಸಿಕ ತುಮುಲಗಳನ್ನು ಕಲಾವಿದೆಯರು ನೈಜವಾಗಿ ಅಭಿವ್ಯಕ್ತಿಸಿದರು. ಪುರಾಣದಿಂದ ನಡೆಯುತ್ತಿರುವ ಮಹಿಳೆಯರ ಮೇಲಿನ ಅಧಿಕಾರ ಚಲಾವಣೆ, ದೌರ್ಜನ್ಯ ಇಂದಿಗೂ ಬದಲಾಗಿಲ್ಲ. ಅಂದಿನ ದೌರ್ಜನ್ಯಗಳು ಆದರ್ಶದ ನೆರಳಿನಲ್ಲಿ ನಡೆಯುತ್ತಿದ್ದ ಸಾತ್ವಿಕ ರೂಪದಲ್ಲಿದ್ದರೆ, ಇಂದು ಅವೇ ಕ್ರೌರ್ಯದ ಮುಖವಾಡ ಕಟ್ಟಿಕೊಂಡು ಮಹಿಳೆಯರ ಬದುಕನ್ನು ಕುಗ್ಗಿಸಲು ಹವಣಿಸುತ್ತಿವೆ ಎಂಬ ವಿಷಾದ ನೋಡುಗರಲ್ಲಿ ಕಾಡಿದರೂ, ಹೆಣ್ಣಿನ ಒಗ್ಗಟ್ಟು ಈ ಚಿತ್ರಣವನ್ನು ಬದಲಿಸಬಲ್ಲದು ಎಂಬ ಆಶಾಭಾವದೊಂದಿಗೆ ನಾಟಕ ಮುಕ್ತಾಯಗೊಂಡಿತು. ಎಚ್‌.ಎಸ್. ವೆಂಕಟೇಶಮೂರ್ತಿ ರಚನೆಯ ನಾಟಕಕ್ಕೆ ಶ್ರೀಪಾದ ಭಟ್ಟ ನಿರ್ದೇಶನ, ಚಂದ್ರು ಉಡುಪಿ ಸಹಕಾರ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.