ADVERTISEMENT

ಬಿಜೆಪಿಯಿಂದ ಕಬಡ್ಡಿ ಉತ್ಸವ 24ರಿಂದ

​ಪ್ರಜಾವಾಣಿ ವಾರ್ತೆ
Published 23 ಮೇ 2017, 8:30 IST
Last Updated 23 ಮೇ 2017, 8:30 IST

ವಿಜಯಪುರ: ಪಂ.ದೀನದಯಾಳ ಉಪಾಧ್ಯಾಯರ ಜನ್ಮ ಶತಾಬ್ದಿ ಅಂಗವಾಗಿ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯ 9 ಮಂಡಳಗಳಲ್ಲಿ ಇದೇ 24ರಿಂದ ‘ಕಬಡ್ಡಿ ಉತ್ಸವ’ ನಡೆಸಲಾಗುವುದು ಎಂದು ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರವಿ ಖಾನಾಪುರ ತಿಳಿಸಿದರು.

ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿ ಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದ್ದು, ಹೊನಲು -ಬೆಳಕಿನ ಪಂದ್ಯಾವಳಿ ನಡೆಯಲಿವೆ. ಎಲ್ಲ 9 ಮಂಡಳಗಳಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ, ಅಲ್ಲಿ ಆಯ್ಕೆಯಾದ ತಂಡಗಳು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆದು ಕೊಳ್ಳಲಿವೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜೂನ್ ಮೊದಲ ವಾರದಲ್ಲಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪಂದ್ಯಾವಳಿ ಆಯೋಜಿಸಲಾಗುವುದು. ಮಂಡಳ ವಿಭಾಗದಲ್ಲಿ ಆಯೋಜಿಸಲಾಗುವ ಕಬಡ್ಡಿ ಪಂದ್ಯದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ ಎಂದು ವಿವರಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನಪರ ಯೋಜನೆ, ಸಾಧನೆಗಳನ್ನು ಮೆಚ್ಚಿ ಕೊಂಡಿರುವ ಯುವಜನತೆ ಬಿಜೆಪಿಯತ್ತ ಒಲವು ಬೆಳೆಸಿಕೊಂಡಿದ್ದಾರೆ. ಇದರಿಂದ ಯುವ ಜನರನ್ನು ಪಕ್ಷದತ್ತ ಮತ್ತಷ್ಟು ಸೆಳೆಯಲು ವಿವಿಧ ಕಾರ್ಯಚಟುವಟಿಕೆ ಕೈಗೊಳ್ಳಲಾಗುತ್ತಿದೆ ಎಂದರು.

ADVERTISEMENT

ಬಿಜೆಪಿ ಹಿರಿಯ ನಾಯಕರು, ಯುವ ಮೋರ್ಚಾ ತಂಡಗಳ ನಡುವಣ ವಿಶೇಷ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಈಗಾಗಲೇ ಪಂದ್ಯಾವಳಿ ಆಯೋಜನೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಒನ್ ಬೂತ್ ಟು ಯೂತ್‌: ಬೂತ್ ಮಟ್ಟ ದಲ್ಲಿ ಪಕ್ಷ ಸಂಘಟನೆಗೆ ಹಲ ಕಾರ್ಯ ಚಟುವಟಿಕೆಗಳನ್ನು ಹಾಕಿಕೊಳ್ಳ ಲಾಗಿದೆ. ಇದರಡಿಯಲ್ಲಿ ಪ್ರತಿಯೊಂದು ಬೂತ್‌ಗೆ ಇಬ್ಬರು ಉತ್ಸಾಹಿ ಯುವ ನಾಯಕರನ್ನು ಪ್ರಮುಖ ಹಾಗೂ ಸಹ ಪ್ರಮುಖರನ್ನಾಗಿ ನೇಮಕ ಮಾಡಲಾಗುವುದು.

ಎಲ್ಲ ಬೂತ್‌ಗಳಲ್ಲಿಯೂ ಈ ತೆರನಾದ ನೇಮಕಾತಿ ಪ್ರಕ್ರಿಯೆ ನಡೆಯ ಲಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವುದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶಯದಂತೆ 150ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ದೃಷ್ಟಿಯಿಂದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು ಖಾನಾಪುರ ವಿವರಿಸಿದರು.

ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಶರತ್ ಬಿರಾದಾರ, ಮಂಚಾಲೇಶ್ವರಿ ನಾಯ್ಕ್‌, ಕೃಷ್ಣಾ ಗುನ್ನಾಳಕರ, ಬಾಳಪ್ಪ ಗೂಗಿಹಾಳ, ಶ್ರೀಕಾಂತ ರಾಠೋಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.