ADVERTISEMENT

ಪಕ್ಷದಲ್ಲಿ ದುಡಿದವರಿಗೆ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:44 IST
Last Updated 15 ಮಾರ್ಚ್ 2017, 6:44 IST
ಪಕ್ಷದಲ್ಲಿ ದುಡಿದವರಿಗೆ ಟಿಕೆಟ್‌
ಪಕ್ಷದಲ್ಲಿ ದುಡಿದವರಿಗೆ ಟಿಕೆಟ್‌   

ಕಾರವಾರ: ‘ಪಕ್ಷದ ಬಲವರ್ಧನೆಗೆ ಅನೇಕ ವರ್ಷಗಳಿಂದ ದುಡಿದವರು ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅಂಥವರನ್ನು ನಮ್ಮ ರಾಷ್ಟ್ರೀಯ ನಾಯಕರು ಗುರುತಿಸಿ, ಅವರಿಗೆ ಮುಂದಿನ ವಿಧಾನಸಭೆಯ ಟಿಕೆಟ್‌ ನೀಡುವ ವಿಶ್ವಾಸವಿದೆ’ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ್‌ ನಾಯ್ಕ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿಕೊಂಡು ಯಾರೇ ಬಿಜೆಪಿಗೆ ಬಂದರೂ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅವರಲ್ಲಿ ಕೆಲವರು ಪಕ್ಷದ ಟಿಕೆಟ್‌ ನನಗೆ ಸಿಗಲಿದೆ ಎಂದು ಕೆಲ ಮಾಧ್ಯಮಗಳಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ಸರಿಯಲ್ಲ’ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಗೆ ಸಿದ್ಧತೆ: ದೇಶದಲ್ಲಿ ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಪ್ರಚಂಡ ಜಯಭೇರಿ ಬಾರಿಸಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೂ ಪಕ್ಷದಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಯೋಗ್ಯ ಅಭ್ಯರ್ಥಿಗಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ನೇತೃತ್ವದ ಸಮಿತಿಯು ಮೊದಲು ಸಮೀಕ್ಷೆ ನಡೆಸಿ, ಆನಂತರದಲ್ಲಿ ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಿದೆ. ಅಭ್ಯರ್ಥಿಯಾಗುವ ವ್ಯಕ್ತಿಯು ಪಕ್ಷದಲ್ಲಿ ಕನಿಷ್ಠ 3 ವರ್ಷ ಸೇವೆ ಮಾಡಿರ ಬೇಕಲ್ಲದೇ ಪಕ್ಷಕ್ಕಾಗಿ ಆತನ ಕೊಡುಗೆಯ ಬಗ್ಗೆಯೂ ಸಮಿತಿಯು ಪರಿಗಣಿಸಲಿದೆ ಎಂದು ಹೇಳಿದರು.

ADVERTISEMENT

ಕಾರವಾರ–ಅಂಕೋಲಾ ವಿಧಾನ ಸಭಾ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿ ಆಯ್ಕೆಯ ಪ್ರಾಥಮಿಕ ಸಿದ್ಧತೆಯೂ ನಡೆದಿಲ್ಲ. ಈ ಬಾರಿ ಚುನಾವಣೆಯ ಟಿಕೆಟ್‌ ನೀಡಲು ಹಲವು ವರ್ಷಗಳ ಕಾಲ ಪಕ್ಷದಲ್ಲಿ ದುಡಿದವರನ್ನು ಪರಿಗಣಿಸುತ್ತಿ ರುವ ಕಾರಣ ಹಲವರು ಆಕಾಂಕ್ಷಿ ಗಳಾಗಿ ದ್ದಾರೆ. ಆದರೆ ಯಾವುದೇ ವ್ಯಕ್ತಿಗೆ ಈವ ರೆಗೆ ಟಿಕೆಟ್ ನೀಡುವ ಆಶ್ವಾಸನೆ ಯನ್ನು ಬಿಜೆಪಿ ನೀಡಿಲ್ಲ ಎಂದು ಸ್ಪಷ್ಪಪಡಿಸಿದರು.

ನಗರ ಘಟಕದ ಅಧ್ಯಕ್ಷ ಮನೋಜ್‌ ಭಟ್‌, ನಾಗರಾಜ ಜೋಶಿ, ರಾಜು ಕೊಳಂಬಕರ, ಉಮಾಕಾಂತ ಹರಿಕಂತ್ರ, ಜಗದೀಶ್‌ ಗೋವೇಕರ, ಬಾಬುರಾವ್‌  , ರಾಜೇಶ್‌ , ಚಂದನ  ಹಾಜರಿದ್ದರು.

***

‘ಭೂಮಿ ಕಳೆದುಕೊಂಡವರಿಗೆ ಪರಿಹಾರ ಒದಗಿಸಿ’
ಕಾರವಾರ ನಗರದಲ್ಲಿ ಬಾಂಡಿಶಿಟ್ಟಾ–ನಂದನಗದ್ದಾ, ಕಾರವಾರ–ಕೋಡಿಬಾಗ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿವೆ. ಆದರೆ ಈ ಅಭಿವೃದ್ಧಿ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನಗರಸಭೆ ಅಥವಾ ಜಿಲ್ಲಾಡಳಿತ ಅವರಿಗೆ ಪರಿಹಾರ ನೀಡುವ ಗೋಜಿಗೆ ಹೋಗಿಲ್ಲ ಎಂದು ರಾಜೇಶ್‌ ನಾಯ್ಕ ಆರೋಪಿಸಿದರು.

ಕಾಮಗಾರಿ ಆರಂಭದಲ್ಲಿ ಅಧಿಕಾರಿಗಲು ಪೊಲೀಸ್‌ ಬಲವನ್ನು ಉಪಯೋಗಿಸಿ ಬಲವಂತವಾಗಿ ರಸ್ತೆಯಂಚಿನ ನಿವಾಸಿಗಳ ಭೂಮಿಯನ್ನು ಪಡೆದಿದ್ದರು. ಇನ್ನೂ ಕೆಲವರು ಇದನ್ನು ವಿರೋಧಿಸಿ ಕೋರ್ಟ್‌ ಮೆಟ್ಟಿಲೇರಿ ದ್ದರು. ಅಲ್ಲದೇ ಅವರು ತಾತ್ಕಾಲಿಕ ತಡೆಯಾಜ್ಞೆ ಕೂಡ ತಂದಿದ್ದರು. ಭೂಮಿ ಕಳೆದುಕೊಂಡ ಮಾಲೀಕರಿಗೆ ವರ್ಗಾಯಿಸಬಲ್ಲ ಆಸ್ತಿಯ ಹಕ್ಕು (ಟಿಡಿಆರ್‌) ಸೌಲಭ್ಯ ನೀಡುವುದಾಗಿ ನಗರಸಭೆ ಹಾಗೂ ಸ್ಥಳೀಯ ಶಾಸಕರು ಹೇಳಿದ್ದರು.

ಆದರೆ ಈವರೆಗೆ ಅವರಿಗೆ ಟಿಡಿಆರ್‌ ದೊರೆತಿಲ್ಲ ಎಂದು ದೂರಿದರು.  ಈ ರಸ್ತೆ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡವರಿಗೆ ಪರಿಹಾರವನ್ನು ಶೀಘ್ರವಾಗಿ ನೀಡಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಸರ್ಕಾರದ ಹಾಗೂ ಸ್ಥಳೀಯ ನಗರಸಭೆ ವಿರುದ್ಧ  ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

**

ಮಾಜಿ ಸಚಿವ ಆನಂದ ಅಸ್ನೋಟಿಕರ   ಸ್ಥಳೀಯ ಘಟಕದ ಜತೆ ಸಂಪರ್ಕದಲ್ಲಿ ಇಲ್ಲದಿದ್ದರೂ ತಾಂತ್ರಿಕವಾಗಿ ಪಕ್ಷದಲ್ಲೇ ಇದ್ದಾರೆ. ಅವರಿಗೆ ಟಿಕೆಟ್‌ ನೀಡುವುದು ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ
–ರಾಜೇಶ್‌ ನಾಯ್ಕ, ಬಿಜೆಪಿ ಜಿಲ್ಲಾ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.