ADVERTISEMENT

ಶರತ್‌ ಹತ್ಯೆ ಖಂಡಿಸಿ ಪ್ರತಿಭಟನಾ ಮೆರವಣಿಗೆ

ಬಿಜೆಪಿ ಕಾರ್ಯಕರ್ತರಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:16 IST
Last Updated 12 ಜುಲೈ 2017, 6:16 IST

ಯಲ್ಲಾಪುರ: ‘ಕರ್ನಾಟಕದ ಹಿಂದೂಗಳು ತಾಳ್ಮೆಯುಳ್ಳ ಜನ. ಅವರ ಸಹನೆ ಪರೀಕ್ಷಿಸಿದರೆ ತಕ್ಕ ಪ್ರತೀಕಾರ ತೀರಿಸುವವರೆಗೆ ಸುಮ್ಮನಿರುವುದಿಲ್ಲ’ ಎಂದು ಸಂಸದ ಅನಂತ ಕುಮಾರ ಹೆಗಡೆ ಎಚ್ಚರಿಸಿದರು.

ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಮಂಗಳವಾರ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ಪ್ರತಿ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಇಂತಹ ಕೃತ್ಯಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ’ ಎಂದರು.

ADVERTISEMENT

ಪಟ್ಟಣದ ದೇವಿ ಮೈದಾನದಿಂದ ಹೊರಟ ನೂರಾರು ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಆಡಳಿತದ  ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮೆರವಣಿಗೆಯ ಉದ್ದಕ್ಕೂ ಶರತ್ ಮಡಿವಾಳನ ಹತ್ಯೆಯನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.

ಬಿಜೆಪಿ ಮುಖಂಡ ಪ್ರಮೋದ ಹೆಗಡೆ ಮಾತನಾಡಿ, ‘ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾkನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ, ದೌರ್ಜನ್ಯ ನಡೆಸಿ ಹತ್ಯೆ ನಡೆಸಲಾಗುತ್ತಿದ್ದರೂ, ಸರ್ಕಾರ ಮೌನ ವಹಿಸಿದೆ.

ಶರತ್ ಮಡಿವಾಳನ ಕುರಿತಾಗಿ ನಡೆಸುವ ಪ್ರತಿಭಟನೆಯಲ್ಲಿ ಭಾಗವಹಿಸುವ ಹಿಂದೂಗಳ ಮೇಲೆ ಗುಂಡು ಹಾರಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಹಾಗೆ ಮಾಡಿದರೆ ಸರ್ಕಾರವೇ ಉರುಳುತ್ತದೆ ವಿನಃ ಹಿಂದುಗಳಿಗೆ ಏನೂ ಆಗುವುದಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ದೂಳೀಪಟ ಮಾಡುವ ಮೂಲಕ ಶರತ್ ಹತ್ಯೆಗೆ ಶ್ರದ್ಧಾಂಜಲಿ ಸಲ್ಲಿಸೋಣ’ ಎಂದರು.

ಸಾಮಾಜಿಕ ಕಾರ್ಯಕರ್ತ ವೆಂಕಟ್ರಮಣ ಬೆಳ್ಳಿ, ಬಿ.ಜೆ.ಪಿ ಯ  ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಹೆಗಡೆ,  ತಾಲ್ಲೂಕು ಪಂಚಾಯ್ತಿ ಸದಸ್ಯೆ ಚಂದ್ರಕಲಾ ಭಟ್ಟ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯಕ್ ಮಾತನಾಡಿದರು.

ಮುಖಂಡರಾದ ಗೋಪಾಲಕೃಷ್ಣ ಗಾಂವ್ಕರ, ಅನಂತ ಗಾಂವ್ಕರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶ್ರುತಿ ಹೆಗಡೆ, ರೂಪಾ ಬೂರ್ಮನೆ, ರಾಮು ನಾಯ್ಕ, ನಾರಾಯಣ ಭಾವಿಮನೆ, ನರಸಿಂಹ ಕೋಣೆಮನೆ, ನಾಗರಾಜ ಕವಡಿಕೆರೆ,  ನಟರಾಜ ಗೌಡರ್, ಬಾಬು ಬಾಂದೇಕರ, ವೀಣಾ ಯಲ್ಲಾಪುರಕರ್, ಗಣಪತಿ ಬೋಳಗುಡ್ಡೆ, ಪ್ರಸಾದ
ಹೆಗಡೆ, ವಿಜಯಕುಮಾರ ಹಿರೇಮಠ, ಧೀರಜ್ ತಿನೆಕರ್, ಗಜಾನನ ನಾಯ್ಕ, ಪ್ರಕಾಶ ಕಟ್ಟಿಮನಿ, ಮಹೇಶ ನಾಯ್ಕ ಪ್ರತಿಭಟನೆಯ ಮೂಂಚೂಣಿ ಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.