ADVERTISEMENT

ರೊಟ್ಟಿ, ಬುತ್ತಿ ತಂದವರಿಗೆ ಬಟಾಬಯಲೇ ಗತಿ

ಮಧುಕೇಶ್ವರ ದೇವಾಲಯದಲ್ಲಿ ಪ್ರವಾಸಿಗರಿಗೆ ಇಲ್ಲ ಸೌಲಭ್ಯ; ಪ್ರಾಚ್ಯವಸ್ತು ಇಲಾಖೆ ದೃಷ್ಟಿ ಹರಿಸಸುವಂತೆ ಒತ್ತಾಯ

ಸಂಧ್ಯಾ ಹೆಗಡೆ
Published 18 ಫೆಬ್ರುವರಿ 2017, 10:59 IST
Last Updated 18 ಫೆಬ್ರುವರಿ 2017, 10:59 IST
ಶಿರಸಿ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯದ ಎದುರಿನ ಹುಲ್ಲು ಹಾಸು ಬುತ್ತಿ ತಿನ್ನಲು ಆಸರೆ
ಶಿರಸಿ ತಾಲ್ಲೂಕಿನ ಬನವಾಸಿಯ ಮಧುಕೇಶ್ವರ ದೇವಾಲಯದ ಎದುರಿನ ಹುಲ್ಲು ಹಾಸು ಬುತ್ತಿ ತಿನ್ನಲು ಆಸರೆ   
ಶಿರಸಿ: ಐತಿಹಾಸಿಕ ಮಧುಕೇಶ್ವರ ದೇವಾಲಯದ ಮೂಲಕ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ತಾಣ ತಾಲ್ಲೂಕಿನ ಬನವಾಸಿ ಪಟ್ಟಣ. ಆದರೆ ಈ ದೇವಾಲಯಕ್ಕೆ ನಿತ್ಯ ಬರುವ ನೂರಾರು ಪ್ರವಾಸಿಗರಿಗೆ ಮೂಲ ಸೌಕರ್ಯಗಳಿಲ್ಲ ಎಂಬ ಕೊರಗು ಇಲ್ಲಿನ ನಿವಾಸಿಗಳದ್ದು. 
 
ಬನವಾಸಿಗೆ ಬರುವ ಪ್ರವಾಸಿಗರು ಮೊದಲು ಭೇಟಿ ನೀಡುವ ಸ್ಥಳ ಮಧುಕೇಶ್ವರ ದೇವಾಲಯ. ಮೆಟ್ಟಿಲು ಇಳಿದು ವರದಾ ನದಿಯಲ್ಲಿ ಪಾದ ತೊಳೆದುಕೊಂಡು ದೇವರ ದರ್ಶನಕ್ಕೆ ಬರುವವರು ಅಧಿಕ ಮಂದಿ. ನಂತರ ಸುತ್ತಲಿನ ಪಂಪವನ, ಆದಿಮಧುಕೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
 
ಪ್ರವಾಸಿಗರಿಗೆ ದೇವಸ್ಥಾನದ ವತಿಯಿಂದ ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆಯಿದೆ. ಬುತ್ತಿಕಟ್ಟಿಕೊಂಡು ಬರುವವರಿಗೆ ಸಮೀಪದಲ್ಲಿ ಒಂದು ಕೊಠಡಿಯನ್ನು ಕಲ್ಪಿಸಲಾಗಿದೆ. ಆದರೆ ಈ ಕೊಠಡಿಯಲ್ಲಿ ಕೆಲವೇ ಜನರು ಮಾತ್ರ ಕುಳಿತುಕೊಳ್ಳಬಹುದಾಗಿದೆ. ಹೀಗಾಗಿ ಅನೇಕರು ದೇವಾಲಯದ ಎದುರಿನ ಹುಲ್ಲುಹಾಸಿನ ಮೇಲೆ ಕುಳಿತು ತಿಂಡಿ ತಿನ್ನುತ್ತಾರೆ. ‘ಬಟಾಬಯಲಿನಲ್ಲಿ ಮರದ ನೆರಳು ಸಹ ಇಲ್ಲ. ಸುಡುಬಿಸಿಲಿನಲ್ಲಿ ಕುಳಿತುಕೊಂಡು ತಂದಿರುವ ಬುತ್ತಿ ತಿನ್ನಬೇಕು. ನೆತ್ತಿ ಸುಡುವ ಬಿಸಿಲಿನಲ್ಲಿ ಊಟ ಮುಗಿಸಿದರೆ ಸಾಕಪ್ಪಾ ಎನಿಸುತ್ತದೆ’ ಎಂದರು ಬಯಲಿನಲ್ಲಿ ಕುಳಿತು ಆಗಷ್ಟೇ ಊಟ ಮುಗಿಸಿದ್ದ ಶಾಂತವ್ವ. 
 
‘ಬಯಲು ಮಂಟಪದಲ್ಲಿ ಶೆಡ್‌ ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗಿದೆ. ಮಧುಕೇಶ್ವರ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ಸುಪರ್ದಿಯಲ್ಲಿ ಇರುವುದರಿಂದ ಪೂಜಾ ವಿನಿಯೋಗ ಹೊರತುಪಡಿಸಿ ಇನ್ನಾವುದೇ ಅಭಿವೃದ್ಧಿ ಚಟುವಟಿಕೆ ನಡೆಸಲು ಆಡಳಿತ ಮಂಡಳಿಗೆ ಅಧಿಕಾರವಿಲ್ಲ. ಅಭಿವೃದ್ಧಿ, ನಿರ್ಮಾಣ ಕಾಮಗಾರಿಗಳನ್ನು ಇಲಾಖೆ ಮಾತ್ರ ಮಾಡಬೇಕು’ ಎನ್ನುತ್ತಾರೆ ಆಡಳಿತ ಮಂಡಳಿಯ ಧರ್ಮದರ್ಶಿ ಟಿ.ಜಿ. ನಾಡಿಗೇರ. 
 
‘ದೇವಾಲಯದ ಎದುರಿನ ಹಾಳುಬಿದ್ದಿರುವ ಕಟ್ಟಡ ಪುನರ್ ನಿರ್ಮಾಣ ಸಂಬಂಧ ಕಳೆದ 10 ವರ್ಷಗಳಿಂದ ಅನೇಕ ಬಾರಿ ಇಲಾಖೆಗೆ ಪತ್ರ ಬರೆದು ಗಮನಕ್ಕೆ ತರುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಈ ಕಟ್ಟಡ ರಕ್ಷಣೆಯಿಲ್ಲದ ಸಂರಕ್ಷಿತ ಕಟ್ಟಡದಂತಾಗಿದೆ. ನಿತ್ಯ ಪ್ರವಾಸಿಗರು ಬರುವ ತಾಣಗಳಿಗೆ ಇಲಾಖೆಯಿಂದ ಶೀಘ್ರ ಸ್ಪಂದನ ಅಗತ್ಯ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
 
ಅಧಿಕಾರಿಗಳು ಭಾಗವಹಿಸಲಿ: ಕದಂಬ ಅರಸು ಮನೆತನದ ರಾಜ ರವಿವರ್ಮ ಪ್ರಜೆಗಳ ಖುಷಿಗಾಗಿ ಅಂದು ಮಧುಮಹೋತ್ಸವ ಆಚರಿಸುತ್ತಿದ್ದ. ಸೋದೆ ಅರಸರ ಕಾಲದಲ್ಲಿ ಇದು ವಸಂತೋತ್ಸವವಾಗಿ ಮಾರ್ಪಟ್ಟಿತು. ಪ್ರಸ್ತುತ ಇದು ಸರ್ಕಾರದ ಉತ್ಸವವಾಗಿ ನಡೆಯುತ್ತಿದೆ. ಕದಂಬೋತ್ಸವದ ಸಾಂಕೇತಿಕ ಉದ್ಘಾಟನೆ ಬಿಡಕಿಬೈಲಿನ ಮಯೂರವರ್ಮ ವೇದಿಕೆಯಲ್ಲಿ ನಡೆದರೂ ಇದಕ್ಕೂ ಪೂರ್ವ ದೇವಾಲಯ ಆವರಣದಲ್ಲಿ ಮಂಟಪದ ಎದುರು ಬೆಳಗುವ ಜ್ಯೋತಿಯೇ ಕದಂಬೋತ್ಸವದ ನಿಜವಾಗಿ ಉದ್ಘಾಟನೆಯಾಗಿದೆ ಎಂದು ಅವರು ವಿವರಿಸಿದರು. 
 
ಬನವಾಸಿಯ ಶ್ರೇಯೋಭಿವೃದ್ಧಿ ಹಿನ್ನೆಲೆಯಲ್ಲಿ ನಡೆಯುವ ಕದಂಬೋತ್ಸವದ ಪೂರ್ವಭಾವಿ ಸಭೆಗಳಿಗೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಬರುವಂತಾಗಬೇಕು. ಉತ್ಸವದ ನೆಪದಲ್ಲಿ ಬನವಾಸಿ, ಮಧುಕೇಶ್ವರ ದೇವಾಲಯದ ಅಭಿವೃದ್ಧಿ ಆಗಬೇಕು ಎಂದು ಅವರು ಆಗ್ರಹಿಸಿದರು. 
 
* ಆಡಳಿತ ಮಂಡಳಿ ತನ್ನ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಸೌಲಭ್ಯ ಒದಗಿಸಿದೆ. ಹೆಚ್ಚಿನ ಸ್ವಾತಂತ್ರ್ಯ ಇಲ್ಲದಿರುವ ಕಾರಣ ಇಲಾಖೆಯೇ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು
-ಟಿ.ಜಿ. ನಾಡಿಗೇರ, ದೇವಾಲಯದ ಧರ್ಮದರ್ಶಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.