ADVERTISEMENT

ರಂಜಿಸಿದ ಡಾ.ರಾಜ್ ಗೀತೆಗಳ ರಸ ಸಂಜೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 11:36 IST
Last Updated 26 ಏಪ್ರಿಲ್ 2018, 11:36 IST
ಡಾ.ರಾಜ್ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಸ್ಟಾರ್‌ಚಾಯ್ಸ್ ನೃತ್ಯ ತಂಡದ ಕಲಾವಿದರ ನೃತ್ಯ ಗಮನ ಸೆಳೆಯಿತು
ಡಾ.ರಾಜ್ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಸ್ಟಾರ್‌ಚಾಯ್ಸ್ ನೃತ್ಯ ತಂಡದ ಕಲಾವಿದರ ನೃತ್ಯ ಗಮನ ಸೆಳೆಯಿತು   

ಕಾರವಾರ: ವರನಟ ಡಾ.ರಾಜಕುಮಾರ್ ಅವರ 90ನೇ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳವಾರ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಡೆದ ‘ಡಾ.ರಾಜ್ ಗೀತೆಗಳ ರಸ ಸಂಜೆ’ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಿತು.

ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ‘ಕಾರವಾರ ಕರೋಕೆ ಕ್ಲಬ್‌’ನ ಮಂಜುನಾಥ್ ಜಿ.ನಾವಿ, ಮೋಹನರಾಜ್, ಲೋಕೇಶ್ ಪಾವಸ್ಕರ್, ಕಿಶೋರ್ ಬಾಂದೇಕರ್, ಡಾ.ಶರದ್ ರೇವಣಕರ್, ಫಾತಿಮಾ ಶೇಖ್, ವೈಶಾಲಿ ಮಾಂಜ್ರೇಕರ್ ಅವರು ರಾಜಕುಮಾರ್ ಅಭಿನಯಿಸಿದ ಚಿತ್ರಗಳ 20ಕ್ಕೂ ಹೆಚ್ಚು ಗೀತೆಗಳ ಗಾಯನ ಮಾಡಿದರು. ಜತೆಗೆ, ಇಲ್ಲಿನ ಸ್ಟಾರ್‌ಚಾಯ್ಸ್ ನೃತ್ಯ ತಂಡದ ಕಲಾವಿದರು ನರ್ತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ., ಪ್ರತಿ ಹಾಡಿನ ಮಧ್ಯೆ ರಾಜಕುಮಾರರ ಜೀವನದ ಮಾಹಿತಿ ಹಾಗೂ ವಿವರವನ್ನು ನೀಡಿದರು.

ಡಾ.ರಾಜ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಕೆ.ಪ್ರಕಾಶ್, ‘ರಾಜಕುಮಾರ್ ಅವರು ಒಂದು ವಿಶ್ವ ವಿದ್ಯಾಲಯವಿದ್ದಂತೆ. ಅವರ ಜೀವನ ಕ್ರಮ ಮತ್ತು ಅವರು ಅಭಿನಯಿಸಿದ ಪಾತ್ರಗಳು ನಾಡಿನ ಲಕ್ಷಾಂತರ ಜನರ ಬದುಕಿನ ದಿಕ್ಕನ್ನೇ ಬದಲಿಸಿದವು’ ಎಂದರು.

ADVERTISEMENT

ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಹೇಮಂತ್ ರಾಮಡಗಿ, ಶಿವಾಜಿ ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಶಿವಾನಂದ ನಾಯ್ಕ, ಡಾ.ರಾಜಕುಮಾರ್ ಕನ್ನಡಾಭಿಮಾನಿ ಬಳಗದ ಟಿ.ಬಿ.ಹರಿಕಾಂತ್, ಎಸ್‌ಸಿಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಜಿ.ಡಿ.ಮನೋಜೆ ಇದ್ದರು. ಬಂದರು ಇಲಾಖೆ ಅಧಿಕಾರಿ ಸುರೇಶ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.