ADVERTISEMENT

ಸಾಧು ಸಂತರು ಅದ್ಭುತ ವಿಜ್ಞಾನಿಗಳು: ದಿಂಗಾಲೇಶ್ವರ ಶ್ರೀ

ಹಾನಗಲ್ ಕುಮಾರ ಸ್ವಾಮೀಜಿ ಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 10:44 IST
Last Updated 16 ನವೆಂಬರ್ 2017, 10:44 IST

ಶಿರಸಿ: ‘ಸಾಧು ಸಂತರು ಕೇವಲ ತತ್ವಜ್ಞಾನಿಗಳಷ್ಟೇ ಅಲ್ಲದೇ ಅದ್ಭುತ ವಿಜ್ಞಾನಿಗಳು ಆಗಿದ್ದರು. ಜಗತ್ತಿಗೆ ಆರೋಗ್ಯ ರಕ್ಷಣೆ ಸೂತ್ರ, ಯೋಗ, ಧ್ಯಾನ, ಆಯುರ್ವೇದದಂತಹ ಮಹತ್ವದ ಸಂಗತಿಯನ್ನು ನೀಡಿದ್ದಾರೆ’ ಎಂದು ಬಾಳೆಹೊಸೂರು ದಿಂಗಾಲೇಶ್ವರ ಮಠದ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.

ಶ್ರೀಮದ್ವೀರಶೈವ ಶಿವಯೋಗ ಮಂದಿರದ ಸಂಸ್ಥಾಪಕರಾದ ಹಾನಗಲ್ ಕುಮಾರ ಮಹಾಶಿವಯೋಗಿಗಳವರ 150ನೇ ಜಯಂತಿ, ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ 105ನೇ ಜಯಂತಿ ಹಾಗೂ ಶ್ರೀ ಶಿವಲಿಂಗ ಮಹಾಶಿವಯೋಗಿ 84ನೇ ಸ್ಮರಣೋತ್ಸವ ಅಂಗವಾಗಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

‘ಸಾಧು ಸಂತರು ಪ್ರಕೃತಿ ಮತ್ತು ವಿಕೃತ ಮನಸ್ಸಿನ ಮೇಲೂ ಹಿಡಿತ ಸಾಧಿಸಿದ್ದರು. ಬ್ರಿಟಿಷರು ನಮ್ಮ ದೇಶದ ಮೇಲೆ ದಾಳಿ ನಡೆಸಿ ನಮ್ಮನ್ನು ಅಡಿಯಾಳನ್ನಾಗಿ ಮಾಡಿ ದೇಶದ ಸಂಪತ್ತನ್ನು ದೋಚಿಕೊಂಡು ಹೋದರು. ಆದರೆ ನಮ್ಮ ಸಾಧು ಸಂತರು ವಿದೇಶಕ್ಕೆ ಹೋಗಿ ಯೋಗ, ಧ್ಯಾನ, ಆಯುರ್ವೇದ, ಆರೋಗ್ಯದ ಬಗ್ಗೆ ಹೇಳಿ ಅವರಿಂದ ಸಂಪತ್ತನ್ನು ಪಡೆದು ಸ್ವದೇಶಕ್ಕೆ ತಂದು ಉತ್ತಮ ಕಾರ್ಯಗಳಿಗೆ ಬಳಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಮುದನೂರು ಮಠದ ಸಿದ್ಧಲಿಂಗದೇವರು ಸ್ವಾಮೀಜಿ ಆಶೀರ್ವಚನ ನೀಡಿ, ‘ಆಚಾರ, ವಿಚಾರಗಳನ್ನೇ ನಂಬಿ ಬದುಕುವವರೇ ಮಹಾಸ್ವಾಮಿಗಳಾಗುತ್ತಾರೆ. ಹಾನಗಲ್ ಕುಮಾರಸ್ವಾಮಿ ಹಾಗೂ ಗುರುಸಿದ್ಧರಾಜರು ಈ ಮಣ್ಣಿನಲ್ಲಿ ಹುಟ್ಟಿ ನಮ್ಮೆಲ್ಲರ ಬದುಕಿಗೆ ಬಣ್ಣ ತುಂಬಿದ್ದಾರೆ. ಒಂದು ಮನಸ್ಸಿನಿಂದ ಲಿಂಗಪೂಜೆ ಮಾಡುತ್ತಿದ್ದರೆ ಇನ್ನೊಂದು ಮನಸ್ಸಿನಿಂದ ಸಮಾಜದ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಅವರ ಆದರ್ಶ ನಮಗೆ ಮಾರ್ಗದರ್ಶನವಾಗಬೇಕು’ ಎಂದು ನುಡಿದರು.

ಹಿರೇಮಠದ ಸಂಸ್ಥಾನಮಠದ ಚನ್ನವೀರ ದೇವರು ಸ್ವಾಮೀಜಿ, ಬಣ್ಣದಮಠದ ಪೀಠಾಧೀಶರಾದ ಶಿವಲಿಂಗ ಸ್ವಾಮೀಜಿ, ಹುಲ್ಲತ್ತಿಯ ಮಹಾಲಿಂಗ ದೇವರು, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀಕಾಂತ ಹೂಲಿ, ವೀರಶೈವ ಸಮಾಜದ ಪ್ರಮುಖರಾದ ಕೆ.ಎಸ್.ಶೆಟ್ಟರ್, ಚಂದ್ರಶೇಖರ ಕಲಗೇರಿ, ಎಸ್.ಎಂ.ಪಾಟೀಲ ಉಪಸ್ಥಿತರಿದ್ದರು. ಬೆಳ್ಳಾವಿ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬಣ್ಣದಮಠದ ವ್ಯವಸ್ಥಾಪಕ ಎಸ್.ಬಿ.ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.