ADVERTISEMENT

ಕುಸ್ತಿ ಅಖಾಡದಲ್ಲಿ ಪ್ರೇಮಾ ಹುಚ್ಚಣ್ಣನವರ್ ರಂಗು

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 4:57 IST
Last Updated 18 ಜನವರಿ 2017, 4:57 IST
ಕುಸ್ತಿ ಅಖಾಡದಲ್ಲಿ ಪ್ರೇಮಾ ಹುಚ್ಚಣ್ಣನವರ್ ರಂಗು
ಕುಸ್ತಿ ಅಖಾಡದಲ್ಲಿ ಪ್ರೇಮಾ ಹುಚ್ಚಣ್ಣನವರ್ ರಂಗು   

ವಿಜಯಪುರ: ಕ್ಷಣ ಕ್ಷಣಕ್ಕೂ ಕುತೂಹಲ. ಅಖಾಡಕ್ಕಿಳಿದ ಜಟ್ಟಿಗಳಿಗೆ ಅಪಾರ ಬೆಂಬಲ. ರೋಚಕತೆ ಸೃಷ್ಟಿಸಿದ ಮಹಿಳಾ ಜಟ್ಟಿಗಳ ನಡುವಿನ ಕಾಳಗ...
ನಮ್ಮೂರ ಜಾತ್ರೆ ಅಂಗವಾಗಿ ಸೋಮವಾರ ಮುಸ್ಸಂಜೆ ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌.ಎಸ್‌. ಹೈಸ್ಕೂಲ್ ಮೈದಾನದಲ್ಲಿ ಗೋಚರಿಸಿದ ದೃಶ್ಯಾವಳಿಗಳು.

ಅಖಾಡದಲ್ಲಿ ಎದುರಾಳಿಗಳನ್ನು ಮಣಿಸಲು ಕುಸ್ತಿಪಟುಗಳು ಪರಸ್ಪರ ಹಾಕುತ್ತಿದ್ದ ಪಟ್ಟುಗಳಿಗೆ ಪ್ರೇಕ್ಷಕ ಸಮೂಹವೇ ಚಿತ್‌ ಆಯಿತು. ಅಖಾಡ ದಲ್ಲಿ ಪ್ರದರ್ಶನಗೊಂಡ ಪ್ರತಿ ಪಟ್ಟಿಗೂ ಕುಸ್ತಿ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾ ಯಿತು. ಚಪ್ಪಾಳೆ, ಶಿಳ್ಳೆಗಳು ಸುರಿಮಳೆಗರೆದವು.

ತೊಂಬತ್ತೊಂಭತ್ತು ವರ್ಷದ ಐತಿಹ್ಯ ಹೊಂದಿರುವ ಸಿದ್ಧೇಶ್ವರ ಜಾತ್ರೆಯಲ್ಲಿ ಅಂತರರಾಷ್ಟ್ರೀಯ ಕುಸ್ತಿಪಟು, ಏಕಲವ್ಯ ಪ್ರಶಸ್ತಿ ವಿಜೇತೆ ಗದಗದ ಪ್ರೇಮಾ ಹುಚ್ಚಣ್ಣನವರ್, ರಾಜ್ಯ ಪ್ರಶಸ್ತಿ ವಿಜೇತೆ ಶಶಿಕಲಾ ರೋಣ ನಡುವಿನ ಪಂದ್ಯವಳಿ ರೋಚಕತೆ ಸೃಷ್ಟಿಸಿತ್ತು.

ಈ ಸೆಣಸಾಟದಲ್ಲಿ ಪ್ರೇಮಾ ವಿಜಯ ಶಾಲಿಯಾಗಿ ಹೊರ ಹೊಮ್ಮಿದರು. ಈ ಹಿಂದೆ ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ ಪ್ರೇಮಾ ರಷ್ಯಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪಡೆದು ವಿಶ್ವದ ಗಮಗ ಸೆಳೆದಿದ್ದರು.
 
ಲಕ್ಕುಂಡಿಯ ಸಾಹೀರಾಬಾನು, ಇಂಡಿಯ ಸೋನಿಯಾ ಜಾಧವ್ ನಡುವಿನ ಪಂದ್ಯ ಕೂಡ ಸಮಬಲದಿಂದ ಅಂತ್ಯ ಕಂಡಿತು. ಬಸಿರಾ ಮುಂಡರಗಿ–ಮೈತ್ರಾ ಅಸುಂಡೆ ನಡುವಿನ ಪಂದ್ಯದಲ್ಲಿ ಬಸಿರಾ ವಿಜೇತರಾದರು. ಪುರುಷರ ವಿಭಾಗದಲ್ಲಿ ವಿಜಯಪುರದ ಸುನೀಲ ಹೊರ್ತಿ ವಿರುದ್ಧ ಅಭಿಷೇಕ ನಾಗರಾಜ, ಹೊನ್ನೂರಿನ ಮಲ್ಲಪ್ಪ ಉಳ್ಳಾಗಡ್ಡಿ ವಿರುದ್ಧ ಮಹೇಶ ಕುಮಸಗಿ, ಬರಡೋಲದ ಮಲಕಾರಿ ವಿರುದ್ಧ ಇಂಡಿ ತಾಲ್ಲೂಕಿನ ಸುಲೇಮಾನ ಹಂಜಗಿ, ಸಾವಳಗಿಯ ಗಜಾನನ ಸಾವಳಗಿ ವಿರುದ್ಧ ಅಮಸಿದ್ಧ ಅರಕೇರಿ ವಿಜಯಮಾಲೆ ಧರಿಸಿದರು. 

ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ಅನೇಕ ಪೈಲ್ವಾನರು ಕುಸ್ತಿ ಪಂದ್ಯಾವಳಿ ಯಲ್ಲಿ ಭಾಗವಹಿಸಿ ಅಮೋಘ ಪ್ರದರ್ಶನ ನೀಡಿದರು. ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ, ಪುಣೆ ಸೇರಿ ದಂತೆ ಇಂಡಿ, ಹಾರೋಗೇರಿ, ವಿಜಯಪುರ, ಜಮಖಂಡಿ, ಸಾವಳಗಿ, ಹುನ್ನೂರ ಸೇರಿದಂತೆ ವಿವಿಧ ಕಡೆ ಗಳಿಂದ 33ಕ್ಕೂ ಹೆಚ್ಚು ಕುಸ್ತಿ ಪೈಲ್ವಾನರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.