ADVERTISEMENT

ಸಮಾಜ ಸುಧಾರಣೆಗೆ ವಚನಗಳು ಪಾಠ

ದೇವರ ದಾಸಿಮಯ್ಯ ಜಯಂತಿಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:57 IST
Last Updated 11 ಮಾರ್ಚ್ 2017, 11:57 IST
ಶಿರಸಿ: ಸಮಾಜಕ್ಕೆ ನೀತಿ ಪಾಠವಾಗಿರುವ ಭಕ್ತಿ ಪ್ರಧಾನ ವಚನಗಳು ಸದಾಕಾಲ ಪ್ರಸ್ತುತವಾಗಿವೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 
 
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ ಜಂಟಿಯಾಗಿ ಶುಕ್ರವಾರ ಇಲ್ಲಿ ಆಯೋಜಿಸಿದ್ದ ದೇವರ ದಾಸಿಮಯ್ಯ, ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ದೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂದಿನ ಸಾಮಾಜಿಕ ಸ್ಥಿತಿಯಲ್ಲಿ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿದರು.
 
ವಚನಗಳ ಮೂಲಕ ಸಮಾಜದಲ್ಲಿ ಮೌಲ್ಯ, ಆದರ್ಶಗಳನ್ನು ಬಿತ್ತುವ ಕೆಲಸ ಮಾಡಿದರು. ದೇವರ ದಾಸಿಮಯ್ಯನಂತಹ ವಚನಕಾರರಿಂದ ಬಸವಣ್ಣ ಪ್ರೇರಿತರಾದವರು. ವಚನಕಾರರ ವಚನಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕು ಎಂದರು. 
 
ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಮಾತನಾಡಿ, ಸಾಮಾಜಿಕ ಬದಲಾವಣೆಯ ಹಂಬಲದೊಂದಿಗೆ ವಚನಕಾರರು ವಚನಗಳನ್ನು ರಚಿಸಿದರು ಎಂದರು. ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸ್ಮನಿ ವಿಶೇಷ ಉಪನ್ಯಾಸ ನೀಡಿದರು. ಬಸವಣ್ಣನವರ 12ನೇ ಶತಮಾನ ಇಡೀ ದೇಶಕ್ಕೆ ಬದಲಾವಣೆಯ ಯುಗವನ್ನು ತಂದುಕೊಟ್ಟಿತ್ತು. ಸಾಮಾಜಿಕ, ಆರ್ಥಿಕ, ರಾಜಕೀಯ ಎಲ್ಲ ಮಗ್ಗಲುಗಳಲ್ಲಿ ಈ ಯುಗವನ್ನು ಪರಿಗಣಿಸಬಹುದು. ಜಾತಿ ವ್ಯವಸ್ಥೆಯಿಂದ ಅನೇಕ ಸಮುದಾಯಗಳು ಕ್ರೌರ್ಯಕ್ಕೆ ಒಳಗಾಗಿದ್ದವು. 
 
ಆ ಸಂದರ್ಭದಲ್ಲಿ ಜಾತಿ, ವರ್ಗ ಬೇಧವಿಲ್ಲದ ಸ್ವಸ್ಥ ಸಮಾಜ ನಿರ್ಮಾಣದ ಕಲ್ಪನೆಗೆ ಜೊತೆಯಾಗಿ ದ್ದವರು ಎಲ್ಲ ವಚನಕಾರರು. ಈ ಎಲ್ಲ ವಚನಕಾರರ ಪ್ರೇರಣೆಯಿಂದ ಬಸವಣ್ಣ ಜಗಜ್ಯೋತಿಯಾಗಿದ್ದಾರೆ ಎಂದರು. 
 
ಉಪವಿಭಾಗಾಧಿಕಾರಿ ರಾಜು ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಸದಸ್ಯ ನಾಗರಾಜ ಶೆಟ್ಟಿ, ತಹಶೀಲ್ದಾರ್ ಬಸಪ್ಪ ಪೂಜಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಆನಂದ ಧುರಿ, ಪೌರಾಯುಕ್ತ ಮಹೇಂದ್ರಕುಮಾರ್ ಇದ್ದರು. ಎ.ವಿ. ದಾಸರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.