ADVERTISEMENT

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:09 IST
Last Updated 22 ಸೆಪ್ಟೆಂಬರ್ 2017, 5:09 IST

ಬೆಳಗಾವಿ: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಕ್ಲಬ್‌ ರಸ್ತೆಯಿಂದ ಮೆರವಣಿಗೆಯಲ್ಲಿ ಆಗಮಿಸಿದ ಗ್ರಾಮಾಂತರ ಘಟಕದವರು ಹಾಗೂ ಕನ್ನಡ ಸಾಹಿತ್ಯ ಭವನದಿಂದ ಬಂದ ನಗರ ಘಟಕದ ಕಾರ್ಯಕರ್ತರು ವೃತ್ತದಲ್ಲಿ ಸಮಾವೇಶಗೊಂಡರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. 

‘ಇಂಧನ ಬೆಲೆಯನ್ನು ನಿತ್ಯವೂ ಪರಿಷ್ಕರಿಸಲಾಗುತ್ತಿದೆ. ಕಡಿಮೆ ಆಗುವುದಕ್ಕಿಂತ ಬೆಲೆ ಏರುತ್ತಲೇ ಇದೆ. ಇದರಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ತೀವ್ರ ತೊಂದರೆಯಾಗಿದೆ’ ಎಂದು ದೂರಿದರು.

‘ಕೇಂದ್ರ ಸರ್ಕಾರವು ಬಡ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಬಹುಜನರು ಸಂಕಟಕ್ಕೆ ಸಿಲುಕಿದ್ದಾರೆ. ಒಳ್ಳೆಯ ದಿನಗಳು ಬರುತ್ತವೆ ಎಂದು ಅಧಿಕಾರಕ್ಕೆ ಬಂದವರು,
ಜನಸಾಮಾನ್ಯರ ಪಾಲಿಗೆ ಕೆಟ್ಟ ದಿನಗಳನ್ನು ತಂದಿಟ್ಟಿದ್ದಾರೆ. ದಿನ ಬಳಕೆಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಇದರಿಂದ, ಜೀವನ ನಡೆಸುವುದೇ ದುಸ್ತರವಾಗಿದೆ’ ಎಂದು ತಿಳಿಸಿದರು.

ADVERTISEMENT

ಗ್ರಾಮಾಂತರ ಘಟಕದ ಅಧ್ಯಕ್ಷ ವಿನಯ ನವಲಗಟ್ಟಿ ಮಾತನಾಡಿ, ‘ಕೇಂದ್ರ ಸರ್ಕಾರದ ನೀತಿಯಿಂದಾಗಿ ದಿನೇ ದಿನೇ ಇಂಧನ ಬೆಲೆ ಹೆಚ್ಚಾಗುತ್ತಿದೆ. ಒಮ್ಮೆಲೆ ಹೆಚ್ಚಿಸಿದರೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತದೆ ಎಂದು, ಪೈಸೆಗಳ ಲೆಕ್ಕದಲ್ಲಿ ಆಗಾಗ ಏರಿಕೆ ಮಾಡಲಾಗುತ್ತಿದೆ. ಎರಡು ತಿಂಗಳಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ ₹ 6 ಏರಿಕೆಯಾಗಿದೆ. ಬೆಲೆ ಇಳಿಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ನಗರ ಘಟಕದ ಅಧ್ಯಕ್ಷ ರಾಜು ಸೇಠ್‌, ಮುಖಂಡರಾದ ಫೈಜಾನ್‌ ಸೇಠ್‌, ಮಲ್ಲೇಶ ಚೌಗುಲೆ, ಪರಶುರಾಮ ವಗ್ಗನ್ನವರ, ಚನ್ನರಾಜ ಹಟ್ಟಿಹೊಳಿ, ಗಜು ಧರನಾಯ್ಕ, ಕಸ್ತೂರಿ ಹಿರೇಮಠ, ಪ್ರೇಮಾ ಮಮದಾಪುರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.