ADVERTISEMENT

`5 ಕೋಟಿ ನೆರವು ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:48 IST
Last Updated 15 ಮಾರ್ಚ್ 2017, 6:48 IST

ಶಿರಸಿ: ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಭೀಕರವಾಗಿದೆ. ಬರಗಾಲ ನಿರ್ವಹಣೆಗೆ ರಾಜ್ಯ ಸರ್ಕಾರ ` 5 ಕೋಟಿ ನೆರವು ನೀಡಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.

ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಸಂಬಂಧ ಮಾಹಿತಿ ಪಡೆಯಲು ಮಂಗಳವಾರ ಇಲ್ಲಿ ಕರೆದಿದ್ದ ಅಧಿಕಾರಿಗಳು, ಪಿಡಿಒಗಳು, ಗ್ರಾಮ ಪಂಚಾಯ್ತಿ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ಉಸ್ತುವಾರಿ ಅಧಿಕಾರಿಯಾಗಿರುವ ಕೃಷಿ ಇಲಾಖೆ ಅಧಿಕಾರಿ ಜಿಲ್ಲಾ ಮಟ್ಟದಲ್ಲಿ ಪರಿಹಾರವಾಗುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆ ಚರ್ಚಿಸಿ ಬಗೆಹರಿಸಬೇಕು. ಸ್ಥಳೀಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಆಯಾ ಪಂಚಾಯ್ತಿಗೆ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ತಾಲ್ಲೂಕಿಗೆ  `30 ಲಕ್ಷ, ನಂತರದಲ್ಲಿ ` 20 ಲಕ್ಷ ಹಾಗೂ ಪ್ರಕೃತಿ ವಿಕೋಪ ನಿಧಿಯಡಿ `24.55 ಲಕ್ಷ ಅನುದಾನ ದೊರೆತಿದೆ. ಶಿರಸಿ– ಸಿದ್ದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳಿಗೆ ಈ ಮೊತ್ತ ಕಡಿಮೆಯಾಗಿದ್ದು ಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದರು.

ADVERTISEMENT

ಪಿಡಿಒಗಳು ನೀರಿನ ತುಟಾಗ್ರತೆ ಎದುರಾಗಬಹುದಾದ ಗ್ರಾಮಗಳನ್ನು ಗುರುತಿಸಿ ಪಟ್ಟಿ ಮಾಡಿಟ್ಟುಕೊಂಡು ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸನ್ನದ್ಧರಾಗಿರಬೇಕು. ಜಲಮೂಲಗಳನ್ನು ಕಂದಾಯ ಇಲಾಖೆ ಈಗಾಗಲೇ ಗುರುತಿಸಿದೆ. ಅರಣ್ಯ ಇಲಾಖೆ ಸಾರ್ವಜನಿಕರು, ಗ್ರಾಮ ಅರಣ್ಯ ಸಮಿತಿ ಸಹಕಾರದೊಂದಿಗೆ ಅರಣ್ಯಕ್ಕೆ ಬೀಳುವ ಬೆಂಕಿ ತಪ್ಪಿಸಬೇಕು ಎಂದರು.

ಬರಗಾಲದ ಸಂದರ್ಭ ಆಗಿರುವು ದರಿಂದ ಆರ್ಥಿಕ ವರ್ಷದ ಕೊನೆಯಲ್ಲಿ ಕೆಲಸ ಮಾಡಿದ ಹಣವನ್ನು ತಕ್ಷಣಕ್ಕೆ ಪಾವತಿಸುವಂತಾಗಬೇಕು. ಆರ್ಥಿಕ ವರ್ಷದ ಕೊನೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಒಂದು ವಾರ ಕಾಲ ಸ್ಥಗಿತವಾ ಗುತ್ತದೆ. ಬರಗಾಲದ ಸಂದರ್ಭದಲ್ಲಿ ಕೆಲಸ ಸ್ಥಗಿತಗೊಂಡರೆ ಕೂಲಿಗಳಿಗೆ ತೀವ್ರ ಸಮಸ್ಯೆ, ನೀರಿನ ಕಾಮಗಾರಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಇದೇ 22ರಿಂದ ಏಪ್ರಿಲ್ 1ರವರೆಗಿನ ಉದ್ಯೋಗ ಖಾತ್ರಿ ಕೆಲಸ ನಿಲ್ಲಬಾರದು ಮತ್ತು ವಿಳಂಬವಿಲ್ಲದೇ ಹಣ ಪಾವತಿ ಯಾಗಬೇಕು ಎಂದರು.

ಅನುಮತಿ ಕೊಡಿ: ಗ್ರಾಮೀಣ ಪ್ರದೇಶದ ಬಡವರು ಸ್ವಂತ ಬಾವಿಗಳನ್ನು ಸ್ವತಃ ಅವರೇ ಆಳ ಮಾಡಿಕೊಳ್ಳಲು ಸಿದ್ಧರಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಇದರ ಕ್ರಿಯಾಯೋಜನೆಯನ್ನು ಜಿಲ್ಲಾ ಪಂಚಾಯ್ತಿಗೆ ಕಳುಹಿಸಲಾಗಿದೆ. ಆದರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇದನ್ನು ತಿರಸ್ಕರಿಸಿ ದ್ದಾರೆ. ಇದಕ್ಕೆ ಅವಕಾಶ ನೀಡಿದ್ದರೆ ಗ್ರಾಮೀಣ ಪ್ರದೇಶದ ನೀರಿನ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತಿತ್ತು ಎಂದು ಹುಲೇಕಲ್ ಪಂಚಾಯ್ತಿ ಅಧ್ಯಕ್ಷ ವಿ.ಜಿ. ಹೆಗಡೆ ಹೇಳಿದರು.

ಸದಸ್ಯರಾದ ಜಿ.ಎನ್.ಹೆಗಡೆ, ಉಷಾ ಹೆಗಡೆ, ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ರವಿ ಹೆಗಡೆ, ನರಸಿಂಹ ಹೆಗಡೆ, ಕಾರ್ಯನಿರ್ವಣಾಧಿಕಾರಿ ಆನಂದ ಧುರಿ, ತಹಶೀಲ್ದಾರ್ ಬಸಪ್ಪ ಪೂಜಾರಿ ಇದ್ದರು.

**

ಶಿರಸಿ ತಾಲ್ಲೂಕು ಬರಗಾಲದ ಪಟ್ಟಿಗೆ ಸೇರದಿದ್ದರೂ ಬರಗಾಲದ ಭೀಕರತೆ ಸಾಕಷ್ಟಿದೆ. ತಾಲ್ಲೂಕನ್ನು ಈಗಲಾದರೂ ಬರಗಾಲದ ಪಟ್ಟಿಗೆ ಸೇರಿಸಬೇಕು ವಿಶ್ವೇಶ್ವರ -ಹೆಗಡೆ ಕಾಗೇರಿ, 
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.