ADVERTISEMENT

‘ಮಹಿಳೆಯರಿಗೆ ಕಾನೂನು ಜ್ಞಾನ ಅಗತ್ಯ’

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:54 IST
Last Updated 17 ಜುಲೈ 2017, 5:54 IST

ಬಸವನಬಾಗೇವಾಡಿ:  ‘ನಾವು ಮಹಿಳೆಯರು ಎಂದು ಕೈಕಟ್ಟಿ ಕುಳಿತುಕೊಳ್ಳದೇ ಕಾನೂನಿನ ಬಗ್ಗೆ ಸರಿಯಾಗಿ ತಿಳಿದುಕೊಂಡು ನಿಮಗಾದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸಿ ಸರಿಪಡಿಸಿಕೊಳ್ಳ ಬೇಕು’  ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ  ರೇಣುಕಾ ರಾಯ್ಕರ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅನಕ್ಷರಸ್ಥರಿಗೆ ಅನ್ಯಾಯವಾದಾಗ ಏನು ಮಾಡಬೇಕು ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಅಂತಹವರು ಕಾನೂನು ಸೇವಾ ಸಮಿತಿಯನ್ನು ಸಂಪ ರ್ಕಿಸಿ ಪರಿಹಾರ ಕಂಡು ಕೊಳ್ಳಬೇಕು. ಸೇವಾ ಸಮಿತಿಯು ಕಾನೂನಿನ ಜ್ಞಾನ ನೀಡುವುದರೊಂದಿಗೆ ಯಾವ ಯೋಜನೆಯನ್ನು ಹೇಗೆ ಪಡೆದು ಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡುತ್ತದೆ. ಅದರ ಲಾಭವನ್ನು ಪಡೆದುಕೊಳ್ಳಬೇಕು’ ಎಂದರು.

ADVERTISEMENT

ಪೊಲೀಸ್‌ ಅಧಿಕಾರಿಗಳು ಇಲ್ಲವೇ ಸಿಬ್ಬಂದಿ ದೂರು ಸ್ವೀಕರಿಸಲು ನಿರಾಕರಿಸಿದರೆ ನೇರವಾಗಿ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು. ಕಾನೂನನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಬಾರದು. ಕಾನೂನಿಗೆ ತಲೆಬಾಗಿ ನಡೆದರೆ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ದೇವದಾಸಿ ಪುನರ್ವಸತಿ ಯೋಜ ನಾಧಿಕಾರಿ ಕೆ.ಕೆ.ದೇಸಾಯಿ,  ದೇವದಾಸಿ ಯರಿಗಾಗಿ ಸರ್ಕಾರ ಮಾಸಾಸನ, ನಿವೇಶನ, ವಿವಿಧ ಸ್ವಯಂ ಉದ್ಯೋಗ ಕ್ಕಾಗಿ ಸಾಲ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಂಡು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ವಕೀಲ ಪಿ.ಬಿ ಹೊಸಮನಿ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಆರ್‌.ಬಿ.ಗಣಕುಮಾರ, ವಕೀಲರಾದ ಬಿ.ಆರ್.ಅಡ್ಡೊಡಗಿ,  ಎನ್‌.ಬಿ.ಕುಳಗೇರಿ, ಎನ್‌. ಎಸ್‌. ಬಿರಾದಾರ, ಎಚ್‌.ಎಸ್‌.ಗುರಡ್ಡಿ, ಎಂ.ಎಸ್‌.ಗೊಳಸಂಗಿ, ಎಂ.ಎಂ. ದೇವರಮನಿ ಇತರರು ಇದ್ದರು. ರೇಣುಕಾ ಇಂಗಳೇಶ್ವರ ಪ್ರಾರ್ಥನಾ ಗೀತೆ ಹಾಡಿದರು. ವಕೀಲ  ಎನ್‌.ಎಸ್‌.ಪಾಟೀಲ ಸ್ವಾಗತಿಸಿದರು. ಆರ್‌.ವಿ.ಗುತ್ತರಗಿಮಠ ವಂದಿಸಿದರು. ಅಶೋಕ ಮೂರಮಾನ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.