ADVERTISEMENT

‘ನಾನು ರಾಷ್ಟ್ರ ಪಕ್ಷಿ; ಬೇಕಿದೆ ನನಗೆ ರಕ್ಷಣೆ’

ಗರಿಬಿಚ್ಚಿ ನರ್ತಿಸುವ ನವಿಲುಗಳು

ಬಸವರಾಜ ಸಂಪಳ್ಳಿ
Published 6 ಮಾರ್ಚ್ 2017, 8:44 IST
Last Updated 6 ಮಾರ್ಚ್ 2017, 8:44 IST
ವಿಜಯಪುರ: ಪ್ರತಿದಿನ ಮುಂಜಾನೆ ಹೊತ್ತಿನಲ್ಲಿ ನೂರಾರು ನವಿಲುಗಳು ಆಹಾರ ಅರಸುತ್ತಾ ಸ್ವಚ್ಛಂದವಾಗಿ ತಿರುಗಾಡುತ್ತಿರುವ ದೃಶ್ಯ ಇಲ್ಲಿನ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ಕಂಡುಬರುತ್ತಿದೆ.
 
ಪ್ರತಿದಿನ ಬೆಳಿಗ್ಗೆ 6ರಿಂದ 7 ಗಂಟೆ ಸಮಯದಲ್ಲಿ ಗೋಳಗುಮ್ಮಟದ ಆವರಣ ದಲ್ಲಿ ‘ರಾಷ್ಟ್ರಪಕ್ಷಿ’ ನವಿಲುಗಳು ಹುಳು, ಹುಪ್ಪಡಿಗಳನ್ನು ತಿನ್ನುತ್ತಾ, ಕೂಗುತ್ತಾ, ಗರಿಬಿಚ್ಚಿ ನರ್ತಿಸುವ ದೃಶ್ಯ ಸಾಮಾನ್ಯವಾಗಿದೆ. 
 
ಗೋಳಗುಮ್ಮಟ ಆವರಣದಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವ ನೂರಾರು ಮಂದಿ ಈ ನವಿಲುಗಳ ವಿಹಾರವನ್ನು ಕಂಡು ಖುಷಿಯಾಗುತ್ತಿದ್ದಾರೆ. 
 
‘ಮೂರು ವರ್ಷಗಳಿಂದ ಈಚೆಗೆ ಇಲ್ಲಿ ನವಿಲುಗಳು ಕಾಣಸಿಗುತ್ತಿವೆ. ಮೊದಲು ಎಂಟತ್ತು ನವಿಲುಗಳು ಇಲ್ಲಿ ಕಂಡುಬರುತ್ತಿದ್ದವು. ಇದೀಗ ನೂರಕ್ಕೂ ಹೆಚ್ಚು ನವಿಲುಗಳು ಇಲ್ಲಿ ಕಂಡು ಬರುತ್ತಿವೆ’ ಎಂದು ವಾಯುವಿಹಾರಿ ನೀಲಕಂಠ ಅಳ್ಳಗಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೆಳಿಗ್ಗೆ 6 ಗಂಟೆಗೆ ಗೋಳ ಗುಮ್ಮಟದ ಆವರಣದಲ್ಲಿ ವಾಯು ವಿಹಾರಕ್ಕೆ ಜನರು ಬರುತ್ತಿದಂತೆ ನವಿಲುಗಳು ಉದ್ಯಾನದಿಂದ ಕಾಲ್ಕಿತ್ತು, ಪಕ್ಕದಲ್ಲೇ ಇರುವ ಚಿಕ್ಕು ಹಣ್ಣುಗಳ ತೋಟವನ್ನು ಪ್ರವೇಶಿಸಿ, ದಿನಪೂರ್ತಿ ಅಲ್ಲಿಯೇ ಇರುತ್ತವೆ’ಎಂದು ಹೇಳಿದರು.
 
‘ಮಹಿಳೆಯೊಬ್ಬರು ಪ್ರತಿದಿನ ಬೆಳಿಗ್ಗೆ ಈ ನವಿಲುಗಳಿಗೆ ಕಾಳು, ಕಡಿಗಳನ್ನು ಉಣ ಬಡಿಸುತ್ತಿರುವುದು ವಿಶೇಷವಾಗಿದೆ’ ಎಂದು ಅವರು ತಿಳಿಸಿದರು. 
 
‘ಗೋಳಗುಮ್ಮಟ ಆವರಣದಲ್ಲಿ ನವಿಲುಗಳಿಗೆ ಜನರಿಂದ ಯಾವುದೇ ಭಯವಿಲ್ಲ. ಆದರೆ, ಬೀದಿನಾಯಿಗಳ ಹಿಂಡು ನವಿಲುಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ತಿನ್ನುತ್ತಿವೆ. ಹೀಗಾಗಿ ಬೀದಿ ನಾಯಿಗಳು ಆವರಣದೊಳಗೆ ಪ್ರವೇಶಿಸದಂತೆ ಸಂಬಂಧಪಟ್ಟವರು ಅಗತ್ಯಕ್ರಮಕೈಗೊಂಡು. ನವಿಲುಗಳಿಗೆ ನಿರ್ಭೀತ ವಾತಾವರಣ ಕಲ್ಪಿಸಬೇಕು’ ಎಂದು ಅವರು ಹೇಳಿದರು.
 
ಕ್ಯಾಮೆರಾದಲ್ಲಿ ಸೆರೆ: ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಛಾಯಾಗ್ರಾಹಕ ರಾಜು ಡವಳಗಿ ಅವರು ಗೋಳಗುಮ್ಮಟ ಆವರಣದಲ್ಲಿ ನವಿಲುಗಳು ವಿಹರಿಸುತ್ತಿರುವ ದೃಶ್ಯವನ್ನು ಬಹುದಿನಗಳಿಂದ ಶ್ರಮ ಪಟ್ಟು ವೈವಿಧ್ಯಮಯ ಚಿತ್ರಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.