ADVERTISEMENT

ನೊಂದವರ ನೆರವಿಗೆ ‘ಜಾಗೃತ ಸಮಾಜ ವೇದಿಕೆ’ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:30 IST
Last Updated 10 ಜನವರಿ 2017, 5:30 IST
ಶಿರಸಿ: ಖಾಸಗಿ ಆಸ್ಪತ್ರೆಗಳ ಧನದಾಹ ಮತ್ತು ರೋಗಿಗಳೆಡೆ ನಿರ್ಲಕ್ಷ್ಯದ ಧೋರಣೆ ವಿರುದ್ಧ ಧ್ವನಿಯೆತ್ತಲು ‘ಜಾಗೃತ ಸಮಾಜ ವೇದಿಕೆ’ ಅಸ್ತಿತ್ವಕ್ಕೆ ಬಂದಿದೆ. 
 
ವೇದಿಕೆ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವೇದಿಕೆ ರಚನೆಯ ಉದ್ದೇಶ ವಿವರಿ­ಸಿದರು. ಶಿರಸಿ ಸೇರಿದಂತೆ ರಾಜ್ಯದ ಇತರೆಡೆ ಅವ್ಯಾಹತವಾಗಿ ಹುಟ್ಟಿಕೊಂಡಿ­ರುವ ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದುವ ಬದಲಾಗಿ ಹಣ ಮಾಡುವ ದಂಧೆಯಾಗಿ ಕೆಲಸ ಮಾಡುತ್ತಿವೆ. ಈ ಎಲ್ಲಾ ಬೆಳವಣಿಗೆಗಳನ್ನು ಜಾಗೃತ ಸಮಾಜದಿಂದ ಮಾತ್ರ ಸರಿಪಡಿಸಲು ಸಾಧ್ಯವೆಂದು ಚರ್ಚಿಸಿ ಪಕ್ಷಾತೀತವಾಗಿ ಹೋರಾಟ ಸಮಿತಿ ರಚಿಸಲಾಗಿದೆ ಎಂದರು.
 
‘ಆಕಸ್ಮಿಕ ಅಪಘಾತಕ್ಕೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡು­ತ್ತಿರುವ ವ್ಯಕ್ತಿಯು ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಮಾನವೀಯತೆ ಮರೆತು ಹಣ ಕಟ್ಟಿದ ನಂತವೇ ಚಿಕಿತ್ಸೆ ಪ್ರಾರಂಭಿಸು­ವುದು ಸೇವೆಯ ಹೆಸರಿನಲ್ಲಿ ಮಾಡುವ ವಂಚನೆಯಾಗಿದೆ. ಭಾನುವಾರ ನಗರದ ಖಾಸಗಿ ಆಸ್ಪತ್ರೆಗಳಿಂದ ಸೇವೆ ನಿರೀಕ್ಷಿಸುವುದು ಜನರಿಗೆ ಮರೀಚಿಕೆಯಾಗಿದೆ. ವೈದ್ಯರ ನಿರ್ಲಕ್ಷತನದಿಂದ ಸಾವಿಗೀಡಾದ ನತದೃಷ್ಟರ ಸಂಬಂಧಿಕರ ದುಃಖವನ್ನು ಐಎಂಎ ರಾಜ್ಯ ಘಟಕ ಏಕೆ ಆಲಿಸುತ್ತಿಲ್ಲ’ ಎಂದು ಸಂಘಟನೆಯ ಪ್ರಮುಖ ಸುರೇಶ್ಚಂದ್ರ ಹೆಗಡೆ ಪ್ರಶ್ನಿಸಿದರು. 
 
ಶಿರಸಿಯ ಪ್ರಮುಖ ವೈದ್ಯರಿಂದ ನಿರ್ಮಾಣವಾಗಿರುವ ಒಂದು ಆಸ್ಪತ್ರೆಯ ಉದ್ಧಾರಕ್ಕಾಗಿ ಸಣ್ಣ ಸಣ್ಣ ಕಾಯಿಲೆಗೂ ದುಬಾರಿ ವೆಚ್ಚದ ಸ್ಕ್ಯಾನಿಂಗ್ ಮಾಡಿಸುವುದು ಬಡ ರೋಗಿಗಳಿಗೆ ಭಾರವಾಗಿದೆ. ಈ ಬಗ್ಗೆ ಐಎಂಎ ಧ್ವನಿ ಎತ್ತಿಲ್ಲ ಎಂದರು.
 
ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಹಾಗೂ ವೈದ್ಯರ ನಿರ್ಲಕ್ಷದಿಂದ ಅನೇಕ ರೋಗಿಗಳು ಸಾವನ್ನಪ್ಪಿದ್ದು, ಈ ಬಗ್ಗೆ ಸಂಬಂಧಪಟ್ಟವರು ಸಂಸದರಲ್ಲಿ ಮೌಖಿಕವಾಗಿ ದೂರು ನೀಡಿದ್ದಾರೆ. ಟಿ.ಎಸ್.ಎಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ರಾಜಕೀಯ­ಗೊಳಿಸಿ ಕೇವಲ ಬಿಜೆಪಿ ಸಂಸದರು ಎನ್ನುವ ಕಾರಣಕ್ಕಾಗಿಯೇ ಗೃಹ ಇಲಾಖೆ ಕಾನೂನಿನ ವ್ಯಾಪ್ತಿ ಮೀರಿ ಸ್ವಯಂಪ್ರೇರಿತ ದೂರು ದಾಖಲಿಸಿರುವುದು ಖಂಡನೀಯ. ಸಜ್ಜನಿಕೆಯ ಸೋಗಿನಲ್ಲಿ ಜನರನ್ನು ನಿರ್ಲಕ್ಷಿಸುತ್ತಿರುವ ಶಿರಸಿಯ ಸ್ಥಾಪಿತ ಹಿತಾಸಕ್ತಿಯ ರಾಜಕಾರಣಿಗಳು ಸೇರಿಕೊಂಡಿರುವುದು ಜನತೆಗೆ ಮಾಡಿದ ವಿಶ್ವಾಸ ದ್ರೋಹವಾಗಿದೆ. ರಾಜಕೀಯ ಪ್ರೇರಿತವಾಗಿ ಮೂರು ದಿನಗಳ ನಂತರ ಸ್ವಯಂಪ್ರೇರಿತ ಮೊಕದ್ದಮೆಯನ್ನು ದಾಖಲಿಸಿದ್ದರ ಹಿಂದೆ ಇರುವ ಮರ್ಮ ಏನೆಂಬುದನ್ನು ಜನರು ಪ್ರಶ್ನಿಸುತ್ತಿದ್ದಾರೆ. ಖಾಸಗಿ ಜಾಗದಲ್ಲಿ ಯಾವುದೇ ಘಟನೆ ಸಂಭವಿಸಿದ್ದಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆಡಳಿತ ಪಕ್ಷದ ಒತ್ತಡದೊಂದಿಗೆ ಗೃಹ ಇಲಾಖೆಯ ಮೂಲಕ ಪ್ರಕರಣ ದಾಖಲಿಸಿರುವುದು ಸಮಂಜಲವಲ್ಲ ಎಂದು ಅವರು ಆರೋಪಿಸಿದರು. ಪ್ರಮುಖರಾದ ಮೋಹನದಾಸ ನಾಯಕ, ಎನ್.ವಿ.ಹೆಗಡೆ ಕಡವೆ ಮತ್ತಿತರರು ಹಾಜರಿದ್ದರು.
 
***
ಖಾಸಗಿ ಆಸ್ಪತ್ರೆಗಳು ಹಿಂದೆ ನಡೆದ ಘಟನೆಗಳನ್ನು ಪಾಠ­ ಎಂದು ತಿಳಿದು ನಿಲುವು ಬದ­ಲಾಯಿ­­ಸಿಕೊಳ್ಳದಿದ್ದರೆ ಅವರ ಮುಖವಾಡ ಕಳಚುತ್ತೇವೆ 
-ಸುರೇಶ್ಚಂದ್ರ ಹೆಗಡೆ 
ವೇದಿಕೆ ಪ್ರಮುಖ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.