ADVERTISEMENT

ಮೃತನ ಕುಟುಂಬಕ್ಕೆ ಸಂಸದೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 5:17 IST
Last Updated 20 ಸೆಪ್ಟೆಂಬರ್ 2017, 5:17 IST
ಪುರಸಭೆ ಮಳಿಗೆ ತೆರವು ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಭಟ್ಕಳದ ಆಸರಕೇರಿಯ ರಾಮಚಂದ್ರ ನಾಯ್ಕ ಮನೆಗೆ ಮಂಗಳವಾರ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಸಹೋದರ ಈಶ್ವರ ನಾಯ್ಕ ಅವರಿಗೆ ಸಾಂತ್ವನ ಹೇಳಿದರು. ಮೃತನ ತಾಯಿ ಮಹಾದೇವಿ ಇದ್ದಾರೆ
ಪುರಸಭೆ ಮಳಿಗೆ ತೆರವು ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಭಟ್ಕಳದ ಆಸರಕೇರಿಯ ರಾಮಚಂದ್ರ ನಾಯ್ಕ ಮನೆಗೆ ಮಂಗಳವಾರ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಸಹೋದರ ಈಶ್ವರ ನಾಯ್ಕ ಅವರಿಗೆ ಸಾಂತ್ವನ ಹೇಳಿದರು. ಮೃತನ ತಾಯಿ ಮಹಾದೇವಿ ಇದ್ದಾರೆ   

ಭಟ್ಕಳ: ಪುರಸಭೆ ಮಳಿಗೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಭಟ್ಕಳದ ಆಸರಕೇರಿಯ ರಾಮಚಂದ್ರ ನಾಯ್ಕ ಮನೆಗೆ ಸಂಸದೆ ಶೋಭಾ ಕರಂದ್ಲಾಜೆ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ರಾಮಚಂದ್ರ ನಾಯ್ಕರನ್ನು ಕಾಪಾಡಲು ಹೋಗಿ, ಗಾಯಗೊಂಡ ಸಹೋದರ ಈಶ್ವರ ನಾಯ್ಕ ಅವರ ಆರೋಗ್ಯ ವಿಚಾರಿಸಿದ ಅವರು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ನಂತರ ರಾಮಚಂದ್ರ ಅವರು ನಡೆಸುತ್ತಿದ್ದ ಕಬ್ಬಿನಹಾಲು ಮತ್ತು ಎಳನೀರು ಅಂಗಡಿ ಇದ್ದ ಸ್ಥಳಕ್ಕೆ ಭೇಟಿ ನೀಡಿದ ಅವರು, ‘ಹೆದರದೇ ಧೈರ್ಯದಿಂದ ವ್ಯಾಪಾರ ನಡೆಸಿಕೊಂಡು ಹೋಗಿ’ ಎಂದು ವ್ಯಾಪಾರಿಗಳಿಗೆ ಧೈರ್ಯ ತುಂಬಿದರು.

ADVERTISEMENT

ಬಂಧನಕ್ಕೆ ಆಕ್ಷೇಪ: ಬಳಿಕ, ಡಿವೈಎಸ್‌ಪಿ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಶೋಭಾ ಕರಂದ್ಲಾಜೆ, ‘ರಾಮಚಂದ್ರ ನಾಯ್ಕ ಕುಟುಂಬದವರು ಪುರಸಭೆ ಅಧಿಕಾರಿಗಳ ಮೇಲೆ ದೂರು ನೀಡಿದ್ದಾರೆ. ಆದರೆ ಅವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ.

ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರನ್ನು ತಕ್ಷಣ ಬಂಧಿಸಬೇಕು’ ಎಂದು ಸೂಚಿಸಿದರು. ‘ಬಿಜೆಪಿ ಕಾರ್ಯಕರ್ತರ ವಿರುದ್ಧ ದರೋಡೆ ಪ್ರಕರಣ ಮತ್ತು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿದ್ದೀರಿ’ ಎಂದು ಅವರು ಆರೋಪಿಸಿದರು.

ಇದಕ್ಕೆ ಶಿವಕುಮಾರ್, ‘ನಾವು ಕಾನೂನಿನಂತೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೆ, ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿರುವ ವೀಡಿಯೋ ನಮ್ಮಲ್ಲಿ ಇದೆ’ ಎಂದು ಪ್ರತಿಕ್ರಿಯಿಸಿದರು.

ಮಾಜಿ ಶಾಸಕರುಗಳಾದ ಜೆ.ಡಿ. ನಾಯ್ಕ, ದಿನಕರ ಶೆಟ್ಟಿ, ಸುನೀಲ್ ಹೆಗಡೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ, ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ ನಾಯ್ಕ, ಪ್ರಮುಖರಾದ ಸುನೀಲ್ ನಾಯ್ಕ, ವಿನೋದ ನಾಯ್ಕ ರಾಯಲ್ಕೇರಿ, ರೂಪಾಲಿ ನಾಯ್ಕ ಹಾಗೂ ರವಿ ನಾಯ್ಕ ಜಾಲಿ ಇದ್ದರು.

* * 

ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುವುದು
ಶೋಭಾ ಕರಂದ್ಲಾಜೆ
ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.