ADVERTISEMENT

ವಿದ್ಯಾರ್ಥಿಗಳು ಸಹಸ್ರಾರು; ಕಾಲೇಜಿಗಿಲ್ಲ ಸೂರು

ಶಿರಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದೊರಕದ ಸ್ವಂತ ಕಟ್ಟಡ ಭಾಗ್ಯ

ಸಂಧ್ಯಾ ಹೆಗಡೆ
Published 7 ಡಿಸೆಂಬರ್ 2015, 7:25 IST
Last Updated 7 ಡಿಸೆಂಬರ್ 2015, 7:25 IST

ಶಿರಸಿ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಹೆಗ್ಗಳಿಕೆ ಪಾತ್ರವಾಗಿರುವ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ವಂತ ಕಟ್ಟಡ ಹೊಂದುವ ಭಾಗ್ಯ ಇನ್ನೂ ದೊರೆತಿಲ್ಲ. ಹೊಸ ಕಟ್ಟಡದ ಕಾಮಗಾರಿಯ ಆಮೆ ನಡಿಗೆ ಇದಕ್ಕೆ ಕಾರಣವಾಗಿದೆ.

ರಾಯಪ್ಪಾ ಹುಲೇಕಲ್‌ ಪ್ರಾಥಮಿಕ ಶಾಲೆಯಿಂದ ಎರವಲು ಪಡೆದಿರುವ ಕೊಠಡಿಗಳಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3200 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬನವಾಸಿ ರಸ್ತೆಯ ಪಕ್ಕದಲ್ಲಿ ಕಾಲೇಜಿಗೆ 2 ಎಕರೆ ಅರಣ್ಯ ಭೂಮಿಯ ಜಾಗ ಮಂಜೂರು ಆಗಿತ್ತು. ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿರುವ ₹ 2 ಕೋಟಿ ಮೊತ್ತದಲ್ಲಿ ಗುತ್ತಿಗೆ ಪಡೆದಿರುವ ರೈಟ್ಸ್‌ ಕಂಪೆನಿ 5 ಕೊಠಡಿಗಳನ್ನು ನಿರ್ಮಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉನ್ನತ ಶಿಕ್ಷಣ ಸಚಿವರಾಗಿದ್ದ ವೇಳೆ ಎರಡನೇ ಹಂತದ ಕಟ್ಟಡ ಕಾಮಗಾರಿಗೆ ₹ 98 ಲಕ್ಷ ಬಿಡುಗಡೆ ಮಾಡಿದ್ದರು. ಗುತ್ತಿಗೆ ಪಡೆದಿರುವ ಭೂಸೇನಾ ನಿಗಮವು ತೀವ್ರ ವಿಳಂಬವಾಗಿ ಕಾಮಗಾರಿ ಪ್ರಾರಂಭಿಸಿದ್ದು ಆಮೆಗತಿಯಲ್ಲಿ ಕೆಲಸ ನಡೆಯುತ್ತಿದೆ.

ಆರಂಭಿಕ ಕಟ್ಟಡದ ಕಾಮಗಾರಿ ಕಳಪೆ ಯಾಗಿರುವ ಆರೋಪ ಇದ್ದರೂ ಇದೇ ಕಟ್ಟಡದ ಮೇಲೆ ಎರಡನೇ ಹಂತದ 7 ಕೊಠಡಿಗಳು ನಿರ್ಮಾಣ ವಾಗುತ್ತಿವೆ. ಕಾಲೇಜಿನ ಕಟ್ಟಡ ಕಾಮಗಾರಿ ಪ್ರಾರಂಭವಾಗಿ 3 ವರ್ಷ ಕಳೆದರೂ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

‘ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ, ಪದವಿಗಳ ತರಬೇತಿ ನಡೆಸಲು ಕಾಲೇಜಿನ ಕನಿಷ್ಠ 18 ಕೊಠಡಿಗಳು ಅಗತ್ಯ ಇವೆ. ಹಾಲಿ ಇರುವ ವ್ಯವಸ್ಥೆಯಲ್ಲಿ ಬೆಳಗ್ಗೆ 8ರಿಂದ 1 ಗಂಟೆಯವರೆಗೆ ಬಿ.ಎ, ಬಿ.ಬಿ.ಎ ಹಾಗೂ ಮಧ್ಯಾಹ್ನ 1ರಿಂದ 5ರವರೆಗೆ ಬಿ.ಎಸ್ಸಿ ಮತ್ತು ಬಿ.ಕಾಂ ತರಗತಿಗಳನ್ನು 2 ಅವಧಿಯಲ್ಲಿ ನಡೆಸಲಾಗುತ್ತಿದೆ. ಏಕಕಾಲದಲ್ಲಿ ಎಲ್ಲ ತರಗತಿ ನಡೆಸುವುದಾದರೆ 36 ಕೊಠಡಿಗಳು ಬೇಕಾಗುತ್ತವೆ.’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಜಿ.ಟಿ.ಹೆಗಡೆ.

‘ಕಾಲೇಜಿನ ಕಟ್ಟಡಕ್ಕೆ ಸಂಬಂಧಿಸಿ 36 ಕೊಠಡಿಗಳು, ಪ್ರಯೋಗಾಲಯ, ಗ್ರಂಥಾಲಯ, ಸಭಾಭವನ ಸೇರಿದಂತೆ ₹ 5.80 ಕೋಟಿ ವೆಚ್ಚದ ಪ್ರಸ್ತಾವವನ್ನು ಮೂರು ವರ್ಷಗಳ ಹಿಂದೆ ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಸಲಾಗಿದೆ. ಎರಡು ಹಂತದ ಕಾಮಗಾರಿಗೆ ಹಣ ಮಂಜೂರು ಆಗಿದ್ದು, ಮೂರನೇ ಹಂತದ ಕಾಮಗಾರಿಗೆ ಬಜೆಟ್‌ನಲ್ಲಿ ಅನುದಾನ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಟ್ಟಡ ಕಾಮಗಾರಿ ಪ್ರಗತಿಯ ಬಗ್ಗೆ ಇತ್ತೀಚೆಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆ ನಡೆಸಿ ಕಳಪೆ ಕಾಮಗಾರಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಣಮಟ್ಟದ ಕೆಲಸ ಮಾಡಿ ಶೀಘ್ರ ಪೂರ್ಣಗೊಳಿಸುವಂತೆ ಅವರು ಆದೇಶಿಸಿದ್ದಾರೆ.

ಮೂಲಸೌಲಭ್ಯ ಇಲ್ಲ: ‘ರಾಯಪ್ಪಾ ಹುಲೇಕಲ್‌ ಶಾಲೆಯಲ್ಲಿ ನಡೆಯುತ್ತಿರುವ ಕಾಲೇಜು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. 40 ವಿದ್ಯಾರ್ಥಿಗಳು ಕುಳಿತುಕೊಳ್ಳುವ ಕೊಠಡಿಯಲ್ಲಿ 80 ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಿದ್ದಾರೆ. ಶೌಚಾಲಯ ವ್ಯವಸ್ಥೆ ಸಹ ಸಮರ್ಪಕವಾಗಿಲ್ಲ’ ಎನ್ನುತ್ತಾರೆ ಕಾಲೇಜಿನ ವಿದ್ಯಾರ್ಥಿಗಳು.

‘ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ರುವ ಕಾಲೇಜಿಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ₹ 2 ಕೋಟಿ ಮಂಜೂರು ಮಾಡಿತ್ತು. ಅದರ ಕಾಮಗಾರಿಯೇ ಇನ್ನೂ ಮುಗಿದಿಲ್ಲ. ಅರೆಬರೆ ಕೆಲಸ ಆಗಿರುವುದರಿಂದ ಕಾಲೇಜಿನ ಯಾವುದೇ ಒಂದು ವಿಭಾಗವನ್ನು ಸಹ ಅಲ್ಲಿಗೆ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಕಾಲೇಜಿನ ಅಭಿವೃದ್ಧಿ ಸಮಿತಿಯನ್ನು ಸಹ ಕಳೆದ ಎರಡೂವರೆ ವರ್ಷಗಳಿಂದ ರಚನೆ ಮಾಡಿಲ್ಲ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

***
ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿಗೆ ಆದ್ಯತೆ ಮೇಲೆ ಹೆಚ್ಚಿನ ಅನುದಾನ ನೀಡಬೇಕು. ಕಾಲೇಜು ಅಭಿವೃದ್ಧಿ ಸಮಿತಿಯನ್ನು ಶೀಘ್ರ ರಚಿಸಬೇಕು.
-ವಿಶ್ವೇಶ್ವರ ಹೆಗಡೆ ಕಾಗೇರಿ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.