ADVERTISEMENT

ಈರುಳ್ಳಿಯತ್ತ ಬೆಳೆಗಾರರ ಚಿತ್ತ; ಸಿದ್ಧತೆ ಬಿರುಸು

ಡಿ.ಬಿ, ನಾಗರಾಜ
Published 6 ಸೆಪ್ಟೆಂಬರ್ 2017, 4:43 IST
Last Updated 6 ಸೆಪ್ಟೆಂಬರ್ 2017, 4:43 IST
ವಿಜಯಪುರ ತಾಲ್ಲೂಕು ಉಪ್ಪಲದಿನ್ನಿ ಗ್ರಾಮದಲ್ಲಿ ಮಡಿಗಳಲ್ಲಿ ಈರುಳ್ಳಿ ಅಗಿ ಬೆಳೆದಿರುವುದು
ವಿಜಯಪುರ ತಾಲ್ಲೂಕು ಉಪ್ಪಲದಿನ್ನಿ ಗ್ರಾಮದಲ್ಲಿ ಮಡಿಗಳಲ್ಲಿ ಈರುಳ್ಳಿ ಅಗಿ ಬೆಳೆದಿರುವುದು   

ವಿಜಯಪುರ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಗಗನಮುಖಿಯಾಗುತ್ತಿದ್ದಂತೆ, ಬೆಳೆಗಾರರು ಹಿಂಗಾರು ಹಂಗಾಮಿನಲ್ಲಿ ಯಥೇಚ್ಛ ಪ್ರಮಾಣದಲ್ಲಿ ಉಳ್ಳಾಗಡ್ಡಿ ನಾಟಿ ಮಾಡಲು ಸಿದ್ಧತೆ ಆರಂಭಿಸಿದ್ದಾರೆ. ಸತತ ಎರಡು ವರ್ಷದಿಂದ ಮಳೆ ಅಭಾವ, ಬರ, ದರ ಕುಸಿತದಿಂದ ಕಂಗಾಲಾಗಿದ್ದ ಉಳ್ಳಾಗಡ್ಡಿ ಬೆಳೆಗಾರರಲ್ಲಿ ಇದೀಗ ಮಾರುಕಟ್ಟೆಯಲ್ಲಿರುವ ಧಾರಣೆ ಭಾರಿ ಭರವಸೆ ಮೂಡಿಸಿದೆ. ಈರುಳ್ಳಿ ಸಹವಾಸವೇ ಸಾಕು ಎಂದು ಕಣ್ಣೀರಿಟ್ಟಿದ್ದ ಬೆಳೆಗಾರರು ಇದೊಮ್ಮೆ ಬೆಳೆಯೋಣ ಎಂಬ ಹುಮ್ಮಸ್ಸಿನಿಂದ ಹೊಲದತ್ತ ಹೆಜ್ಜೆ ಹಾಕುವ ದೃಶ್ಯ ಜಿಲ್ಲೆಯಲ್ಲಿ ಗೋಚರಿಸುತ್ತಿದೆ.

‘ಜಿಲ್ಲೆಯ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮು ಇದೇ 15ರಿಂದ ಆರಂಭ ಗೊಳ್ಳಲಿದೆ. ಎರೆ (ಕಪ್ಪು) ಮಣ್ಣಿನ ನೆಲದಲ್ಲಿ ಬಿತ್ತನೆ ನಡೆದರೆ, ಉಳಿದೆಡೆ ನಾಟಿ ಪದ್ಧತಿಯಲ್ಲಿ ಉಳ್ಳಾಗಡ್ಡಿ ಬೆಳೆಯುತ್ತಾರೆ. ಶೇ 70ರಷ್ಟು ಬೆಳೆಗಾರರು ನಾಟಿ ಪದ್ಧತಿ ಅನುಸರಿಸಿದರೆ, ಉಳಿದ ಶೇ 30ರಷ್ಟು ರೈತರು ಬಿತ್ತನೆ ನಡೆಸುತ್ತಾರೆ.

ಬಸವನಬಾಗೇವಾಡಿ ತಾಲ್ಲೂಕಿನ 1,705 ಹೆಕ್ಟೇರ್‌, ವಿಜಯಪುರ–1071, ಇಂಡಿ 263, ಮುದ್ದೇಬಿಹಾಳ 210, ಸಿಂದಗಿ ತಾಲ್ಲೂಕಿನ 149 ಹೆಕ್ಟೇರ್‌ನಲ್ಲಿ ಹಿಂಗಾರು ಹಂಗಾಮಿನಲ್ಲಿ ಉಳ್ಳಾಗಡ್ಡಿ ಬೆಳೆಯುವ ಗುರಿ ನಿಗದಿ ಜಿಲ್ಲಾ ತೋಟಗಾರಿಕೆ ಇಲಾಖೆಯದ್ದು.

ADVERTISEMENT

ಆದರೆ ಪ್ರಸ್ತುತ ಹಂಗಾಮಿನಲ್ಲಿ ಬದಲಾದ ಕಾಲಘಟ್ಟ, ಗಗನಮುಖಿ ಧಾರಣೆ, ನೀರಾವರಿ ಸೌಕರ್ಯದಿಂದ ಇಲಾಖೆಯ ಗುರಿ ಮೀರಿ ಉಳ್ಳಾಗಡ್ಡಿ ನಾಟಿಯಾಗಲಿದೆ. ಇದರ ಪ್ರಮಾಣ ದುಪ್ಪಟ್ಟುಗೊಂಡರೂ ಆಶ್ಚರ್ಯ ಪಡ ಬೇಕಿಲ್ಲ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ತಿಳಿಸಿದರು.

ಹೊಂಗಿರಣ: ‘ಪ್ರಸ್ತುತ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಧಾರಣೆ ಕ್ವಿಂಟಲ್‌ಗೆ ₹ 1500 ರಿಂದ 2000 ಇದೆ. ಸತತ ಎರಡು ವರ್ಷ ಬರ, ದರ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರಲ್ಲಿ ಈ ಧಾರಣೆ ಹೊಸ ಚೈತನ್ಯ ತುಂಬಿದೆ. ಮುಂದಿನ ದಿನಗಳಲ್ಲೂ ಇದೇ ದರ ಸಿಗಬಹುದು ಎಂಬ ನಿರೀಕ್ಷೆಯಿಂದ ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆಯ ಸಿದ್ಧತೆ ನಡೆಸಿದ್ದೇನೆ’ ಎಂದು ವಿಜಯಪುರ ತಾಲ್ಲೂಕು ಉಪ್ಪಲದಿನ್ನಿಯ ಯುವ ರೈತ ಸೋಮನಾಥ ಶಿವನಗೌಡ ಬಿರಾದಾರ ಹೇಳಿದರು.

‘ಹೊಲದಲ್ಲಿ ಈಗಾಗಲೇ ಮಡಿ ಮಾಡಿ ಅಗಿ ಅಚ್ಚಲಾಗಿದೆ. ತಿಂಗಳಾಂತ್ಯಕ್ಕೆ ಸಸಿ ನಾಟಿ ಆರಂಭಿಸಲಾಗುವುದು. ಈ ಬಾರಿ 18ರಿಂದ 20 ಎಕರೆ ಭೂಮಿಯಲ್ಲಿ ಈರುಳ್ಳಿ ಬೆಳೆಯಬೇಕು ಎಂಬ ಸಿದ್ಧತೆ ನಡೆಸಿದ್ದೇನೆ.

ಈಗಾಗಲೇ ಐದು ಎಕರೆಗೆ ಅಗತ್ಯವಿರುವ ಅಗಿಯನ್ನು ಮಡಿಯಲ್ಲಿ ಬೆಳೆಸಲಾಗುತ್ತಿದೆ. ಕೆಲ ದಿನಗಳ ಬಳಿಕ 15 ಎಕರೆ ಭೂಮಿಗೆ ಅಗತ್ಯವಿರುವ ಅಗಿ ಬೆಳೆಸಲು ಮಡಿ ಮಾಡಲಾಗುವುದು. ಇದಕ್ಕೆ ಅಗತ್ಯ ಪೂರ್ವ ತಯಾರಿ ನಡೆಸಿರುವೆ’ ಎಂದು ಅವರು ತಿಳಿಸಿದರು.

‘ಬೇಸಿಗೆ ಬೆಳೆಗೆ ಬೆಲೆ ಸಿಗಲಿಲ್ಲ. ರೈತರ ದಾಸ್ತಾನು, ಉತ್ಪನ್ನ ಖಾಲಿಯಾದ ಬಳಿಕ ಮಾರುಕಟ್ಟೆಯಲ್ಲಿ ಧಾರಣೆ ಬಂದಿತು. ಮುಂಗಾರಿನ ಉತ್ಪನ್ನವೂ ಅಷ್ಟೊಂದು ಆಶಾದಾಯಕವಾಗಿಲ್ಲ. ಇದೀಗ ಹಿಂಗಾರಿನಲ್ಲಿ ಬಿತ್ತನೆಗೆ ಸಕಲ ಸಿದ್ಧತೆ ನಡೆಸಿಕೊಂಡಿದ್ದೇವೆ.

ಒಂದು ಎಕರೆಗೆ ₹ 50 ಸಾವಿರ ವೆಚ್ಚವಾಗಲಿದೆ. ಕಾಲುವೆ ನೀರಾವರಿ ಆಸರೆಯಲ್ಲಿ ಬೆಳೆಯಿರಲಿದ್ದು, ಏಪ್ರಿಲ್‌ ಅಂತ್ಯದವರೆಗೂ ಕಾಲುವೆಯಲ್ಲಿ ನೀರು ಹರಿಸಿದರೆ, ಇದೇ ಧಾರಣೆ ಉತ್ಪನ್ನಕ್ಕೆ ಸಿಕ್ಕರೆ ಈರುಳ್ಳಿ ಬೆಳೆಗಾರರ ಹಣೆ ಬರಹವೇ ಬದಲಾಗಲಿದೆ. ಅದೃಷ್ಟವೇ ಹುಡುಕಿಕೊಂಡು ಮನೆಗೆ ಬರಲಿದೆ’ ಎಂದು ಸೋಮನಾಥ ಹೇಳಿದರು.

ಅಂಕಿ–ಅಂಶ
3398 ಹೆಕ್ಟೇರ್ ಹಿಂಗಾರಿನಲ್ಲಿ ಈರುಳ್ಳಿ ಬಿತ್ತನೆ ಗುರಿ

3438 ಹೆಕ್ಟೇರ್ ಮುಂಗಾರಿನಲ್ಲಿ ಈರುಳ್ಳಿ ಬಿತ್ತನೆ ಗುರಿ

1132 ಹೆಕ್ಟೇರ್‌ನಲ್ಲಿ ಬಿತ್ತನೆ;ಶೇ  32.93ರಷ್ಟು  ಸಾಧನೆ

1 ಹೆಕ್ಟೇರ್‌ಗೆ 22ರಿಂದ 25 ಟನ್‌ ಉತ್ಪಾದನೆ ನಿರೀಕ್ಷೆ

* * 

ಸತತ ಎರಡು ವರ್ಷ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಈರುಳ್ಳಿ ಬೆಳೆಗಾರರಲ್ಲಿ  ಆಶಾಕಿರಣ ಮೂಡಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದು, ಉತ್ಸಾಹ ಹೆಚ್ಚಿಸಿದೆ
ಸೋಮನಾಥ ಬಿರಾದಾರ
ಈರುಳ್ಳಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.